Advertisement
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಎಚ್.ಆರ್. ಬಸವರಾಜಪ್ಪ ಮಾತನಾಡಿ, ಕಳೆದ 10 ತಿಂಗಳಿಂದ ಕೃಷಿ ಕಾಯ್ದೆಗಳನ್ನು ವಿರೋ ಧಿಸಿ, ದೆಹಲಿಯಲ್ಲಿ ನಮ್ಮ ರೈತರು ಪ್ರತಿಭಟನೆ ಮಾಡುತ್ತಿದ್ದರೂ ಕೂಡ ಸರ್ಕಾರ ಮೌನ ವಹಿಸಿದೆ. ಇದೊಂದು ಅತ್ಯಂತ ನಾಚಿಕೆಗೇಡಿನ ವಿಷಯವಾಗಿದೆ. ಇಡೀ ಪ್ರಪಂಚದಲ್ಲಿ ಇಂತಹ ಪ್ರತಿಭಟನೆಗೆ ಸರ್ಕಾರಗಳು ಉತ್ತರ ಹೇಳದಿರುವುದು ಅತ್ಯಂತ ಅವಮಾನಕರವಾಗಿದೆ ಎಂದರು. ಕೇಂದ್ರ ಸರ್ಕಾರ ರೈಲ್ವೆ, ಅಂಚೆ, ವಿಮಾನ ಸೇರಿದಂತೆ ಎಲ್ಲ ಕ್ಷೇತ್ರಗಳನ್ನೂ ಖಾಸಗೀಕರಣಕ್ಕೆ ಒಪ್ಪಿಸುತ್ತಿದೆ. ಈಗ ಕೃಷಿ ಕ್ಷೇತ್ರವೂ ಕೂಡ ಖಾಸಗೀಕರಣವಾಗುತ್ತಿದ್ದು, ರೈತರು ಅನಾಥರಾಗುವ ಕಾಲ ದೂರವಿಲ್ಲ. ಬೀಜ, ಗೊಬ್ಬರ, ತಂತ್ರಜ್ಞಾನ ಸೇರಿದಂತೆ ಎಲ್ಲವೂ ಕೂಡ ಖಾಸಗೀಕರಣವಾಗುತ್ತದೆ. ಕೃಷಿ ಪಾರಂಪರಿಕವಾದದ್ದು, ಇಂತಹ ಕೃಷಿಯನ್ನು ಈಗ ಖಾಸಗಿ ಕಂಪೆನಿಗಳ ಕೈಗೆ ಕೊಟ್ಟು ಅವರ ಬದುಕನ್ನು ಸರ್ಕಾರ ಕಸಿದುಕೊಳ್ಳುತ್ತಿದೆ. ರೈತ ಕೃಷಿ ಶಕ್ತಿಯನ್ನೇ ಕಳೆದುಕೊಳ್ಳುವ ಕಾಲ ದೂರವಿಲ್ಲ. ಇದೊಂದು ರೈತ ಸಂಸ್ಕೃತಿಯ ನಾಶ ಎಂದರು. ಕೆ.ಟಿ. ಗಂಗಾಧರ್ ಮಾತನಾಡಿ, ದೆಹಲಿಯಲ್ಲಿ ರೈತರು ನಡೆಸುತ್ತಿರುವ ಚಳವಳಿ ಐತಿಹಾಸಿಕವಾದದ್ದು, ಇದೊಂದು ಅಹಿಂಸೆಯ ಚಳವಳಿ. ಹಗಲು- ರಾತ್ರಿ ಚಳವಳಿ ನಡೆಸುತ್ತಿದ್ದಾರೆ. ಇಂತಹ ಚಳವಳಿಯನ್ನು ನಮ್ಮ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಪ್ರಾಯೋಜಿತ ಎಂದು ಕರೆಯುತ್ತಿರುವುದು ಅತ್ಯಂತ ದುರದೃಷ್ಟಕರ. ಹಾಗೆ ರೈತರನ್ನು ಜರಿಯುವ ಕೆಲಸಕ್ಕೆ ಬೊಮ್ಮಾಯಿಯವರಂತಹ ಭಾಷಾ ಪಂಡಿತರು ಮಾತನಾಡುತ್ತಿರುವುದು ಅತ್ಯಂತ ಹೇಯಕರ. ಚಳವಳಿಯನ್ನೇ ಮರೆತ ನಾಯಕರಿವರು ಎಂದು ದೂರಿದರು.
Related Articles
Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 10 ತಿಂಗಳಿಂದ ದೆಹಲಿಯಲ್ಲಿ ದೇಶದ ಎಲ್ಲಾ ಭಾಗದ ರೈತರು ಚಳುವಳಿ ಮಾಡುತ್ತಿದ್ದಾರೆ. ಆದರೆ ಸೌಜನ್ಯಕ್ಕಾದರೂ ಈ ಕಿವುಡು ಸರ್ಕಾರ ತಿದ್ದುಪಡಿ ಮಾರ್ಪಾಡನ್ನು ಸಂವಿಧಾನಬದ್ಧವಾಗಿ ಮಾಡಲು ಸಲಹೆ- ಸೂಚನೆ ತೆಗೆದುಕೊಳ್ಳುತ್ತಿಲ್ಲ. ಇಂತಹ ಸರ್ಕಾರಗಳಿಗೆ ಬುದ್ಧಿ ಕಲಿಸಬೇಕಾದರೆ ನಾವು ಅನಿವಾರ್ಯವಾಗಿ ಬೀದಿಗಿಳಿದು ಹೋರಾಟ ಮಾಡಬೇಕಾಗಿದೆ ಎಂದು ಹೇಳಿದರು. ತಾಲೂಕು ಗೌರವಾಧ್ಯಕ್ಷ ಪ್ಯಾಟಿ ಈರಪ್ಪ ಮಾತನಾಡಿ, ಕುಡಿಯುವ ನೀರಿಗೆ ಮೀಟರ್ ಜೋಡಿಸಿ ತೆರಿಗೆಯನ್ನು ಇಲ್ಲಿಯವರೆಗೂ ಆಡಳಿತ ನಡೆಸಿದ ಯಾವ ಸರ್ಕಾರಗಳೂ ಹಾಕಿಲ್ಲ. ಆದರೆ ಅ ಧಿಕಾರದಲ್ಲಿರುವ ಈ ಸರ್ಕಾರ ಇಂತಹ ದುರಾಲೋಚನೆ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ. ಇಂತಹ ಲಜ್ಜೆಗೆಟ್ಟ ಸರ್ಕಾರಗಳಿಗೆ ಬಿಸಿ ಮುಟ್ಟಿಬೇಕಾಗಿದೆ. ಈಗ ರೈತಸಂಘದ ಒಕ್ಕೂಟಗಳು ಕರೆದಿರುವ ಭಾರತ್ ಬಂದ್‌ಗೆ ಶಿಕಾರಿಪುರ ತಾಲೂಕನ್ನು ರಾಜ್ಯ ರೈತಸಂಘವು ಸಂಪೂರ್ಣ ಬೆಂಬಲ ನೀಡುವುದರ ಜೊತೆ ಶಿರಾಳಕೊಪ್ಪ ಪಟ್ಟಣವನ್ನು ಬಂದ್ ಮಾಡಲು ಸಂಘ ತೀರ್ಮಾನಿಸಿದೆ ಎಂದರು. ದೇಶದ ರೈತರ ಆದಾಯವನ್ನು ದ್ವಿಗುಣ ಮಾಡುವುದಾಗಿ ಹೇಳಿ ಆಡಳಿತ ನಡೆಸುತ್ತಿರುವ ಸರ್ಕಾರಕ್ಕೆ 7 ವರ್ಷ ಕಳೆದಿದೆ. ಯಾವಾಗ ರೈತರ ಆದಾಯವನ್ನು ದ್ವಿಗುಣ ಮಾಡುವುದು ಈ ವಿಷಯ ಹೇಳಿಕೆಗೆ ಮಾತ್ರ ಸೀಮಿತವಾಗಿದೆ. ಕಾರ್ಯರೂಪಕ್ಕೆ ಬರಲಿಲ್ಲ ಎಂದು ಜಿಲ್ಲಾ ಉಪಾಧ್ಯಕ್ಷ ಪುಟ್ಟನ ಗೌಡ ಅಸಮಾಧಾನ ವ್ಯಕ್ತಪಡಿಸಿದರು. ಸೊರಬ ತಾಲೂಕು ರೈತಸಂಘದ ಅಧ್ಯಕ್ಷ ಹಾಲಪ್ಪ ಗೌಡ, ಗುತ್ಯಪ್ಪ ಕೋಲ್ಗುಣಸಿ, ಗುರು ಶಿರಾಳಕೊಪ್ಪ, ಬಸವರಾಜಪ್ಪ ಬಳ್ಳಿಗಾವಿ ಇದ್ದರು.