Advertisement

ಹುದ್ದೆ ಕಾಯಂಗಾಗಿ ಗಾಂಧಿಗಿರಿ: ಕೋವಿಡ್ -19 ನಂತರ ಗುತಿಗೆ ವೈದ್ಯರ ಸಾಮೂಹಿಕ ರಾಜಿನಾಮೆ?

06:21 PM Apr 24, 2020 | mahesh |

ಬೆಂಗಳೂರು: ವಿಶ್ವವನ್ನು ಕಾಡುತ್ತಿರುವ ಕೋವಿಡ್ -19 ಮಹಾಮಾರಿ ನಿಯಂತ್ರಿಸಲು ವೈದ್ಯರು ಮನೆ ಕುಟುಂಬ ಬಿಟ್ಟು ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಸೇವೆಗೆ ಇಡೀ ದೇಶವೇ ಚಪ್ಪಾಳೆ ತಟ್ಟಿ ಅಭಿನಂದನೆ ಸಲ್ಲಿಸಿದೆ. ಆದರೆ, ರಾಜ್ಯದಲ್ಲಿ ಕೋವಿಡ್ -19 ಮಹಾಮಾರಿ ವಿರುದ್ಧ ಹೋರಾಡುತ್ತಿರುವ ಗುತ್ತಿಗೆ ವೈದ್ಯರನ್ನು ರಾಜ್ಯ ಸರ್ಕಾರ ನಿರ್ಲಕ್ಷ ಮಾಡುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ತಮ್ಮನ್ನು ಕಡೆಗಣಿಸಿರುವ ಸರ್ಕಾರದ ಗಮನ ಸೆಳೆಯಲು ಗುತ್ತಿಗೆ ವೈದ್ಯರು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಶ್ರೀರಾಮುಲು ಅವರಿಗೆ ಪತ್ರ ಬರೆದು, ತಮ್ಮ ಸೇವೆಯನ್ನು ಕಾಯಂಗೊಳಿಸುವಂತೆ ಮನವಿ ಮಾಡಿದ್ದಾರೆ.

Advertisement

ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಗಾಂಧಿಗಿರಿ ಆರಂಭಿಸಿರುವ ಅವರು ಪ್ರತಿಭಟನಾರ್ಥವಾಗಿ ಮಹಾಮಾರಿ ಕೋವಿಡ್ -19 ನಿಯಂತ್ರಿಸುವ ಸೇವೆಯಲ್ಲಿ ನಿರತವಾಗಿದ್ದು, ಕೋವಿಡ್ -19 ನಿಯಂತ್ರಣದ ನಂತರವೂ ಸರ್ಕಾರ ತಮ್ಮ ಬೇಡಿಕೆ ಈಡೇರಿಸದಿದ್ದರೆ ಸಾಮೂಹಿಕ ರಾಜಿನಾಮೆ ಸಲ್ಲಿಸಲು ಚಿಂತನೆ ನಡೆಸಿದ್ದಾರೆ. ಸರ್ಕಾರ ನೇಮಕ ಮಾಡಿಕೊಳ್ಳುವ
ಕಾಯಂ ವೈದ್ಯರು ಹಾಗೂ ಗುತ್ತಿಗೆ ಆಧಾರದ ವೈದ್ಯರಿಗೆ ಸಂಬಳದಲ್ಲಿ ಎರಡು ಪಟ್ಟು ವ್ಯತ್ಯಾಸ ಇದೆ. ಕಾಯಂ ವೈದ್ಯರಿಗೆ 80,000 ರೂಪಾಯಿ ಸಂಬಳ ನೀಡಲಾಗುತ್ತಿದ್ದು, ಗುತ್ತಿಗೆ ವೈದ್ಯರಿಗೆ 45,000 ಸಂಬಳ ನೀಡಲಾಗುತ್ತಿದೆ. ಗುತ್ತಿಗೆ ವೈದ್ಯರಿಗೆ ಯಾವುದೇ ರೀತಿಯ ಪ್ರಯಾಣ ಭತ್ಯೆ ಹಾಗೂ ದಿನ ಭ್ಯತ್ಯೆ ದೊರೆಯುವುದಿಲ್ಲ. ಕೋವಿಡ್ -19 ವಿರುದ್ಧದ ಹೋರಾಟದ  ಸಂದರ್ಭದಲ್ಲಿಯೂ ಯಾವುದೇ ರೀತಿಯ ವಿಶೇಷ ಭತ್ಯೆ ನೀಡದಿರುವುದು ಗುತ್ತಿಗೆ ವೈದ್ಯರ ಅಸಮಾಧಾನಕ್ಕೆ ಕಾರಣವಾಗಿದೆ.

ಕೋವಿಡ್ -19 ವಾರಿಯರ್ಸ್
ರಾಜ್ಯ ಸರ್ಕಾರ ಕೊರೊನಾ ನಿಯಂತ್ರಿಸಲು ತಾತ್ಕಾಲಿಕವಾಗಿ ವೈದ್ಯರನ್ನು ನೇಮಿಸಿಕೊಂಡಿದ್ದು, ಅವರಿಗೆ 60,000 ರೂ. ಸಂಬಳ ನೀಡಲಾಗುತ್ತಿದ್ದು, ಗುತ್ತಿಗೆ
ವೈದ್ಯರು 3- 7 ವರ್ಷದಿಂದ ಸೇವೆ ಸಲ್ಲಿಸಿದರೂ ಸಂಬಳದಲ್ಲಿ ಯಾವುದೇ ಹೆಚ್ಚಳ ಮಾಡಲಾಗಿಲ್ಲ. ಹೀಗಾಗಿ ಸರ್ಕಾರದ ನಿರ್ಲಕ್ಷ್ಯ ಧೋರಣೆ ವಿರುದ್ಧ ಕೋವಿಡ್ -19 ನಿಯಂತ್ರಣ ಸಂದರ್ಭದಲ್ಲಿಯೂ ಕೆಲಸ ಮಾಡುತ್ತ ಗಾಂಧಿಗಿರಿ ನಡೆಸಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next