ಲಾಹೋರ್: ಮುಂಬಯಿ ಭಯೋತ್ಪಾದನಾ ದಾಳಿಯ ರೂವಾರಿ, ಜಮಾತ್ ಉದ್ ದಾವಾದ ಮುಖ್ಯಸ್ಥ ಹಫೀಜ್ ಸಯೀದ್ ನಿವಾಸದ ಹೊರಭಾಗದಲ್ಲಿ ಸಂಭವಿಸಿದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಪೊಲೀಸರು ಗುರುವಾರ (ಜೂನ್ 24) ಪಂಜಾಬ್ ಪ್ರಾಂತ್ಯದ ವಿವಿಧ ನಗರಗಳಲ್ಲಿ ದಾಳಿ ನಡೆಸಿ ಹಲವರನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಬಾವಿಗೆ ಬಿದ್ದ ಮಕ್ಕಳನ್ನು ರಕ್ಷಿಸಲು ಹಾರಿದ ತಾಯಿ: ಮೂವರು ಸಾವು
ಹಫೀಜ್ ಸಯೀದ್ ಮನೆಯ ಹೊರಭಾಗದಲ್ಲಿ ಸಂಭವಿಸಿದ್ದ ಸ್ಫೋಟ ಪ್ರಕರಣದಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದು, 21 ಮಂದಿ ಗಾಯಗೊಂಡಿದ್ದರು. ಸಯೀದ್ ಮನೆಯ ಕಾವಲು ಕಾಯುತ್ತಿದ್ದ ಕೆಲವು ಪೊಲೀಸ್ ಅಧಿಕಾರಿಗಳು ಸ್ಫೋಟದಲ್ಲಿ ಗಾಯಗೊಂಡಿರುವುದಾಗಿ ವರದಿ ವಿವರಿಸಿದೆ.
ಸ್ಫೋಟದ ತೀವ್ರತೆಗೆ ಹಫೀಜ್ ಸಯೀದ್ ಮನೆಯ ಕಿಟಕಿ ಗಾಜು, ಗೋಡೆಗಳು ಹಾನಿಗೊಳಗಾಗಿದ್ದು, ಸ್ಫೋಟ ಘಟನೆ ಬಗ್ಗೆ ಯಾವುದೇ ಸಂಘಟನೆಗಳು ಈವರೆಗೂ ಹೊಣೆ ಹೊತ್ತುಕೊಂಡಿಲ್ಲ ಎಂದು ವರದಿ ಹೇಳಿದೆ.
ಜಿಯೋ ಟಿವಿ ವರದಿ ಪ್ರಕಾರ, ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಪೊಲೀಸ್ ಇಲಾಖೆಯ ಭಯೋತ್ಪಾದಕ ನಿಗ್ರಹ ದಳ (ಸಿಟಿಡಿ) ಇಂದು ಪಂಜಾಬ್ ನಗರದ ವಿವಿಧೆಡೆ ದಾಳಿ ನಡೆಸಿರುವುದಾಗಿ ತಿಳಿಸಿದೆ.