ಕಾರವಾರ: ಪ್ರಾಥಮಿಕ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪದವೀಧರ ಶಿಕ್ಷಕರನ್ನು ಪದವೀಧರ ಶಿಕ್ಷಕರೆಂದು ಪರಿಗಣಿಸಿ ವೃಂದ ಮತ್ತು ನೇಮಕಾತಿ ನಿಯಮ ಬದಲಾಯಿಸಲು ಆಗ್ರಹಿಸಿ ಕಾರವಾರ ಶೈಕ್ಷಣಿಕ ಜಿಲ್ಲೆಯ ಪದವೀಧರ ಶಿಕ್ಷಕರು ಬೃಹತ್ ಪ್ರತಿಭಟನೆಯನ್ನು ನಡೆಸಿದರು.
ಸಾವಿರಾರು ಶಿಕ್ಷಕರು ತರಗತಿ ಬಹಿಷ್ಕರಿಸಿ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿ ಬಳಿ ಸಮಾವೇಶಗೊಂಡರು. ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ತಾಲೂಕಿನಿಂದ ಆಗಮಿಸಿದ ಕಿಪ್ರಾ ಶಾಲಾ ಶಿಕ್ಷಕರು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಡಿ ಪದವೀಧರ ಶಿಕ್ಷಕರ ಸಂಘದವರು ವಿವಿಧ ಬೇಡಿಕೆಗಳನ್ನು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಸಲ್ಲಿಸಿದರು.
ಕಾರವಾರ ಶೈಕ್ಷಣಿಕ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣ ಗಾಂವಕರ್ ಮಾತನಾಡಿ, ಶಿಕ್ಷಕರ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಶಾಲಾ ತರಗತಿ ಬಹಿಷ್ಕರಿಸಿ ಪ್ರತಿಭಟನೆ ಮಾಡಿ ಸರ್ಕಾರದ ಗಮನಸೆಳೆಯುತ್ತಿದ್ದೇವೆ. ನಮಗೆ ಅರ್ಹತೆ ಇದೆ. ಅರ್ಹತೆ ಆಧರಿಸಿ ನಾವು 7, 8ನೇ ತರಗತಿ ತನಕ ವಿದ್ಯಾರ್ಥಿಗಳಿಗೆ ಕಲಿಸಲು ಅವಕಾಶ ಕೇಳುತ್ತಿದ್ದೇವೆ. ಹಾಗೆ ಅರ್ಹತೆ ಇರುವ ಕಾರಣ ಹುದ್ದೆ ಬಡ್ತಿ, ವೇತನ ಹೆಚ್ಚಳಕ್ಕೆ ಆಗ್ರಹಿಸುತ್ತಿದ್ದೇವೆ. ಹಳೆಯ ಪಿಂಚಣಿ ಮಾದರಿ ಅನುಸರಿಲು ಸರ್ಕಾರವನ್ನು ಒತ್ತಾಯಿಸುತ್ತಿದ್ದೇವೆ. ಮೂರು ವರ್ಷದಿಂದ ಶಿಕ್ಷಕರ ವರ್ಗಾವಣೆಯಾಗಿಲ್ಲ. ಈಗ ವರ್ಗಾವಣೆ ನಡೆದಿದೆ. ಇದು ಮುಗಿದ ನಂತರ ಅಕ್ಟೋಬರ್‌ನಲ್ಲಿ ಮತ್ತೂಮ್ಮೆ ಕೇವಲ ಕೋರಿಕೆ ವರ್ಗಾವಣೆ ಮಾಡಬೇಕೆಂದು ಸರ್ಕಾರವನ್ನು ಆಗ್ರಹಿಸುತ್ತಿದ್ದೇವೆ ಎಂದರು.
ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಎಲ್ಕೆಜಿ ಹಾಗೂ ಯುಕೆಜಿ ಆರಂಭಿಸಬೇಕು. ಹೆಚ್ಚುವರಿ ಶಿಕ್ಷಕರು ಎಂಬುದೇ ಅವೈಜ್ಞಾನಿಕ. ಪ್ರತಿ ವಿಷಯಕ್ಕೆ ಒಬ್ಬ, ತರಗತಿಗೆ ಒಬ್ಬ ಶಿಕ್ಷಕರನ್ನು ಶಾಲೆಗಳಿಗೆ ನೀಡಬೇಕು. ಶಿಕ್ಷಕ ವಿದ್ಯಾರ್ಥಿ ಅನುಪಾತ ಕೈಬಿಟ್ಟು, ಮುಖ್ಯೋಪಾಧ್ಯಾಯ, ದೈಹಿಕ ಶಿಕ್ಷಕರನ್ನು ಹೊರತುಪಡಿಸಿ ವಿಷಯಕ್ಕೆ ಒಬ್ಬ ಶಿಕ್ಷಕರನ್ನು ಶಾಲೆಗಳಿಗೆ ನೀಡಬೇಕು. ಆಗ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ದೈಹಿಕ ಶಿಕ್ಷಕರು, ಮುಖ್ಯೋಪಾಧ್ಯಾಯರನ್ನು ಬಿಟ್ಟು ಶಾಲೆಯಲ್ಲಿರುವ ಶಿಕ್ಷಕರು ವಿಷಯವಾರು ಹೆಚ್ಚಿನ ಸಂಖ್ಯೆಯಲ್ಲಿದ್ದರೆ ಮಾತ್ರ ಹೆಚ್ಚುವರಿ ಎಂದು ಗುರುತಿಸಬೇಕು. ಆರನೇ ವೇತನ ಆಯೋಗದ ಶಿಪಾರಸ್ಸಿನಂತೆ 10, 15 ವರ್ಷಕ್ಕೊಮ್ಮೆ, 20, 25 ಮತ್ತು 30 ವರ್ಷಕ್ಕೊಮ್ಮೆ ಬಡ್ತಿ ನೀಡಬೇಕು. ಹತ್ತು ವರ್ಷ ಸೇವೆಯ ನಂತರ ಪ್ರತಿ 5 ವರ್ಷಕ್ಕೊಮ್ಮೆ ಶಿಕ್ಷಕರಿಗೆ ಬಡ್ತಿ ನೀಡಬೇಕು. ಪದವೀಧರ ಶಿಕ್ಷಕರು ಉಪ ನಿರ್ದೇಶಕ ಹುದ್ದೆ ಏರುವತನಕ ಬಡ್ತಿ ಕೊಡುವ ಪದ್ಧತಿ ಇರಬೇಕು. ಗ್ರಾಮೀಣ ಕೃಪಾಂಕ ಶಿಕ್ಷಕರ ವಜಾ ಆದ ಸೇವೆಯನ್ನು ಸತತ ಸೇವೆ ಎಂದು ಪರಿಗಣಿಸಿ ಆರ್ಥಿಕ ಸೌಲಭ್ಯ ಮತ್ತು ಇನ್ನಿತರ ಸೇವಾ ಸೌಲಭ್ಯ ನೀಡಬೇಕೆಂದು ಆಗ್ರಹಿಸಿದರು. ಇದು ನಮ್ಮ ಹಕ್ಕೊತ್ತಾಯ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಎನ್ .ಎಸ್. ನಾಯ್ಕ ಹೇಳಿದರು.
ಮುಂದಿನ ಹೋರಾಟ: ಸರ್ಕಾರ ಪದವೀಧರ ಶಿಕ್ಷಕರ ಬೇಡಿಕೆಗೆ ಮಣಿಯದಿದ್ದರೆ ಸೆ.5 ರಂದು ಶಿಕ್ಷಕರ ದಿನಾಚರಣೆ ಬಹಿಷ್ಕರಿಸಲಾಗುವುದು, ಅದೇ ದಿನ ವಿಧಾನಸೌಧ ಚಲೋ ಹಮ್ಮಿಕೊಳ್ಳುವುದಾಗಿ ಶಿಕ್ಷಕರು ಪ್ರಕಟಿಸಿದರು. ಬೇಡಿಕೆಗಳ ಮನವಿ ಪತ್ರವನ್ನು ಡಿಡಿಪಿಐ ಕಚೇರಿ ಶಿಕ್ಷಣಾಧಿಕಾರಿ ನಾರಾಯಣ ನಾಯಕರಿಗೆ ಸಲ್ಲಿಸಿದರು. ನಂತರ ಜಿಲ್ಲಾಧಿಕಾರಿ ಕಚೇರಿಯ ಬಳಿ ಅಪರ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ್‌ಗೆ ಸಲ್ಲಿಸಿದರು. ಬೇಡಿಕೆಗಳನ್ನು ಸರ್ಕಾರಕ್ಕೆ ಕಳುಹಿಸುವುದಾಗಿ ಹೇಳಿದರು. ಪ್ರತಿಭಟನೆಯಲ್ಲಿ ಸಾವಿರಾರು ಶಿಕ್ಷಕ ಶಿಕ್ಷಕಿಯರು ಭಾಗವಹಿಸಿದ್ದರು.