Advertisement

ಶಿಕ್ಷಕರಿಂದ ಬೃಹತ್‌ ಪ್ರತಿಭಟನೆ

10:17 AM Jul 10, 2019 | Suhan S |

ಚಿಕ್ಕೋಡಿ: ಪ್ರಾಥಮಿಕ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುವ ಶಿಕ್ಷಕರ ವಿವಿಧ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಸಾವಿರಾರು ಶಿಕ್ಷಕರು ನಗರದಲ್ಲಿ ಬೃಹತ್‌ ಪ್ರತಿಭಟನೆ ನಡಿಸಿ ಉಪವಿಭಾಗಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮಂಗಳವಾರ ಮನವಿ ಸಲ್ಲಿಸಿದರು.

Advertisement

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಜಿ.ಎಂ.ಹಿರೇಮಠ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಚಿಕ್ಕೋಡಿ, ಗೋಕಾಕ, ಮೂಡಲಗಿ, ಅಥಣಿ, ಕಾಗವಾಡ, ನಿಪ್ಪಾಣಿ, ಹುಕ್ಕೇರಿ, ರಾಯಬಾಗ ವಲಯದ ಸುಮಾರು ನಾಲ್ಕು ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕರು ನಗರದ ಶಾಸಕರ ಮಾದರಿ ಶಾಲಾ ಮೈದಾನದಲ್ಲಿ ಪಾಲ್ಗೊಂಡು ಅಲ್ಲಿಂದ ಬಸವ ಸರ್ಕಲ್ನಲ್ಲಿ ಮಾನವ ಸರಪಳಿ ನಿರ್ಮಿಸಿ ನಂತರ ಮಿನಿವಿಧಾನಸೌಧಕ್ಕೆ ತೆರಳಿ ಮನವಿ ಸಲ್ಲಿಸಿದರು.

ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಜಿ.ಎಂ.ಹಿರೇಮಠ ಮಾತನಾಡಿ, ರಾಜ್ಯ ಕಾರ್ಯಕಾರಿ ಸಮಿತಿ ತೀರ್ಮಾನದಂತೆ ಪ್ರಾಥಮಿಕ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಾಲಿ ಪದವೀಧರ ಪ್ರಾಥಮಿಕ ಶಾಲೆ ಶಿಕ್ಷಕರನ್ನು ಪದವೀಧರ ಶಿಕ್ಷಕರೆಂದು ಪರಿಗಣಿಸಬೇಕು. ಪ್ರಾಥಮಿಕ ಶಾಲಾ ಶಿಕ್ಷಕರ ವೇತನ ಶ್ರೇಣಿ ನಿಗದಿಗೊಳಿಸಬೇಕು. ನೂತನ ಪಿಂಚಣಿ ಯೋಜನೆ ರದ್ದುಗೊಳಿಸಬೇಕು. ಹಳೆ ಪಿಂಚಣಿ ಯೋಜನೆ ಮುಂದುವರೆಸಬೇಕು. ಕಳೆದ ಮೂರು ವರ್ಷಗಳಿಂದ ಶಿಕ್ಷಕರ ವರ್ಗಾವಣೆ ಆಗದೇ ಇರುವುದರಿಂದ ಈಗ ವರ್ಗಾವಣೆ ಪ್ರಕ್ರಿಯೆ ಆರಂಭವಾಗಿದೆ. ಈ ಪ್ರಕ್ರಿಯೆ ಮುಗಿದ ತಕ್ಷಣ ಅಕ್ಟೋಬರ್‌ ತಿಂಗಳಲ್ಲಿ ಮತ್ತೂಮ್ಮೆ ಕೋರಿಕೆ ವರ್ಗಾವಣೆ ನಡೆಸಬೇಕು. ರಾಜ್ಯದ ಎಲ್ಲ ಪ್ರಾಥಮಿಕ ಶಾಲೆಗಳಲ್ಲಿ ಎಲ್ಕೆಜಿ, ಯುಕೆಜಿ ಆರಂಭಿಸಲು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಎಸ್‌.ಎಂ.ಲೋಕನ್ನವರ ಮಾತನಾಡಿ, ಶಿಕ್ಷಕರ ವಿವಿಧ ಬೇಡಿಕೆಗಳಿಗೆ ಮೂರು ಹಂತಗಳಲ್ಲಿ ಹೋರಾಟ ಮಾಡಲು ಶಿಕ್ಷಕರ ಸಂಘ ನಿರ್ಧರಿಸಿದೆ. ಈಗಾಗಲೇ ಮೊದಲ ಹಂತದಲ್ಲಿ ಆಯಾ ವಲಯಗಳಲ್ಲಿ ಶಿಕ್ಷಕರು ಹೋರಾಟ ಮಾಡಿದ್ದಾರೆ. ಎರಡನೆ ಹಂತದಲ್ಲಿ ಜಿಲ್ಲಾ ಹಂತದಲ್ಲಿ ಹೋರಾಟ ಮಾಡಿ ಮನವಿ ಸಲ್ಲಿಸಲಾಗಿದೆ. ಮೂರನೆ ಹಂತದಲ್ಲಿ ಶಿಕ್ಷಕರ ದಿನಾಚರಣೆ ನಿಮಿತ್ತ ಸೆ. 5ರಂದು ಬೆಂಗಳೂರು ಚಲೋ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದರು.

ಈ ಸಂದರ್ಭದಲ್ಲಿ ಬಿ.ಬಿ. ಬಾಯನ್ನವರ, ವೈ.ಎಸ್‌. ಬುಡ್ಡಗೋಳ, ಎಸ್‌.ಎ. ಖಡ್ಡ, ಆರ್‌.ಕೆ. ಕಾಂಬಳೆ, ಎನ್‌.ಜಿ. ಪಾಟೀಲ, ಜಿ.ಎಂ.ಕಾಂಬಳೆ, ಸಿ.ಬಿ. ಅರಭಾವಿ, ಎಸ್‌.ಎನ್‌. ಬೆಳಗಾವಿ, ಬಸವರಾಜ ಅಮ್ಮಿನಭಾವಿ, ಎನ್‌.ಎಸ್‌. ಕಾಂಬಳೆ, ಕಾವೇರಿ ಹಿಪ್ಪರಗಿ, ಸುಜಾತ ಮೂಡಲಗಿ, ಎಸ್‌.ಎಸ್‌. ಕುಂದರಗಿ, ಎಸ್‌.ಎಸ್‌.ಧುಪದಾಳ, ಎಸ್‌.ಜಿ.ಮೊಮಿನ, ದೀಪಕ ಚೌಹಾಣ, ಶ್ರೀನಾಥ ಕುಸನಾಳೆ ಮುಂತಾದವರು ಇದ್ದರು.ಪರದಾಡಿದ ಪ್ರಯಾಣಿಕರು: ಪ್ರತಿಭಟನೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸಾವಿರಾರು ಶಿಕ್ಷಕರು ಜಮಾಯಿಸಿದ್ದರಿಂದ ಎರಡು ಗಂಟೆಗಳ ಕಾಲ ಸಂಚಾರ ದಟ್ಟಣೆಯಾಗಿತ್ತು. ಇದರಿಂದ ಎಲ್ಲಿ ನೋಡಿದರೂ ಶಿಕ್ಷಕರ ವಾಹನಗಳು ರಸ್ತೆಯಲ್ಲಿ ನಿಂತಿದ್ದವು. ಸಂಚಾರ ದಟ್ಟಣೆ ತಗ್ಗಿಸಲು ಚಿಕ್ಕೋಡಿ ಪೊಲೀಸರು ಹರಸಾಹಸ ಪಟ್ಟರು.

Advertisement
Advertisement

Udayavani is now on Telegram. Click here to join our channel and stay updated with the latest news.

Next