ಸಾಗರ: ತಾಲೂಕಿನ ಬರೂರು ಗ್ರಾಪಂ ವ್ಯಾಪ್ತಿಯ ಕಲ್ಲೊಡ್ಡು ಹಳ್ಳ ಹೊಸಕೆರೆ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿರುವುದನ್ನು ಖಂಡಿಸಿ ಸೋಮವಾರ ಕಲ್ಲೊಡ್ಡು ಹಳ್ಳ ಹೊಸಕೆರೆ ನಿರ್ಮಾಣ ವಿರೋಧಿ ಸಮಿತಿ ಹಾಗೂ ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರು ಕಪ್ಪು ಬಟ್ಟೆ ಕಟ್ಟಿಕೊಂಡು ಪ್ರತಿಭಟನೆ ನಡೆಸಿದರು.
ಯೋಜನೆ ಕೈ ಬಿಡುವಂತೆ ಗ್ರಾಪಂ ಅಧ್ಯಕ್ಷರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ ಯೋಜನೆಗೆ ಆಗಸ್ಟ್ ಒಂದರಂದು ರಾಜ್ಯ ಆಡಳಿತಾತ್ಮಕ ಅನುಮೋದನೆ ನೀಡಿದೆ. ಯೋಜನೆ ಅನ್ವಯ ಶಿಕಾರಿಪುರ, ಸೊರಬ ತಾಲೂಕಿನ 16 ಹಳ್ಳಿಗಳಲ್ಲಿ 1,950 ಹೆಕ್ಟೇರ್ ಬೇಸಾಯ ಭೂಮಿಗೆ ನೀರಾವರಿ ಕಲ್ಪಿಸುವುದು ಒಳಗೊಂಡಿದೆ. ಒಂದು ಸಾವಿರ ಮಿಲಿಮೀಟರ್‌ಗಿಂತ ಹೆಚ್ಚು ವಾರ್ಷಿಕ ಮಳೆಯಾಗುವ ಈ ಪ್ರದೇಶದಲ್ಲಿ ಯೋಜನೆಯಿಂದ 0.64 ಟಿಎಂಸಿ ನೀರನ್ನು ಯೋಜಿತ ಡ್ಯಾಂನಲ್ಲಿ ಸಂಗ್ರಹಿಸಿಡುವ ಉದ್ದೇಶ ಯೋಜನೆ ಒಳಗೊಂಡಿದೆ. ಆದರೆ ವಾಸ್ತವವಾಗಿ ತಾಲೂಕಿನ ಯಾವ ಹಳ್ಳಿಗಳಿಗೂ ಈ ಯೋಜನೆಯಿಂದ ಉಪಯೋಗವಾಗುವುದಿಲ್ಲ. ವಾರ್ಷಿಕವಾಗಿ ಒಂದು ಸಾವಿರ ಮಿಲಿಮೀಟರ್ ಮಳೆಯಾಗುತ್ತದೆ ಎಂದು ಹೇಳಿರುವುದೇ ಅವೈಜ್ಞಾನಿಕವಾಗಿದೆ ಎಂದು ಪ್ರತಿಭಟನಾನಿರತರು ದೂರಿದರು.
ಡ್ಯಾಂ ನಿರ್ಮಾಣದಿಂದ ಬರೂರು ಗ್ರಾಪಂ ವ್ಯಾಪ್ತಿಯ ಸುಮಾರು 93.53 ಹೆಕ್ಟೇರ್ ಕೃಷಿ ಭೂಮಿ ಭೂಸ್ವಾಧೀನ ಮಾಡಿಕೊಳ್ಳಲು ಅವಕಾಶ ಮಾಡಿಕೊಳ್ಳಲಾಗಿದೆ. ಅರಣ್ಯ ಭೂಮಿ 79 ಹೆಕ್ಟೇರ್ ಮಾತ್ರ ಮುಳುಗಡೆಯಾಗುತ್ತದೆ ಎಂದು ತಿಳಿಸಲಾಗಿದೆ. ಡ್ಯಾಂನ ಎತ್ತರ 22.53 ಮೀಟರ್ ಎಂದು ಹೇಳಲಾಗಿದ್ದು, ಎಷ್ಟು ಹಳ್ಳಿ ಮುಳುಗಡೆಯಾಗುತ್ತದೆ ಎಂದು ವರದಿಯಲ್ಲಿ ಉಲ್ಲೇಖೀಸಿಲ್ಲ. ಯೋಜನೆಯಿಂದ ಬರೂರು ಗ್ರಾಪಂ ವ್ಯಾಪ್ತಿಯ 10ಕ್ಕೂ ಹೆಚ್ಚು ಹಳ್ಳಿಗಳು ಮುಳುಗಡೆಯಾಗುತ್ತಿದ್ದು, 1500ಕ್ಕೂ ಹೆಚ್ಚು ಕೃಷಿ ಬಡ ರೈತ ಕುಟುಂಬಗಳು ಸಂತ್ರಸ್ತರಾಗುವ ಸಾಧ್ಯತೆ ಇದೆ. ಗ್ರಾಪಂ ವ್ಯಾಪ್ತಿಯಲ್ಲಿ ಶರಾವತಿ ನದಿಗೆ ಮಡೆನೂರು, ಲಿಂಗನಮಕ್ಕಿ ಆಣೆಕಟ್ಟು ನಿರ್ಮಾಣ ಸಂದರ್ಭದಲ್ಲಿ ಸಂತ್ರಸ್ತರಾದ 200 ಕುಟುಂಬವಿದ್ದು, ಈತನಕ ಅವರಿಗೆ ಪುನರ್ವಸತಿ ಸೌಲಭ್ಯ ಕಲ್ಪಿಸಿಲ್ಲ. ಈಗ ಈ ಯೋಜನೆ ಜಾರಿಗೆಯಾದರೆ ಕುಟುಂಬಗಳು ಮತ್ತೂಮ್ಮೆ ಮುಳುಗಡೆಯಾಗುವ ಭೀತಿ ಎದುರಾಗಿದೆ ಎಂದು ಪ್ರತಿಭಟನಾನಿರತರು ಹೇಳಿದರು.
ಯೋಜಿತ ಪ್ರದೇಶದಲ್ಲಿ ಸುಮಾರು 1030 ಎಕರೆ ಖುಷ್ಕಿ ಬೆಳೆ, 2000 ಎಕರೆ ಭತ್ತ, ಕಬ್ಬು ಇತ್ಯಾದಿ ತರಿ ಬೆಳೆ, 200 ಎಕರೆಗೂ ಹೆಚ್ಚು ಅಡಕೆ ತೋಟವಿದೆ. ಸಾವಿರಾರು ಎಕರೆ ಜಾಗದಲ್ಲಿ ಬಗರ್‌ಹುಕುಂ ಭೂಮಿಯ ಸಾಗುವಳಿದಾರರು ಬದುಕು ಸಾಗಿಸುತ್ತಿದ್ದಾರೆ. ಸುಮಾರು 6 ಸಾವಿರ ಎಕರೆ ಅರಣ್ಯವಿದೆ. ಆದರೆ ಯೋಜನೆ ರೂಪಿಸುವಾಗ ಸತ್ಯವನ್ನು ಮರೆಮಾಚುವ ಪ್ರಯತ್ನ ನಡೆದಿದೆ. ಜೀವ ವೈವಿಧ್ಯತೆ ನಾಶ, ಅರಣ್ಯನಾಶದ ಜತೆಗೆ ಗ್ರಾಮೀಣ ಜನರ ಬದುಕಿಗೆ ಮಾರಕವಾಗಿರುವ ಯೋಜನೆಯನ್ನು ಯಾವುದೇ ಕಾರಣಕ್ಕೂ ಕೈಗೆತ್ತಿಕೊಳ್ಳಬಾರದು. ಡಿಪಿಆರ್‌ನಲ್ಲಿ ತಿಳಿಸಿರುವಂತೆ ಇಲ್ಲಿ ಯಾವುದೇ ಜಲಮೂಲವಿಲ್ಲ. ಮಳೆಗಾಲದಲ್ಲಿ ಸುರಿಯುವ ಮಳೆನೀರಿನಿಂದ ಹರಿಯುವ ಕೆರೆಯ ನೀರನ್ನು ನಂಬಿಕೊಂಡು ಯೋಜನೆ ರೂಪಿಸಿರುವುದು ಸಂಪೂರ್ಣ ಅವೈಜ್ಞಾನಿಕವಾಗಿದೆ. ತಕ್ಷಣ ಯೋಜನೆ ಕೈ ಬಿಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸಮಿತಿ ಮತ್ತು ಗ್ರಾಮಸ್ಥರು ಇನ್ನಷ್ಟು ಉಗ್ರ ಹೋರಾಟ ಕೈಗೆತ್ತಿಕೊಳ್ಳುವುದು ಅನಿವಾರ್ಯ ಎಂದು ಮನವಿಯಲ್ಲಿ ಎಚ್ಚರಿಕೆ ನೀಡಲಾಗಿದೆ.
ಹೋರಾಟ ಸಮಿತಿಯ ಗೌರವಾಧ್ಯಕ್ಷ ವೀರೇಶ್ ಬರೂರು, ಸಂಚಾಲಕರಾದ ಶಿವಪ್ಪ, ಟಾಕಪ್ಪ, ಎಂ.ಸಿ.ಪರಶುರಾಮಪ್ಪ, ಗ್ರಾಪಂ ಅಧ್ಯಕ್ಷೆ ಕುಸುಮ ಪಕೀರಪ್ಪ, ಉಪಾಧ್ಯಕ್ಷ ವೀರಪ್ಪ ಗೌಡ, ತಾಪಂ ಸದಸ್ಯರಾದ ಸವಿತಾ ನಟರಾಜ್, ಹೇಮಾ ರಾಜಪ್ಪ ಇನ್ನಿತರರು ಹಾಜರಿದ್ದರು.