ಅಥಣಿ: ಕಾಂಗ್ರೆಸ್ ಮೇಲೆ ವಿಶ್ವಾಸ ಇಟ್ಟು ಅಥಣಿ ಮತಕ್ಷೇತ್ರದ ಮತದಾರರು ವಿಧಾನ ಸಭಾ ಚುನಾವಣೆಯಲ್ಲಿ ನಿಮ್ಮನ್ನು ಬೆಂಬಲಿಸಿ ಶಾಸಕರನ್ನಾಗಿ ಆಯ್ಕೆ ಮಾಡಲು ಸಹಕರಿಸಿದ್ದು, ಅವರ ಭಾವನೆಗೆ ವಿರುದ್ಧವಾಗಿ ನಡೆದುಕೊಳ್ಳಬೇಡಿ ಎಂದು ಮಾಜಿ ಶಾಸಕ ಶಹಜಹಾನ ಡೊಂಗರಗಾಂವ ಶಾಸಕ ಮಹೇಶ ಕುಮಟಳ್ಳಿ ಅವರಿಗೆ ಮನವಿ ಮಾಡಿದರು.
ಅಥಣಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಶಾಸಕ ಮಹೇಶ ಕುಮಟಳ್ಳಿ ನಿಲುವು ಹಾಗೂ ಆಪರೇಶನ್ ಕಮಲ ವಿರೋಧಿಸಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡುತ್ತಿದ್ದರು. ಕಳೆದ 15 ವರ್ಷಗಳ ಬಿಜೆಪಿ ಆಡಳಿತದಿಂದ ಬೇಸತ್ತ ಮತದಾರರು ಬದಲಾವಣೆ ಬಯಸಿ ಕಾಂಗ್ರೆಸ್ ಪಕ್ಷ ಬೆಂಬಲಿಸಿದ್ದಾರೆ. ಮತದಾರರು ತಿರಸ್ಕರಿಸಿದ್ದ ಬಿಜೆಪಿಯ ಆಪರೇಶನ್‌ಗೆ ಶಾಸಕರು ಬಲಿಯಾಗುತ್ತಿರುವುದು ಕ್ಷೇತ್ರದ ಮತದಾರರಿಗೆ ಮೋಸ ಮಾಡಿದಂತಾಗಿದೆ ಎಂದ ಅವರು, ಇನ್ನೂ ಸಮಯ ಮಿಂಚಿಲ್ಲ. ಇಂದೇ ನಿಮ್ಮ ತಪ್ಪಿನ ಅರಿವು ಮಾಡಿಕೊಂಡು ರಾಜಿನಾಮೆ ಹಿಂಪಡೆದು ಜನರ ಸೇವೆಗೆ ಮುಂದಾಗಿ ಎಂದು ಸಲಹೆ ನೀಡಿದರು.
ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಮಾತನಾಡಿ, ಕಾಂಗ್ರೆಸ್ ಮೇಲೆ ವಿಶ್ವಾಸ ಇಟ್ಟು ದಲಿತರು, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ದುಡಿಯುವ ವರ್ಗದವರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ್ದಾರೆ. ಇದರಿಂದ ಶಾಸಕರಾಗುವ ಸೌಭಾಗ್ಯ ಕೂಡ ದೇವರು ನಿಮಗೆ ದಯಪಾಲಿಸಿದ್ದಾನೆ. ಈ ಅವಕಾಶ ಸದುಪಯೋಗ ಮಾಡಿಕೊಂಡು ಜನರ ಸೇವೆಗೆ ಮುಂದಾಗಿ ಜನರ ಋಣ ತೀರಿಸಿ ಎಂದು ಸಲಹೆ ಮಾಡಿದ ಅವರು, ಕಾಂಗ್ರೆಸ್ ಪಕ್ಷದ ಅಥವಾ ಮೈತ್ರಿ ಸರಕಾರದ ಮೇಲೆ ಅಸಮಾಧಾನ ಇದ್ದಲ್ಲಿ ಅದನ್ನು ವರಿಷ್ಠರ ಗಮನಕ್ಕೆ ತಂದು ಬಗೆ ಹರಿಸಿಕೊಳ್ಳಿ ಆದರೆ ಇದನ್ನು ಬಿಟ್ಟು ರಾಜೀನಾಮೆಗೆ ಮುಂದಾಗಿರುವುದು ಖೇದಕರ ಸಂಗತಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಅಥಣಿ ಸಿ.ಪಿ.ಐ. ಎಚ್. ಶೇಖರಪ್ಪ ಅವರ ನೇತೃತ್ವದಲ್ಲಿ ಶಾಸಕ ಮಹೇಶ ಕುಮಟಳ್ಳಿ ಅವರ ನಿವಾಸಕ್ಕೆ ಹೋಗುವ ಮಾರ್ಗದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ಏರ್ಪಡಿಸಿದ್ದರು.
ಇದೇ ಸಂದರ್ಭದಲ್ಲಿ ಚಿಕ್ಕೋಡಿ ಜಿಲ್ಲಾ ಅಧ್ಯಕ್ಷ ಲಕ್ಷ್ಮ್ಮಣರಾವ ಚಿಂಗಳೆ, ಕಾಂಗ್ರೆಸ್ ಮುಖಂಡರಾದ ಗಜಾನನ ಮಂಗಸೂಳಿ, ಸತ್ಯಪ್ಪಾ ಬಾಗೆಣ್ಣವರ, ಸುನೀಲ ಸಂಕ, ಅರ್ಶದ ಗದ್ಯಾಳ, ಶ್ರೀಶೈಲ ಹಳ್ಳದಮಳ, ನಿಶಾಂತ ದಳವಾಯಿ, ಅನಿಲ ಸುಣಧೋಳಿ ಅಸ್ಲಂ ನಾಲಬಂದ, ಮಾಂತೇಶ ಬಾಡಗಿ, ಶಬ್ಬೀರ ಸಾಥಬಚ್ಚೆ, ಶಶಿ ಸಾಳವಿ ಸುಂದರ ಸೌಧಾಗರ ಸೇರಿದಂತೆ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಶಾಸಕ ಮಹೇಶ ಕುಮಟಳ್ಳಿ ಮನೆ ಮುಂದೆ ಧರಣಿಗೆ ಪೊಲೀಸರು ಅವಕಾಶ ನಿರಾಕರಿಸಿದಾಗ ಅರ್ಧ ಗಂಟೆಗೂ ಹೆಚ್ಚು ಕಾಲ ಕಾರ್ಯಕರ್ತರು ಜೇವರ್ಗಿ-ಸಂಕೇಶ್ವರ ರಾಜ್ಯ ಹೆದ್ದಾರಿ ತಡೆದು ಪ್ರತಿಭಟಿಸಿದರು.