Advertisement

ಭೂಮಿ ಹಕ್ಕುಪತ್ರಕ್ಕಾಗಿ ಅಣಕು ಶವಯಾತ್ರೆ

04:34 PM Aug 22, 2017 | |

ರಾಯಚೂರು: ಭೂವಂಚಿತರಿಗೆ ಭೂಮಿ ಮತ್ತು ನಿವೇಶನಗಳ ಹಕ್ಕುಪತ್ರ ವಿತರಿಸುವಲ್ಲಿ ಅನಗತ್ಯ ವಿಳಂಬ ಮಾಡುತ್ತಿರುವ ಜಿಲ್ಲಾಡಳಿತದ ನಿಷ್ಕ್ರೀಯತೆ ಖಂಡಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಸದಸ್ಯರು ಸೋಮವಾರ ಅಣಕು ಶವಯಾತ್ರೆ ನಡೆಸುವ ಮೂಲಕ ಬೃಹತ್‌ ಪ್ರತಿಭಟನೆ ನಡೆಸಿದರು. ನಗರದ ಅಂಬೇಡ್ಕರ್‌ ವೃತ್ತದಿಂದ ಪ್ರತಿಭಟನಾ ರ್ಯಾಲಿ ನಡೆಸಿದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು
ಸಮಾವೇಶಗೊಂಡು ಭೂ ನ್ಯಾಯ ಮಂಡಳಿ, ಭೂ ಮಂಜೂರಾತಿ ಸಮಿತಿಗಳ ಪ್ರತಿಕೃತಿ ದಹಿಸಿ ಆಕ್ರೋಶ
ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಭೂಹೀನ ದಲಿತ, ಹಿಂದುಳಿದ ಹಾಗೂ ಇತರ ಸಮುದಾಯದ ಸಹಸ್ರಾರು ಜನ ಸರ್ಕಾರಿ ಜಮೀನು, ಇನಾಂ ಭೂಮಿ, ಗೈರಾಣಿ, ಗ್ರಾಮಠಾಣಾ ಹಾಗೂ ಖಾರೀಜ ಖಾತಾ, ಅರಣ್ಯ ಗೋಮಾಳದ ಹೆಸರಿನಲ್ಲಿ ವಾಸವಾಗಿದ್ದು, ಅಲ್ಲೇ ಕೃಷಿ ಮಾಡಿಕೊಂಡು ಜೀವನ ದೂಡುತ್ತಿದ್ದಾರೆ. ಭೂಮಿ ಪಟ್ಟಾ ಹಾಗೂ ನಿವೇಶನಗಳ ಹಕ್ಕು ಪತ್ರಕ್ಕಾಗಿ ಅರ್ಜಿ ಸಲ್ಲಿಸಿ ದಶಕಗಳೇ ಕಳೆದರೂ ಸರ್ಕಾರ ಈವರೆಗೆ ಕಣ್ತೆರೆದಿಲ್ಲ. ಪ್ರತಿ ಬಾರಿ ಬೇಡಿಕೆ ಸಲ್ಲಿಸಿದಾಗಲೆಲ್ಲ ಕಣ್ಣೊರೆಸುವ ತಂತ್ರ ಅನುಸರಿಸುತ್ತಿದೆ ಎಂದು ದೂರಿದರು. ಇನಾಂ ರದ್ದತಿ ಕಾಯ್ದೆಯನ್ವಯ ಇನಾಂ ರದ್ದು ಮಾಡಿ ಉಳುಮೆ ಮಾಡುತ್ತಿರುವ ಭೂ ಹೀನ ರೈತರಿಗೇ ಆ ಭೂಮಿ ಹಂಚಿಕೆ ಮಾಡಬೇಕು. ಜಾರಿಯಾಗದ ಭೂ ನ್ಯಾಯಮಂಡಳಿ ಆದೇಶಗಳನ್ನು ಕೂಡಲೇ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. 2009ರ ನೆರೆ ಸಂತ್ರಸ್ತರಿಗೆ ಪರ್ಯಾಯವಾಗಿ ತಕ್ಷಣ ವಸತಿ ಮತ್ತು ಮೂಲ ಸೌಕರ್ಯಗಳ ಸಮಸ್ಯೆ ಇತ್ಯರ್ಥಗೊಳಿಸಲು ಕ್ರಮ ಕೈಗೊಳ್ಳಬೇಕು. ಸರ್ಕಾರಿ, ಗೈರಾಣಿ, ಪೋರಂಪೋಕು, ಖಾರೀಜ್‌ ಖಾತಾ ಭೂಮಿಯಲ್ಲಿರುವ ರೈತರಿಗೆ ಪಟ್ಟಾ ಬಿಡಬೇಕು. ಉಳುಮೆ ಮಾಡುತ್ತಿರುವ ಭೂಮಿಗೆ ಹಕ್ಕುಪತ್ರ ನೀಡಬೇಕು ಹಾಗೂ ಸರ್ಕಾರಿ ಹಾಗೂ ಇನ್ನಿತರ ಸ್ಥಳದಲ್ಲೇ ನಗರ ಪ್ರದೇಶಗಳನ್ನು ಒಳಗೊಂಡಂತೆ ವಾಸಿಸುವವರ ಸ್ಥಳಗಳಿಗೆ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿದರು. ಈ ಎಲ್ಲ ಬೇಡಿಕೆಗಳನ್ನು ನಿಗದಿತ ಮಿತಿಯೊಳಗೆ ಈಡೇರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಈಗಾಗಲೇ ಭೂಮಿಯಲ್ಲಿ ಉಳುಮೆ ಮಾಡುತ್ತಿರುವವರನ್ನು ಅಥವಾ ವಾಸಿಸುವವರನ್ನು ಒಕ್ಕಲೆಬ್ಬಿಸಬಾರದು ಎಂದು ಒತ್ತಾಯಿಸಿದರು. ಸಮಿತಿ ಸದಸ್ಯರಾದ ಕುಮಾರ ಸಮತಳ, ಕೆ.ನಾಗಲಿಂಗಸ್ವಾಮಿ, ಖಾಜಾ ಅಸ್ಲಂ ಅಹ್ಮದ್‌, ಗುರುರಾಜ, ಜಾನ್‌ ವೆಸ್ಲೆ, ರೇಣುಕಾ, ಎಂ. ಆಂಜನೇಯ, ದೇವಪುತ್ರ, ಚಿನ್ನಮ್ಮ, ರಂಗಾರೆಡ್ಡಿ, ಅಜೀಜ್‌ ಜಾಹಗೀರದಾರ, ಹನುಮಂತ ಗುಂಜಳ್ಳಿ ಸೇರಿ ನೂರಾರು ಪಾಲ್ಗೊಂಡಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next