ಚಳ್ಳಕೆರೆ: ರಾಜ್ಯದಲ್ಲಿ ಕಳೆದ ನೂರಾರು ವರ್ಷಗಳಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯಗಳಿಗೆ ಸೂಕ್ತ ಮೀಸಲಾತಿ ಸೌಲಭ್ಯ ದೊರಕದೆ ಹಿನ್ನಡೆ ಅನುಭವಿಸುತ್ತಿದ್ದು, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮೇಲೆ ಒತ್ತಡ ಹೇರಲು ಮೇ 20ರ ಶುಕ್ರವಾರ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗುವುದು ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.
ಪಾವಗಡ ರಸ್ತೆಯ ಲಕ್ಷ್ಮಮ್ಮ ತಿಪ್ಪೇಸ್ವಾಮಿ ಕಲ್ಯಾಣ ಮಂಟಪದಲ್ಲಿ ಶನಿವಾರ ಕರ್ನಾಟಕ ರಾಜ್ಯ ಸ್ವಾಭಿಮಾನಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾಸಮಿತಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚಳ್ಳಕೆರೆ ವಿಧಾನಸಭಾ ಕ್ಷೇತ್ರವೂ ಸೇರಿದಂತೆ ರಾಜ್ಯ ಬಹುತೇಕ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎರಡೂ ಸಮುದಾಯಗಳು ಸಾಕಷ್ಟು ಪ್ರಮಾಣದಲ್ಲಿ ನಿರಂತರ ಹೋರಾಟ ನಡೆಸಿದ್ದರೂ ಸಹ ಸರ್ಕಾರ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ವಾಲ್ಮೀಕಿ ಪೀಠದ ಶ್ರೀ ಪ್ರಸನ್ನನಾನಂದ ಸ್ವಾಮೀಜಿ ಕಳೆದ ಫೆಬ್ರವರಿಯಲ್ಲೇ ಬೆಂಗಳೂರಿನಲ್ಲೇ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಮೀಸಲಾತಿ ಹೋರಾಟಕ್ಕೆ ಎಲ್ಲೆಡೆ ಪಕ್ಷಬೇಧ ಮರೆತು ಬೆಂಬಲ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ತಿಂಗಳ 20ರಂದು ಬೃಹತ್ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಮನವಿ ನೀಡುವ ಮೂಲಕ ಸರ್ಕಾರದ ವಿರುದ್ಧ ಹೋರಾಟ ನಡೆಸಲಾಗುವುದು ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಪಿ. ಪ್ರಕಾಶ್‌ಮೂರ್ತಿ ಮಾತನಾಡಿ, ವಿವಿಧ ಪಕ್ಷಗಳ ಮುಖಂಡರು ಪರಿಶಿಷ್ಟ ಜಾತಿ, ಪಂಗಡಗಳ ಮೀಸಲಾತಿಯ ಬಗ್ಗೆ ನಿರ್ಲಕ್ಷ್ಯ ತಾಳಿದ್ದು ಸರಿಯಲ್ಲ. ಸರ್ಕಾರ ಮನಸು ಮಾಡಿ ಈ ಮೀಸಲಾತಿ ನೀಡಿದ್ದಲ್ಲಿ ಎರಡೂ ಜನಾಂಗಗಳಲ್ಲಿ ಅಭಿವೃದ್ಧಿ ಪರ್ವ ಪ್ರಾರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಎರಡೂ ಸಮುದಾಯದ ಎಲ್ಲ ಹಂತದ ನಾಯಕರು ನಮ್ಮ ಬೇಡಿಕೆ ಈಡೇರುವವರೆಗೂ ನಾವೆಲ್ಲರೂ ಸಂಘಟಿತರಾಗಿ ಹೋರಾಟ ನಡೆಸೋಣ ಎಂದರು.
ನಿವೃತ್ತ ಶಿಕ್ಷಕ ಕೆ.ಸೂರನಾಯಕ ಮಾತನಾಡಿ, ಹೋರಾಟ ಸಮಿತಿ ಸಹಯೋಗದಲ್ಲಿ ಎರಡೂ ಜನಾಂಗಗಳು ಮೀಸಲಾತಿ ಪಡೆಯುವ ನಿಟ್ಟಿನಲ್ಲಿ ಸಂಘಟಿತರಾಗಿ ಹೋರಾಟ ನಡೆಸುತ್ತಿರುವುದು ಸೂಕ್ತವಾಗಿದೆ. ಎರಡೂ ಸಮುದಾಯಗಳು ಸಂಘಟಿತರಾಗಿ ಬೀದಿಗಿಳಿದು ಹೋರಾಟ ನಡೆಸಿದರೆ ಮಾತ್ರ ಸರ್ಕಾರ ಈ ನಿಟ್ಟಿನಲ್ಲಿ ಕಾಯೋನ್ಮುಖವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.
ದಲಿತ ಸಂಘಟನೆಗಳ ಹೋರಾಟಗಾರರಾದ ಟಿ.ವಿಜಯಕುಮಾರ್, ಸಮರ್ಥರಾಯ, ನಗರಸಭಾ ಸದಸ್ಯ ಕೆ.ವೀರಭದ್ರಪ್ಪ, ಕೆ.ಟಿ. ಕುಮಾರಸ್ವಾಮಿ ಮುಂತಾದವರು ಹೋರಾಟದ ರೂಪುರೇಷೆಗಳ ಬಗ್ಗೆ ಮಾತನಾಡಿದರು. ಸಭೆಯಲ್ಲಿ ನಗರಸಭಾ ಸದಸ್ಯ ಬಿ.ಟಿ. ರಮೇಶ್‌ಗೌಡ, ಮಾಜಿ ಸದಸ್ಯ ಎಂ. ಚೇತನ್ ಕುಮಾರ್, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಜೆ. ವೆಂಕಟೇಶ್, ಮುಖಂಡರಾದ ಅಂಜಿನಪ್ಪ, ಚಂದ್ರು, ಭೀಮನಕೆರೆ ಶಿವಮೂರ್ತಿ, ಪತ್ರಕರ್ತ ಕೊರ‌್ಲಕುಂಟೆ ತಿಪ್ಪೇಸ್ವಾಮಿ, ಚೌಳೂರುಪ್ರಕಾಶ್, ಭರಮಣ್ಣ, ಲಕ್ಷ್ಮೀ ದೇವಿ, ಜಿ.ಟಿ. ವೀರಭದ್ರಸ್ವಾಮಿ, ಸಿ.ಟಿ. ವೀರೇಶ್, ಎಲ್‌ಐಸಿ ತಿಪ್ಪೇಸ್ವಾಮಿ, ಬೆಸ್ಕಾಂ ಸಿ.ನಾಗರಾಜು ಮುಂತಾದವರು ಪಾಲ್ಗೊಂಡಿದ್ದರು.