ಕಲಬುರಗಿ: 371ಜೆ ಕಲಂ ವಿರೋಧಿಸಿ ಬೆಂಗಳೂರಿನಲ್ಲಿ ಹಸಿರು ಪ್ರತಿಷ್ಠಾನ ನಡೆಸುತ್ತಿರುವ ಪ್ರತಿಭಟನೆ ವಿರೋಧಿಸಿ ನಗರದ ಸರದಾರ ವಲ್ಲಭಬಾಯಿ ಪಟೇಲ್ ವೃತ್ತದಲ್ಲಿ ಭಾರಿ ಪ್ರತಿಭಟನೆ ನಡೆಯಿತು. ವಿದ್ಯಾರ್ಥಿಗಳು ಸಾವಿರಾರು ಸಂಖ್ಯೆಯಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದರು.
ನಗರದ ಹಲವು ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು, ಹೋರಾಟಗಾರರು, ಕನ್ನಡ ಪರ ಸಂಘಟನೆಗಳು,ಅಕಾಡೆಮಿಗಳ ಸದಸ್ಯರು 371(ಜೆ) ಕಲಂ ಬೆಂಬಲಿಸಿ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಕರೆ ನೀಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು 371( ಜೆ) ಕಲಂ ವಿರೋಧಿ ಬೆಂಗಳೂರಿನಲ್ಲಿ ಜೂ.1 ರಂದು ನಡೆಸುತ್ತಿರುವ ಹೋರಾಟಕ್ಕೆ ಧಿಕ್ಕಾರ ಹೇಳಿದರು.
ಕೂಡಲೇ ಸರಕಾರ ಮಧ್ಯ ಪ್ರವೇಶ ಮಾಡಬೇಕು. 30 ವರ್ಷಗಳ ಸತತ ಹೋರಾಟ ಫಲವಾಗಿ ನಮ್ಮ ಭಾಗಕ್ಕೆ ನ್ಯಾಯ ಸಿಕ್ಕಿದೆ. ಆದರೂ, ಆದನ್ನು ಸರಿಯಾಗಿ ಪ್ರಮಾಣದಲ್ಲಿ ನಾವು ಪಡೆಯಲು ಇನ್ನೂ ಕೆಲವು ಕಾನೂನು ತೊಡಕು, ಸರಕಾರದ ಅಧಿಕಾರಿಗಳ ಇಚ್ಛಾಶಕ್ತಿ ಪ್ರದರ್ಶನದ ಕೊರತೆಯಿಂದಾಗಿ ಉದ್ದೇಶಿತ ಗುರಿ ಸಾಧಿಸಲು ಸಾಧ್ಯವಾಗಿಲ್ಲ ಎನ್ನುವುದು ಖೇದಕರ ಸಂಗತಿ ಎಂದು ಎಂಎಲ್ಸಿ ಶಶೀಲ್ ನಮೋಶಿ, ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಪ್ರೊ.ಆರ್.ಕೆ.ಹುಡಗಿ, ಬಸವರಾಜ ಕುಮನೂರು, ಅಸಾದ ಅನ್ಸಾರಿ ಸೇರಿದಂತೆ ಆನೇಕರು ಹೋರಾಟದ ನೇತೃತ್ವವಹಿಸಿ ಬೆಂಗಳೂರಿನ ಹಸಿರು ಪ್ರತಿಷ್ಠಾನ ಅರಂಭಿಸಿರುವ ಖ್ಯಾತೆ ಖಂಡಿಸಿದರು.
ಆಲ್ಲದೆ, ಈ ರೀತಿಯ ವಿರೋಧ ಭವಿಷ್ಯದಲ್ಲಿ ಕರ್ನಾಟಕ ಇಬ್ಭಾಗವಾಗಲು ಕಾರಣವಾಗಬಹುದು ಎನ್ನುವ ಸಂದೇಶವನ್ನು ರವಾನಿಸಿ, ಸರಕಾರ ಕೂಡಲೇ ಮಧ್ಯ ಪ್ರವೇಶ ಮಾಡಬೇಕು ಎಂದು ಆಗ್ರಹಿಸಿದರು.
ಇದಕ್ಕೂ ಮುನ್ನ ನಗರದ ಹಲವಾರು ವಿದ್ಯಾಸಂಸ್ಥೆಗಳ ಮಕ್ಕಳು, ಶಿಕ್ಷಕರು ಸೇರಿಕೊಂಡು ಸರದಾರವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಮಾನವ ಸರಪಳಿ ಮಾಡಿ ಖಂಡಿಸಿದರು.