ಶಹಾಬಾದ: ಪ್ರವಾದಿ ಮಹಮ್ಮದ್ ಅವರನ್ನು ಅವಹೇಳನ ಮಾಡಿದ ಬಿಜೆಪಿಯ ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ಅವರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿ ಆಶಿಕಾನೆ ರಸೂಲ್ ಕಮಿಟಿ ವತಿಯಿಂದ ಶನಿವಾರ ನಗರದ ಮಜ್ಜಿದ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಮಾಧ್ಯಮವೊಂದರ ಚರ್ಚೆಯಲ್ಲಿ ಪ್ರವಾದಿ ಮಹಮ್ಮದ್ ಅವರನ್ನು ಅವಹೇಳನಕಾರಿ ನಿಂದನೆ ಮಾಡಿದ ಬಿಜೆಪಿಯ ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ಅವರನ್ನು ಕೂಡಲೇ ಬಂಧಿಸಬೇಕು. ದೇಶದಲ್ಲಿ ಅಲ್ಪಸಂಖ್ಯಾತ, ದಲಿತ,ಹಿಂದುಳಿದ ವರ್ಗಗಳ ಮೇಲೆ ನಿರಂತರ ಹಲ್ಲೆ, ದಾಳಿ ಮತ್ತು ಮುಸ್ಲಿಂ ಸಮುದಾಯವನ್ನು ಗುರಿ ಮಾಡುತ್ತಿರುವ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ದೇಶದಲ್ಲಿ ನಡೆಯುತ್ತಿರುವ ಮುಸ್ಲಿಂ ವಿರೋಧಿ ಹಿಂಸಾತ್ಮಕ ಕೃತ್ಯಗಳಿಗೆ ಬಿಜೆಪಿ ಸರ್ಕಾರ ಮೌನ ಸಮ್ಮತಿ ನೀಡುತ್ತಿದೆ. ದುಷ್ಕರ್ಮಿಗಳಿಗೆ ಆಡಳಿತಾತ್ಮಕ ನೆರವು ನೀಡುತ್ತಿದೆ. ಹಿಜಾಬ್, ಹಲಾಲ್, ವ್ಯಾಪಾರ ಬಹಿಷ್ಕಾರ, ಆಝಾನ್, ಈದ್ಗಾಗಳ ವಿವಾದ ಸೃಷ್ಟಿ ಹೀಗೆ ನಿರಂತರ ಮುಸಲ್ಮಾನರ ಧಾರ್ಮಿಕ ವಿಚಾರಗಳಲ್ಲಿ ಸಂಘರ್ಷ ನಡೆಸುತ್ತಿದ್ದು, ಬಿಜೆಪಿ ಹಾಗೂ ಹಿಂದೂತ್ವ ನಾಯಕರು ದ್ವೇಷದ ಭಾಷಣ, ಹೇಳಿಕೆಗಳನ್ನು ಸಾರ್ವಜನಿಕವಾಗಿ ನೀಡುತ್ತಲೇ ಇದ್ದಾರೆ. ಇವರ ವಿರುದ್ಧ ಸರಕಾರ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದು ನೂಪುರ್ ಶರ್ಮಾ, ನವೀನ್ ಜಿಂದಾಲ ಅವರನ್ನು ಪಕ್ಷದಿಂದ ವಜಾಗೊಳಿಸಿರುವುದು ಕೇವಲ ಕಣ್ಣೊರೆಸುವ ತಂತ್ರವಾಗಿದೆ. ದೇಶದ ಆರ್ಥಿಕ ಪರಿಸ್ಥಿತಿಯನ್ನು, ಜಾತ್ಯತೀತ ಪರಂಪರೆಯನ್ನು ಸಂಪೂರ್ಣ ನಾಶಗೊಳಿಸಿ ಜಾಗತಿಕ ಮಟ್ಟದಲ್ಲಿ ದೇಶವನ್ನು ತಲೆತಗ್ಗಿಸುವಂತೆ ಮಾಡಿರುವ ಬಿಜೆಪಿ ಸರ್ಕಾರ ಕೂಡಲೇ ರಾಜೀನಾಮೆ ನೀಡಬೇಕು. ಅಲ್ಲದೇ ದೇಶದ ಮಾನವನ್ನು ಹರಾಜುಗೊಳಿಸುತ್ತಿರುವ ಸಂಘಟಕರನ್ನು ನಿಯಂತ್ರಿಸಬೇಕೆಂದು ಆಗ್ರಹಿಸಿದರು.
ನಂತರ ಎಸ್‌ಪಿ ಇಶಾ ಪಂತ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಡಿವೈಎಸ್‌ಪಿ ಉಮೇಶ ಚಿಕ್ಕಮಠ, ಪಿಐ ಸಂತೋಷ ಹಳ್ಳೂರ್ ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು. ಮುಖಂಡರಾದ ಅಬ್ದುಲ್ ಖಾದಿರ್ ಸಾಬ್, ಮಹಮ್ಮದ್ ಮಸ್ತಾನ, ಮತೀನ ಪಟೇಲ, ಸೈಯದ್ ಲಾಡ್ಲೆ ಹುಸೇನಿ, ಅಪ್ಸರ್ ಸೇಠ, ರಫೀಕ್ ಬಾಗಬಾನ್, ಮೌಲನಾ ಹಿದಾಯತ್ ಅಲಿ, ಮುಬಿನ್ ಅಲಿ, ಅಕ್ಬರ್ ಚಿಟ್, ಮೆಹಬೂಬ ಪಟೇಲ್, ಹಾಷಮ್ ಖಾನ್, ಮಹಮ್ಮದ್ ಉಬೆದುಲ್ಲಾ, ಡಾಕ್ಟರ್ ಅಹ್ಮದ್ ಪಟೇಲ್, ಮಹಮ್ಮದ್ ಫಾರೂಕ್, ಮಹಮ್ಮದ್ ಜೀಲಾನಿ ಶಾಹ್, ನದೀಮ್ ಶಾಂತನಗರ, ಜಾವೀದ್ ಮಡ್ಡಿ, ನೋರೋದ್ದಿನ್ ಪಟೇಲ ಮತ್ತಿತರರು ಪಾಲ್ಗೊಂಡಿದ್ದರು.