Advertisement

ಒಲಿಂಪಿಕ್ಸ್‌ ಮುಂದೂಡಿಕೆಯಿಂದ ಭಾರೀ ನಷ್ಟ: ಬಾಕ್‌

09:09 AM Apr 15, 2020 | Sriram |

ಟೋಕಿಯೊ: ಇಲ್ಲಿ ನಡೆಯಬೇಕಿರುವ ಒಲಿಂಪಿಕ್ಸ್‌ ಕ್ರೀಡಾಕೂಟವು ಕೋವಿಡ್ 19 ಕಾರಣದಿಂದಾಗಿ ಸುಮಾರು ಒಂದು ವರ್ಷಕ್ಕೆ ಮುಂದೂಡಲ್ಪಟ್ಟಿದೆ. ಇದರಿಂದಾಗಿ ಅಂತಾ ರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿ (ಐಒಸಿ) ಹಲವು ನೂರು ಮಿಲಿಯನ್‌ ಡಾಲರ್‌ಗಳಷ್ಟು ನಷ್ಟ ಅನುಭವಿಸಲಿದೆ ಎಂದು ಅಧ್ಯಕ್ಷ ಥಾಮಸ್‌ ಬಾಕ್‌ ತಿಳಿಸಿದ್ದಾರೆ.

Advertisement

ಕೂಟದ ಮುಂದೂಡಿಕೆಯಿಂದ ಸುಮಾರು 2ರಿಂದ 6 ಬಿಲಿಯನ್‌ ಅಮೆರಿಕನ್‌ ಡಾಲರ್‌ಗಳಷ್ಟು ನಷ್ಟವಾಗಲಿದೆ ಎಂದು ಅಂದಾಜಿಸಲಾಗಿದೆ. ಆದರೆ, 2013ರಲ್ಲಿ ಟೋಕಿಯೊ ದಲ್ಲಿ ಒಲಿಂಪಿಕ್ಸ್‌ ಆಯೋಜನೆ ಮಾಡುವ ಅವಕಾಶ ನೀಡುವ ವೇಳೆ ಮಾಡಿಕೊಂಡಿರುವ ಒಪ್ಪಂದ ದಂತೆ, ಐಒಸಿ ಪಾಲು ಹೊರತಾದ ಎಲ್ಲ ನಷ್ಟವನ್ನೂ ಜಪಾನ್‌ ಭರಿಸಬೇಕಿದೆ. ಆದರೆ, ಐಒಸಿಗೆ ಎಷ್ಟು ಹೆಚ್ಚುವರಿ ವೆಚ್ಚ ಬರಲಿದೆ ಎನ್ನುವುದನ್ನು ಈಗಲೇ ಹೇಳುವುದು ಅಸಾಧ್ಯ ಎಂದಿದ್ದಾರೆ.

ಜಪಾನ್‌ನ ಕ್ರೀಡಾ ಆಯೋಜಕರು ಪಂದ್ಯಾ ವಳಿಗಾಗಿ 12.6 ಬಿಲಿಯನ್‌ ಅಮೆರಿಕನ್‌ ಡಾಲರ್‌ಗಳಷ್ಟು ವೆಚ್ಚವನ್ನು ಅಂದಾಜಿಸಿದ್ದರು. ಆದರೆ, 2019ರಲ್ಲಿ ಸರಕಾರದ ಲೆಕ್ಕ ಪರಿಶೋಧನೆ ಸಂದರ್ಭದಲ್ಲಿ ಈ ವೆಚ್ಚ ದ್ವಿಗುಣವಾಗಲಿದೆ ಎನ್ನಲಾಗಿತ್ತು.

ಕೋವಿಡ್ 19  ವೈರಸ್‌ ಜಗತ್ತಿನಾದ್ಯಂತ ಹರಡಿದೆ. ಜುಲೈ ವೇಳೆಗೆ ಸೋಂಕು ನಿಯಂತ್ರಣಕ್ಕೆ ಬರಲಿದೆ ಎಂದು ಹೇಳುವ ಧೈರ್ಯ ಯಾರಿಗೂ ಇಲ್ಲ. ಹೀಗಾಗಿ, ಒಲಿಂಪಿಕ್ಸ್‌ ಕೂಟವನ್ನು ಒಂದು ವರ್ಷ ಮುಂದೂಡಬೇಕಾಯಿತು. ಆದರೆ, ಸ್ಪಷ್ಟ ಉತ್ತರ ನೀಡುವ ಸ್ಥಿತಿಯಲ್ಲಿ ನಾವಿಲ್ಲ ಎಂದು ಜಪಾನ್‌ನ ಒಲಿಂಪಿಕ್ಸ್‌ ಆಯೋಜನ ಸಮಿತಿಯ ಸಿಇಒ ತೋಶಿರೋ ಮುಟೊ ತಿಳಿಸಿದ್ದಾರೆ.

2021ರಲ್ಲಿ ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿಗೆ ಚುನಾವಣೆ ನಡೆಯಲಿದ್ದು, ತಾವು ಎರಡನೇ ಅವಧಿಗೆ ಸ್ಪರ್ಧಿಸುವ ಕುರಿತು ಇನ್ನೂ ನಿರ್ಧರಿಸಿಲ್ಲ. ಚುನಾವಣೆಗೆ ಆರು ತಿಂಗಳ ಮೊದಲು ಬಾಕ್‌ ತಮ್ಮ ಇಂಗಿತವನ್ನು ಸ್ಪಷ್ಪಪಡಿಸಬೇಕಿದೆ. ಅದಕ್ಕೆ ಇನ್ನೂ ಸಾಕಷ್ಟು ಸಮಯಾವಕಾಶವಿದೆ ಎಂದು ಬಾಕ್‌ ತಿಳಿಸಿದಾರೆ.

Advertisement

ರಷ್ಯನ್‌ ಆ್ಯತ್ಲೀಟ್‌ಗಳಿಗೆ ಅವಕಾಶ?
ಮುಂದಿನ ಬೇಸಗೆ ತನಕ ಮುಂದೂಡಬಹುದಷ್ಟೆ ಎಂದು ಜಪಾನ್‌ ಪ್ರಧಾನಿ ಶಿಂಜೊ ಅಬೆ ತಮಗೆ ತಿಳಿಸಿದ್ದಾರೆಂದು ಬಾಕ್‌ ಹೇಳಿದ್ದಾರೆ. ಉದ್ದೀಪನ ದ್ರವ್ಯಗಳ ಹಗರಣದಲ್ಲಿ ರಷ್ಯಾ ನಾಲ್ಕು ವರ್ಷಗಳ ನಿಷೇಧಕ್ಕೆ ಒಳಗಾಗಿದೆ. ಆದರೆ, ತಾವು ಅಕ್ರಮ ಎಸಗಿಲ್ಲ ಎಂದು ಸಾಬೀತುಪಡಿಸಲು ರಷ್ಯಾದ ಹಲವು ಆ್ಯತ್ಲೀಟ್‌ಗಳಿಗೆ ಅವಕಾಶ ನೀಡುವ ಸಾಧ್ಯತೆ ಇದೆ. ರಷ್ಯಾದ ಮನವಿ ಅಂತಾರಾಷ್ಟ್ರೀಯ ಕೋರ್ಟ್‌ ಆಫ್ ಆರ್ಬಿಟ್ರೇಶನ್‌ ಫಾರ್‌ ನ್ಪೋರ್ಟ್ಸ್ನಲ್ಲಿ ಪರಿಶೀಲನೆಯಲ್ಲಿರುವ ಈ ಹಂತದಲ್ಲಿ ಈ ಬಗ್ಗೆ ಮಾತನಾಡುವುದು ಸೂಕ್ತವಲ್ಲ ಎಂದು ಬಾಕ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರವಾಸೋದ್ಯಮಕ್ಕೆ ಹೊಡೆತ
ಜಪಾನ್‌ ಸರಕಾರ ಭಾರೀ ಪ್ರಮಾಣದಲ್ಲಿ ಹೂಡಿಕೆ ಮಾಡಿ, ಅದನ್ನು ವಿವಿಧ ರೂಪದಲ್ಲಿ ಹಿಂದಿರುಗಿ ಪಡೆಯುವ ಯೋಜನೆ ಹಾಕಿದೆ. ಮುಖ್ಯವಾಗಿ ಪ್ರವಾಸೋದ್ಯಮದ ಮೂಲಕ ಕನಿಷ್ಠ 20,000 ಕೋಟಿ ರೂ. ಗಳಿಸುವುದು, ಜನರಲ್ಲಿ ಖರೀದಿಯ ಆಸಕ್ತಿಯನ್ನು ಹುಟ್ಟು ಹಾಕಿ ಅಲ್ಲಿಂದಲೂ ಹಣ ಪಡೆಯುವುದು ಯೋಜನೆ. ಒಂದು ವೇಳೆ ಒಲಿಂಪಿಕ್ಸ್‌ ರದ್ದಾದರೆ ಹತ್ತಿರಹತ್ತಿರ ಒಂದು ಲಕ್ಷ ಕೋಟಿ ರೂ. ಕೈಬಿಟ್ಟು ಹೋಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next