ಬೆಂಗಳೂರು: ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಹೆದ್ದಾರಿ ಬದಿಯ ಬಾರ್ ಮತ್ತು ಪಬ್‌ಗಳಿಗೆ ಅಬಕಾರಿ ಇಲಾಖೆ ಬೀಗ ಹಾಕಿದ ಹಿನ್ನೆಲೆಯಲ್ಲಿ ಸ್ಥಗಿತಗೊಂಡ ಬಾರ್ ಮಾಲೀಕರು ನಷ್ಟ ಅನುಭವಿಸುತ್ತಿದ್ದಾರೆ. ಆದರೆ, ಹೆದ್ದಾರಿಯಿಂದ 500 ಮೀಟರ್‌ಗೆ ಹೊರಗಿರುವ ಬಾರ್‌ಗಳಲ್ಲಿ ಮದ್ಯಕ್ಕೆ ಬೇಡಿಕೆ ಹೆಚ್ಚಾಗಿರುವುದು ಕಂಡು ಬಂದಿದೆ.
ಹೆದ್ದಾರಿಯ ಬದಿಯಿಂದ 500 ಮೀಟರ್ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಿ ಕಳೆದ ತಿಂಗಳು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿತ್ತು. ಆ ಹಿನ್ನೆಲೆಯಲ್ಲಿ ಅಬಕಾರಿ ಇಲಖೆಯ ಅಧಿಕಾರಿಗಳು ಬಾರ್‌ಗಳಿಗೆ ನೋಟಿಸ್ ಜಾರಿಗೊಳಿಸಿ ಜೂನ್ 30ರೊಳಗೆ ಅಂಗಡಿಗಳನ್ನು ಸ್ಥಗಿತಗೊಳಿಸುವಂತೆ ಸೂಚಿಸಿತ್ತು. ಅದರಂತೆ ಜುಲೈ 1ರಂದು ಇಲಾಖೆಯ ಅಧಿಕಾರಿಗಳು ಖುದ್ದು ಮದ್ಯದಂಗಡಿಗಳನ್ನು ಮುಚ್ಚಿಸಿದ್ದರು.
ನಗರ ವ್ಯಾಪ್ತಿಯಲ್ಲಿ ನ್ಯಾಯಾಲಯದ ಆದೇಶ ಪರಿಣಾಮ ಜುಲೈನಿಂದ 740ಕ್ಕೂ ಹೆಚ್ಚು ಬಾರ್ ಮತ್ತು ಪಬ್‌ಗಳು ಸ್ಥಗಿತಗೊಂಡಿವೆ. ಪರಿಣಾಮ ನಿತ್ಯ ಹೆದ್ದಾರಿ ಬದಿಯ ಬಾರ್ ಮತ್ತು ಪಬ್‌ಗಳಿಗೆ ಭೇಟಿ ನೀಡುತ್ತಿದ್ದ ಗ್ರಾಹಕರು 500 ಮೀಟರ್‌ಗೆ ಒಳಪಡದ ಬಾರ್‌ಗಳ ಕಡೆಗೆ ಮುಖ ಮಾಡಿದ್ದು, ಬಾರ್‌ಗಳ ಮುಂಭಾಗದಲ್ಲಿ ಜನಸಂದಣಿಯ ದೃಶ್ಯಗಳು ಸಾಮಾನ್ಯವಾಗಿವೆ.
“”ಬಾರ್, ಪಬ್‌ಗಳನ್ನು ಸ್ಥಗಿತಗೊಳಿಸಿದ್ದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗುತ್ತಿದ್ದು, ನೂರಾರು ಸಿಬ್ಬಂದಿಗಳು ಕೆಲಸ ಕಳೆದುಕೊಂಡಿದ್ದಾರೆ. ಸುಪ್ರೀಂ ಕೋರ್ಟ್ ಇತ್ತೀಚೆಗೆ ನಗರ ಹಾಗೂ ಪಟ್ಟಣ ವ್ಯಾಪ್ತಿಯ ಹೆದ್ದಾರಿಗಳ ವಿಚಾರದಲ್ಲಿ ಕ್ರಮಕೈಗೊಳ್ಳುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ನೀಡಿದೆ. ಹೀಗಾಗಿ ಸರ್ಕಾರ ಕೂಡಲೇ ಕ್ರಮಕೈಗೊಳ್ಳುವ ಮೂಲಕ ಶೀಘ್ರ ಮಳಿಗೆಗಳನ್ನು ಆರಂಭಿಸಲು ಅವಕಾಶ ಮಾಡಿಕೊಡಬೇಕು” ಎಂದು ಎಂ.ಜಿ.ರಸ್ತೆಯ ಸ್ಥಗಿತಗೊಂಡ ಬಾರ್‌ವೊಂದರ ಮಾಲೀಕರು ಒತ್ತಾಯಿಸಿದ್ದಾರೆ.
“”ಹೆದ್ದಾರಿಗಳಿಂದ 500 ಮೀಟರ್ ವ್ಯಾಪ್ತಿಯಲ್ಲಿರುವ ಬಾರ್‌ಗಳನ್ನು ಮುಚ್ಚಿಸಿರುವುದರಿಂದ ಮದ್ಯ ಪ್ರಿಯರು ಸಮೀಪದ ಬಾರ್‌ಗಳಿಗೆ ಬರುತ್ತಿದ್ದಾರೆ. ಜುಲೈ 1 ರಿಂದ ಸಾಮಾನ್ಯಕ್ಕಿಂತ ಅಧಿಕ ಪ್ರಮಾಣದ ವಹಿವಾಟು ನಡೆಯುತ್ತಿದ್ದು, ಹೆಚ್ಚಿನ ಪ್ರಮಾಣದಲ್ಲಿ ಮದ್ಯವನ್ನು ತರಿಸಿಕೊಳ್ಳಲಾಗುತ್ತಿದೆ” ಎಂದು ಕೃಷ್ಣರಾಜಪುರದ ದೇವಸಂದ್ರ ಮುಖ್ಯ ರಸ್ತೆಯಲ್ಲಿರುವ ಬಾಲಾಜಿ ಬಾರ್‌ನ ಮಾಲೀಕ ಸುರೇಶ್ ತಿಳಿಸಿದ್ದಾರೆ.
ಹೆದ್ದಾರಿ ಬದಿಯ 740ಕ್ಕೂ ಹೆಚ್ಚು ಬಾರ್ ಮತ್ತು ಪಬ್‌ಗಳನ್ನು ನೋಟಿಸ್ ನೀಡಿ ಸ್ಥಗಿತಗೊಳಿಸಲಾಗಿದ್ದರೂ, ಮದ್ಯ ಪೂರೈಕೆಯಲ್ಲಿ ಹೆಚ್ಚಿನ ವ್ಯತ್ಯಾಸ ಕಂಡು ಬಂದಿಲ್ಲ. ಜುಲೈ 1ರಿಂದ ಹೆದ್ದಾರಿಯಿಂದ 500 ಮೀಟರ್ ಒಳಗಿನ ಮದ್ಯದಂಗಡಿಗಳನ್ನು ಸ್ಥಗಿತಗೊಳಿಸಿದರಿಂದ ಮದ್ಯ ಪೂರೈಕೆಯ ಪ್ರಮಾಣ ಶೇ.5ರಷ್ಟು ಕಡಿಮೆಯಾಗಿದೆ. ಉಳಿದ ಕಡೆಗಳಲ್ಲಿ ಬೇಡಿಕೆ ಹೆಚ್ಚಾಗಿರುವುದರಿಂದ ಹೆಚ್ಚಿನ ಬದಲಾವಣೆ ಆಗಿಲ್ಲ ಎಂದು ಅಬಕಾರಿ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.