Advertisement
ಬೇಸಿಗೆ ಬಿಸಿಲಿನಿಂದ ಬಸವಳಿದ ಜನರಿಗೆ ಸೋಮವಾರ ಸಂಜೆ ಗುಡುಗು, ಸಿಡಿಲು, ಬಿರುಗಾಳಿಯೊಂದಿಗೆ ಬಂದ ಮಳೆ ರಾತ್ರಿ 9ರವರೆಗೆ ಜಿಟಿಜಿಟಿ ಮಳೆಯಾಗಿದ್ದು, ಮೆಣೇಧಾಳ, ಮೆತ್ತಿನಾಳ, ಗಂಗನಾಳ, ಹಿರೇತೆಮ್ಮಿನಾಳ, ವಿರುಪಾಪುರ ಸುತ್ತಮುತ್ತಲಿನ ರೈತರ ಜಮೀನುಗಳ ಬದುಗಳಲ್ಲಿ ಅಲ್ಲಿಲ್ಲಿ ನೀರು ನಿಂತಿದೆ. ಮೆಣೇಧಾಳ ಗ್ರಾಮದ ಹೊರ ವಲಯದಲ್ಲಿರುವ ಕೆಲ ಮನೆಗಳ ತಗಡುಗಳು ಗಾಳಿ ರಭಸಕ್ಕೆ ಕಿತ್ತಿದ್ದು. 8-10 ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ.
Related Articles
Advertisement
ಗಂಗಾವತಿ ತಾಲೂಕಿನಾದ್ಯಂತ ಸೋಮವಾರ ರಾತ್ರಿ ಸುರಿದ ಮಳೆ ಗಾಳಿಗೆ ತೀವ್ರ ಹಾನಿಯಾಗಿದ್ದು ಮನೆ ತಗಡು, ಹಂಚು ಹಾರಿ ಹೋಗಿವೆ. ಸಿದ್ದಿಕೇರಿ, ಕಲ್ಲಪ್ಪನಕ್ಯಾಂಪ್, ಸೂರ್ಯನಾಯಕನ ತಾಂಡದಲ್ಲಿ ಹೆಚ್ಚು ಹಾನಿಯಾಗಿದೆ. ಮನೆ ತಗಡು, ಹಂಚು ಹಾಗೂ ಗುಡಿಸಲು ಮೇಲಿನ ಚತ್ತು ಕಿತ್ತುಹೋಗಿದ್ದು ಅಪಾರ ಹಾನಿ ಸಂಭವಿಸಿದೆ. ಗಿಡ ಮರಗಳು ನೆಲಕ್ಕುರುಳಿದ್ದು, ಭತ್ತದ ರಾಶಿಗೆ ಮಳೆ ನೀರು ನುಗ್ಗಿದೆ. ಮೂರು ಗ್ರಾಮಗಳಲ್ಲಿ ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ವಿದ್ಯುತ್ ಸಂಪರ್ಕ ಕಡಿತವಾಗಿದೆ. ಇದರಿಂದ ಕುಡಿಯುವ ನೀರಿಗೆ ತೊಂದರೆಯುಂಟಾಗಿದೆ. ನಿರಾಶ್ರಿತರಿಗೆ ಸರಕಾರಿ ಶಾಲೆಗಳಲ್ಲಿ ಆಶ್ರಯ ಕಲ್ಪಿಸಲಾಗಿದೆ. ಸ್ಥಳಕ್ಕೆ ಕಂದಾಯ ನಿರೀಕ್ಷಕ ಮಂಜುನಾಥ ಸ್ವಾಮೀ ಭೇಟಿ ನೀಡಿ ಹಾನಿಯ ಸಮೀಕ್ಷೆ ನಡೆಸಿದ್ದಾರೆ. ಮಳೆ ಗಾಳಿಯಿಂದ ಹಾನಿ ಗೊಳಗಾದ ಗ್ರಾಮಗಳಿಗೆ ಶಾಸಕ ಪರಣ್ಣ ಮುನವಳ್ಳಿ ಪುತ್ರ ಸಾಗರ ಮುನವಳ್ಳಿ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಿರಾಶ್ರಿತರಿಗೆ ವೈಯಕ್ತಿಕ ನೆರವು ನೀಡಿದರು.