Advertisement

ಭಾರೀ ಬಿರುಗಾಳಿ-ಮಳೆಗೆ ಅಪಾರ ಹಾನಿ

03:47 PM May 25, 2018 | Team Udayavani |

ಹರಪನಹಳ್ಳಿ: ತಾಲೂಕಿನಾದ್ಯಂತ ಬುಧವಾರ ರಾತ್ರಿ ಬಿರುಗಾಳಿ ಸಹಿತ ಸುರಿದ ಮಳೆಗೆ ಮನೆಯ ಛಾವಣಿ ಕುಸಿದು
ಬಾಣಂತಿ ಹಾಗೂ ಮರ ಬಿದ್ದು ಬೈಕ್‌ ಸವಾರ ಗಾಯಗೊಂಡಿದ್ದು, 24ಕ್ಕೂ ಹೆಚ್ಚು ಮನೆಗಳು ಭಾಗಶಃ ಹಾನಿಗೊಳಗಾಗಿವೆ. ವಿವಿಧೆಡೆ 133 ವಿದ್ಯುತ್‌ ಕಂಬಗಳು ಧರೆಗುರುಳಿದ್ದು, ದಾಳಿಂಬೆ ಮತ್ತು ಪಪ್ಪಾಯಿ ಬೆಳೆ ನೆಲಕ್ಕಚ್ಚಿದೆ.

Advertisement

ಹಿರೇಮೇಗಳಗೆರೆ ಪಂಚಾಯ್ತಿ ವ್ಯಾಪ್ತಿಯ ನಾಗತಿಕಟ್ಟೆ ತಾಂಡದಲ್ಲಿ ಗಾಳಿ ರಭಸಕ್ಕೆ ಮನೆಯ ಛಾವಣಿ ಸಿಮೆಂಟ್‌
ಶೀಟ್‌ ಬಾಣಂತಿ ಶಕುಂತಲ (23) ತಲೆ ಮೇಲೆ ಬಿದ್ದು ಗಾಯಗೊಂಡಿದ್ದಾರೆ. ಶಕುಂತಲ ತಮ್ಮ 4 ತಿಂಗಳ ಅವಳಿ
ಮಕ್ಕಳನ್ನು ಮಡಿಲಲ್ಲಿ ರಕ್ಷಿಸಿಕೊಂಡಿದ್ದಾರೆ. ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಅರಸೀಕೆರೆ ಗ್ರಾಮದಲ್ಲಿ ಬೈಕ್‌ ಸವಾರ ಹಾದಿಮನಿ ಪ್ರಶಾಂತ್‌ ಎಂಬುವರು ಮರ ಬಿದ್ದು ಗಾಯಗೊಂಡು ದಾವಣಗೆರೆಯ ಬಾಪೂಜಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ಗ್ರಾಮದಲ್ಲಿ ಮರ ಬಿದ್ದು ಎಮ್ಮೆ ಅಸುನೀಗಿದೆ. ಮಡಕಿನಿಚ್ಚಾಪುರ ಗ್ರಾಮದ ಪಿ.ಅಂಜನಗೌಡ, ಪಿ.ಚನ್ನಬಸವನಗೌಡ, ಶೈಲಜಾ ಎಂಬುವರಿಗೆ ಸೇರಿದ 8.10 ಎಕರೆ ದಾಳಿಂಬೆ ಬೆಳೆ ಹಾಗೂ ಡಗ್ಗಿಬಸಾಪುರ ಗ್ರಾಮದ ವೀರಬಸಪ್ಪ ಎಂಬುವವರ 5.10 ಎಕರೆ ಪಪ್ಪಾಯಿ ಬೆಳೆ ಗಾಳಿಗೆ ಹಾನಿಯಾಗಿದೆ.

ಕಮ್ಮತ್ತಹಳ್ಳಿ ಗ್ರಾಮದಲ್ಲಿ 7 ಮನೆ, ಡಗ್ಗಿಬಸಾಪುರ ಗ್ರಾಮದಲ್ಲಿ 11 ಮನೆ, ಬೆಣ್ಣೆಹಳ್ಳಿ ಗ್ರಾಮದಲ್ಲಿ 5 ಮನೆ, ಕಡಬಗೆರೆ ಗ್ರಾಮದಲ್ಲಿ 1 ಮನೆ ಭಾಗಶಃ ಹಾನಿಯಾಗಿವೆ. ಸಿಂಗ್ರಿಹಳ್ಳಿ ಗ್ರಾಮದಲ್ಲಿ ಮನೆ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಉಚ್ಚಂಗಿದುರ್ಗ ಗ್ರಾಮದ ಗುಡ್ಡದ ಮೇಲಿನ ಪೂಜಾರ್‌ ಮಂಜಪ್ಪನ ಮನೆಯ ಹತ್ತಿರ ಬಿರುಗಾಳಿಗೆ ವಿದ್ಯುತ್‌ ಕಂಬ ಮುರಿದು ಮನೆಯ ಮೇಲೆ ಬಿದ್ದಿವೆ.

ಬೇವಿನಹಳ್ಳಿ ದೊಡ್ಡ ತಾಂಡಗಳಲ್ಲಿ ವಿದ್ಯುತ್‌ ಕಂಬಗಳು ನೆಲಕ್ಕುರುಳಿವೆ. ನಾಗತಿಕಟ್ಟೆ ಗಾಂಗ್ಯನಾಯ್ಕ ಎಂಬುವವರ ಮನೆಯ ಮೇಲೆ ಬೃಹತ್‌ ಜಾಲಿ ಮರ ಬಿದ್ದಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ತಾಲೂಕಿನ ವಿವಿಧ ಗ್ರಾಮಗಳಲ್ಲಿ ನೂರಾರು ಮರಗಳು ಬೇರು ಸಹಿತ ಉರುಳಿವೆ.

Advertisement

ಪಟ್ಟಣದ ದೇವರ ತಿಮ್ಮಲಾಪುರ ಗ್ರಾಮದ ಅರಸೀಕೆರೆ ರಸ್ತೆಯಲ್ಲಿ ಬೃಹತ್‌ ಮರವೊಂದು ವಿದ್ಯುತ್‌ ಕಂಬದ ಮೇಲೆ ಉರುಳಿ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಬೆಸ್ಕಾಂ ಸಿಬ್ಬಂದಿ ಗುರುವಾರ ಮುಂಜಾನೆಯಿಂದಲೇ ದುರಸ್ತಿ ಕಾರ್ಯ ಕೈಗೊಂಡು ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಅದೇ ರಸ್ತೆಯಲ್ಲಿ ಮತ್ತೂಂದು ಮರ ಬಿದ್ದಿದೆ.

ಪಟ್ಟಣದ ಬಿಎಸ್‌ಎನ್‌ಎಲ್‌ ಕಚೇರಿ ಬಳಿ 1 ಮರ, ಮೇಗಳಪೇಟೆ-1, ಗುಡಿಕೇರಿ 1 ಮರ ಧರೆಗುರುಳಿವೆ. ಚರ್ಚ್‌ ಬಳಿ ಬೃಹತ್‌ ಗಾತ್ರದ ಮರವೊಂದು ಬಿದ್ದ ಪರಿಣಾಮ ಹಡಗಲಿ ರಸ್ತೆ ಸಂಪರ್ಕಕ್ಕೆ ತೊಂದರೆ ಉಂಟಾಗಿತ್ತು. ಹೊರವಲಯದ
ಮೈಲಾರಲಿಂಗೇಶ್ವರ ದೇವಸ್ಥಾನದ ಬಳಿಯೂ ವಿದ್ಯುತ್‌ ಕಂಬದ ಮೇಲೆ ಮರ ಬಿದ್ದಿದೆ.

ವಿದ್ಯುತ್‌ ಸಂಪರ್ಕ ಕಡಿತ: ಪಟ್ಟಣದಲ್ಲಿ ಬುಧವಾರ ರಾತ್ರಿ ವಿವಿಧೆಡೆ ಮರಗಳು ಬಿದ್ದ ಪರಿಣಾಮ ರಾತ್ರಿಯಿಡಿ ವಿದ್ಯುತ್‌
ಸಂಪರ್ಕ ಕಡಿತಗೊಂಡಿತ್ತು. ಬೆಳಿಗ್ಗೆ 11 ಗಂಟೆಯಾದರೂ ವಿದ್ಯುತ್‌ ಸರಬರಾಜು ಆರಂಭವಾಗದೇ ಜನರು ಪರದಾಡುವಂತಾಯಿತು. ತಾಲೂಕಿನಲ್ಲಿ ಬುಧವಾರ ರಾತ್ರಿ ಬಿರುಗಾಳಿಗೆ 133 ವಿದ್ಯುತ್‌ ಕಂಬಗಳು ಮುರಿದು, 21
ವಿದ್ಯುತ್‌ ಪರಿವರ್ತಕೆಗಳು ವಿಫಲವಾಗಿವೆ ಎಂದು ಬೆಸ್ಕಾಂ ಇಲಾಖೆ ಎಇಇ ಎಸ್‌. ಭೀಮಪ್ಪ ತಿಳಿಸಿದ್ದಾರೆ.
 
ಹರಪನಹಳ್ಳಿ ವ್ಯಾಪ್ತಿಯಲ್ಲಿ-25 ವಿದ್ಯುತ್‌ ಕಂಬ, ಕಂಚಿಕೇರೆ-6, ತೆಲಿಗಿ-34, ನಜೀರ್‌ನಗರ-19, ಅರಸೀಕೆರೆ-10, ಉಚ್ಚಂಗಿದುರ್ಗ-22, ನೀಲಗುಂದ-15 ಸೇರಿ ಒಟ್ಟು 133 ಕಂಬಗಳು ಮುರಿದು ಬಿದ್ದಿವೆ. 25 ಕೆ.ವಿ.ಎ, 63ಕೆ.ವಿ.ಎ. ಹಾಗೂ 100 ಕೆವಿಎಸಂಖ್ಯೆಯ 21 ವಿದ್ಯುತ್‌ ಪರಿವರ್ತಕಗಳು ವಿಫಲಗೊಂಡಿವೆ. ಮುರಿದು ಬಿದ್ದಿರುವ ವಿದ್ಯುತ್‌ ಕಂಬಗಳನ್ನು ಬದಲಾಯಿಸುವ ಪ್ರಕ್ರಿಯೆಗೆ ಈಗಾಗಲೇ ಚಾಲನೆ ನೀಡಲಾಗಿದೆ. ಗ್ರಾಹಕರು ಸಹಕರಿಸುವಂತೆ ಮನವಿ ಮಾಡಿದ್ದಾರೆ. 

ಮಳೆ ವರದಿ ಹರಪನಹಳ್ಳಿ-55.3 ಮಿ.ಮೀ, ಅರಸೀಕೆರೆ-15.2, ಚಿಗಟೇರಿ-13.2, ತೆಲಿಗಿ-5.4, ಹಲುವಾಗಲು-12.2, ಹಿರೇಮೇಗಳಗೆರೆ-7.2, ಉಚ್ಚಂಗಿದುರ್ಗ-12ಮಿ. ಮೀ ಮಳೆ ಸುರಿದಿದೆ ಎಂದು ತಹಸೀಲ್ದಾರ್‌ ಎಲ್‌.ಶಿವಶಂಕರನಾಯ್ಕ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next