ಮುಂಡರಗಿ: ದುಂದುವೆಚ್ಚ ಕಡಿಮೆ ಮಾಡಲು ಸಾಮೂಹಿಕ ವಿವಾಹಗಳು ಪೂರಕವಾಗಿವೆ. ಸಮಾಜದ ಒಳತಿಗಾಗಿ ಸುಮಧುರವಾದ ಬಾಂಧವ್ಯ ನಿಭಾಯಿಸುವುದೇ ದಾಂಪತ್ಯ ಜೀವನವಾಗಿದೆ ಎಂದು ಶ್ರೀ ಜಗದ್ಗುರು ಡಾ| ಅನ್ನದಾನೀಶ್ವರ ಶಿವಯೋಗಿಗಳು ಹೇಳಿದರು.
ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಪರರಿಗೆ ಉಪಕಾರ ಮಾಡುವುದು ಪುಣ್ಯದ ಕೆಲಸ. ಸತಿಪತಿಗಳು ಮಿತ ಸಂಸಾರ ಹೊಂದಿ ಮಕ್ಕಳನ್ನು ದೇಶದ ಸತ್ಪ್ರಜೆಗಳು ಆಗುವಂತೆ ಸಂಸ್ಕಾರ ನೀಡಬೇಕು. ಆತ್ಮಗೌರವ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಸತಿಪತಿಗಳು ಸುತ್ತಲಿನ ಪರಿಸರವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು. ಮರಗಳನ್ನು ನೆಟ್ಟು, ಮಕ್ಕಳಂತೆ ಪಾಲನೆ-ಪೋಷಣೆ ಮಾಡಬೇಕು ಎಂದರು.
ಪುರಸಭೆ ಅಧ್ಯಕ್ಷೆ ಕವಿತಾ ಅಂದಪ್ಪ ಉಳ್ಳಾಗಡ್ಡಿ ಮಾತನಾಡಿ, ಗುರುವಿನ ಆರ್ಶಿವಾದವನ್ನು ಪಡೆದು ಬದುಕು ಸಾಗಿಸಲು ಮುಂದಾಗಬೇಕು. ಗುರುವಿನ ಮಾರ್ಗದರ್ಶನವಿದ್ದರೆ ಹಸನಾಗಿ ಬಾಳಲು ಸಾಧ್ಯವಾಗಲಿದೆ ಎಂದು ಹೇಳಿದರು. ಡಾ| ಚನ್ನಮಲ್ಲ ಸ್ವಾಮಿಜಿ ಮಾತನಾಡಿ, ಸ್ವಂತಿಕೆ ಇಲ್ಲದ ಬದುಕು ಬದುಕೇ ಅಲ್ಲ. ಇನ್ನೊಬ್ಬರ ಎದುರು ಕೈಚಾಚುವುದು ಸಲ್ಲದು. ರೈತರು ಇನ್ನೊಬ್ಬರ ಮುಂದೆ ಕೈಯೊಡ್ಡದೇ ನೆಲವನ್ನು ಹಿಡಿದು ಉತ್ತಿ ಬಿತ್ತಿ ಬೆಳೆ ಬೆಳೆದರೆ ಭೂಮಿತಾಯಿ
ಕೈಹಿಡಿಯುತ್ತಾಳೆ ಎಂದರು.
ಶ್ರೀ ಚನ್ನವೀರ ಸ್ವಾಮೀಜಿ ಮಾತನಾಡಿ, ದಂಪತಿಗಳು ಪರಸ್ಪರ ಅರ್ಥ ಮಾಡಿಕೊಂಡು ಒಂದೇ ಮನಸ್ಸಿನಿಂದ ಬಾಳಬೇಕು. ಕಾಯಾ ವಾಚಾ ಮನಸಾ ಒಂದಾಗಿ ಬಾಳುವ ಮೂಲಕ ಅನನ್ಯವಾದ ಬದುಕು ನಮ್ಮದಾಗಿಸಿಕೊಳ್ಳಬೇಕು. ಬರಗಾಲದ ನಾಡಿನಲ್ಲಿ ಸಾಮಾಜಿಕ ಕಾರ್ಯದ ಮೂಲಕ ಶ್ರೀ ಅನ್ನದಾನೀಶ್ವರ ಮಠವು ಉತ್ತಮವಾದ ಕೆಲಸವನ್ನು ಮಾಡುತ್ತಿದೆ ಎಂದು ಹೇಳಿದರು.
ಶ್ರೀ ಗುರು ಷಡಕ್ಷರಯ್ಯ ಅಳವಂಡಿಮಠ ಹಾಗೂ ಇನ್ನಿತರ ಗುರುಗಳ ನೇತೃತ್ವದಲ್ಲಿ 23 ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟತು. ಶ್ರೀಮಠದ ಉತ್ತರಾಧಿಕಾರಿಗಳು ಡಾ| ಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀ ಚನ್ನವೀರ ಸ್ವಾಮೀಜಿ, ಡಾ| ವಿ.ಕೆ. ಕೊಳೂರುಮಠ ಮೊದಲಾದವರಿದ್ದರು. ಕರಬಸಪ್ಪ ಹಂಚಿನಾಳ, ಡಾ| ಬಿ.ಜಿ. ಜವಳಿ, ಯು.ಸಿ. ಹಂಪಿಮಠ, ಶರಣಪ್ಪ ಕುಬಸದ, ವೀರೇಶ ಸಜ್ಜನ, ರವಿ ಕುಂಬಾರ, ಅಂದಪ್ಪ ಉಳ್ಳಾಗಡ್ಡಿ, ವಿಶ್ವನಾಥ ಗಡ್ಡದ, ಟಿ.ಬಿ. ದಂಡಿನ, ದೇವು ಹಡಪದ, ಬಾಬಣ್ಣ ಶಿವಶೆಟ್ಟಿ, ಶರಣಪ್ಪ ಅಂಗಡಿ, ಅಜ್ಜಪ್ಪ ಲಿಂಬಿಕಾಯಿ, ರವೀಂದ್ರಗೌಡ ಪಾಟೀಲ ಇದ್ದರು.