Advertisement

ಜಮೀನು ಸಿಗದಿದ್ದರೆ ಸಾಮೂಹಿಕ ಆತ್ಮ ಹತ್ಯೆ ಎಚ್ಚರಿಕೆ

05:30 PM Aug 07, 2022 | Shwetha M |

ಮುದ್ದೇಬಿಹಾಳ: ಗಂಗೂರ ಗ್ರಾಮದ ಮಾದಿಗ ಸಮಾಜದ ಕುಟುಂಬವೊಂದಕ್ಕೆ ಶತಮಾನದ ಹಿಂದೆ ನೀಡಿದ್ದ ಮಾರುತೇಶ್ವರ ದೇವಾಲಯದ ಚಾಕರಿ ಜಮೀನನ್ನು ಮಾದಿಗ ಸಮಾಜದ ಸ್ಮಶಾನಕ್ಕಾಗಿ ಬಳಸಲು ನೀಡಬೇಕು ಎಂದು ಆಗ್ರಹಿಸಿ ದಲಿತ ಸಂಘಟನೆಗಳ ಒಕ್ಕೂಟದೊಂದಿಗೆ ವಿವಾದಿತ ಜಮೀನಿನಲ್ಲಿ ಮಾದಿಗ ಕುಟುಂಬದವರು ಶನಿವಾರದಿಂದ ಧರಣಿ ಪ್ರಾರಂಭಿಸಿದ್ದಾರೆ.

Advertisement

ಈ ಕುರಿತು ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಗಿದ್ದು ಈ ಜಮೀನಿಗೋಸ್ಕರ ನಡೆಸಿದ ಗಂಗೂರಿನಿಂದ ಮುದ್ದೇಬಿಹಾಳವರೆಗಿನ ಪಾದಯಾತ್ರೆ ಸೇರಿ ಕೆಲ ಹಂತದ ಹೋರಾಟಗಳನ್ನು ಉಲ್ಲೇಖೀಸಲಾಗಿದೆ. ಆ. 6ರ ಬೆಳಗ್ಗೆ 10:30ರಿಂದ ಆ. 14ರ ಮಧ್ಯರಾತ್ರಿ 12ರವರೆಗೆ ಧರಣಿ ಸತ್ಯಾಗ್ರಹ ನಡೆಸಲಾಗುತ್ತದೆ. ಸೂಕ್ತ ಸ್ಪಂದನೆ ದೊರೆಯದಿದ್ದರೆ ಅಂದೇ ಮಧ್ಯರಾತ್ರಿ ಗ್ರಾಮದ ಮಾದಿಗ ಸಮಾಜದವರಿಂದ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳಲಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಧರಣಿ ಸತ್ಯಾಗ್ರಹಕ್ಕೆ ಸೂಕ್ತ ಬಂದೋಬಸ್ತ್ ಒದಗಿಸಬೇಕು ಎಂದು ಕೋರಲಾಗಿದೆ. ಇದೇ ವಿಷಯವಾಗಿ ಆ. 10ರಿಂದ 14ರವರೆಗೆ ಗಂಗೂರ ಮತ್ತು ಮುದ್ದೇಬಿಹಾಳದಲ್ಲಿ ಏಕ ಕಾಲಕ್ಕೆ ದಲಿತ ಸಂಘಟನೆಗಳ ಒಕ್ಕೂಟದಿಂದ ಧರಣಿ ಸತ್ಯಾಗ್ರಹ ಆರಂಭಿಸಲಾಗುತ್ತದೆ. ಆ. 11ರಂದು ದಲಿತರ ಜಮೀನು ಖರೀದಿ ಕೊಟ್ಟವರಿಗೆ, ಖರೀದಿಸಿದವರಿಗೆ ಒಂದು ಹನಿ ರಕ್ತ ಸಂಗ್ರಹಿಸಿ ನೀಡಲಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಗಂಗೂರ ಗ್ರಾಮದ ರಿ.ಸ.ನಂ. 11/2, 11/3, 11/4 ಜಮೀನುಗಳನ್ನು ಸ್ಮಶಾನ ಎಂದು ಪರಿಗಣಿಸಬೇಕು. ಜಮೀನು ತೆಗೆದುಕೊಂಡವರಿಂದ ಸರ್ಕಾರ ಖರೀದಿಸಿ ಮರಳಿ ಮಾದಿಗ ಸಮಾಜಕ್ಕೆ ನೀಡಬೇಕು. ಖರೀದಿಸಿದ ವ್ಯಕ್ತಿ ಒಪ್ಪದಿದ್ದರೆ ಭೂಸ್ವಾ ಧೀನ ಮಾಡಿಕೊಂಡು ಮಾದಿಗ ಸಮಾಜಕ್ಕೆ ನೀಡಬೇಕು ಎನ್ನುವ ಹಕ್ಕೊತ್ತಾಯ ಈಡೇರಿಕೆಗೆ ಆಗ್ರಹಿಸಲಾಗಿದೆ.

ಡಿ.ಬಿ.ಮುದೂರ, ಮಂಗಳಪ್ಪ ಮುದೂರ, ಹನುಮಂತ ಮಾದರ, ಯಮನಪ್ಪ ಮಾದರ, ನಿಜವ್ವ ಮಾದರ, ಹುಲಗಪ್ಪ ಮಾದರ, ಬಸವರಾಜ ಮುದೂರ, ಹನುಮವ್ವ ಮಾದರ, ಗಂಗಪ್ಪ ಮಾದರ, ಆನಂದ ಮುದೂರ, ಕಟ್ಟಿಮನಿ ಮತ್ತಿತರರು ಗಂಗೂರಲ್ಲಿ ನಡೆದ ಧರಣಿಯಲ್ಲಿ ಪಾಲ್ಗೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next