Advertisement

ನಾಲೆಗಳಿಗೆ ನೀರು ಹರಿಸದಿದ್ದರೆ ಸಾಮೂಹಿಕ ಆತ್ಮಹತ್ಯೆ

03:22 PM Jun 26, 2019 | Suhan S |

ಮಂಡ್ಯ: ಜಿಲ್ಲೆಯ ರೈತರಲ್ಲಿ ಆತಂಕ ಹೆಚ್ಚಿಸಿದ್ದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಒಳಹರಿವು ಹೆಚ್ಚಾದರೆ ಮಾತ್ರ ನೀರು ಬಿಡಲು ಆದೇಶ ಹೊರಡಿಸಿರುವ ನಡುವೆಯೂ ಬೆಳೆಗೆ ಬೇಕಾದಷ್ಟು ನೀರು ಹರಿಸದಿದ್ದರೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ರೈತ ಸಂಘದ ಕಾರ್ಯಕರ್ತರು ಅಹೋರಾತ್ರಿ ಧರಣಿ 5ನೇ ದಿನವೂ ಮುಂದುವರಿದಿದೆ.

Advertisement

ಸರ್ಕಾರ ಕೆಆರ್‌ಎಸ್‌ ಹಾಗೂ ಹೇಮಾವತಿ ವ್ಯಾಪ್ತಿಯ ಎಲ್ಲಾ ನಾಲೆಗಳಿಗೂ ನೀರು ಬಿಡುವುದಾಗಿ ಭರವಸೆ ನೀಡಿದರೆ ಮಾತ್ರ ಅಹೋರಾತ್ರಿ ಧರಣಿ ಹಿಂಪಡೆಯುತ್ತೇವೆ. ಇಲ್ಲವಾದರೆ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಪಟ್ಟು ಬದಲಿಸದೆ ಧರಣಿ ಮುಂದುವರಿಸಿದ್ದಾರೆ.

ರೈತ ನಾಯಕ ದರ್ಶನ್‌ ಪುಟ್ಟಣ್ಣಯ್ಯ ನೇತೃತ್ವದಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿಗೆ ಮಂಗಳವಾರ ಕರ್ನಾಟಕ ರಕ್ಷಣಾ ವೇದಿಕೆ ಕೈ ಜೋಡಿಸಿದೆ. ಜಿಲ್ಲೆಯಲ್ಲಿ ಒಣಗುತ್ತಿರುವ ಬೆಳೆಗಳಿಗೆ ಹಾಗೂ ಜನ ಜಾನುವಾರುಗಳಿಗೆ ಕುಡಿಯಲು ನೀರು ಹರಿಸಬೇಕು ಎಂಬುದು ಪ್ರತಿಭಟನಾ ನಿರತರ ಆಗ್ರಹವಾಗಿದೆ.

ದೆಹಲಿಯಲ್ಲಿ ನಡೆಯುತ್ತಿದ್ದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ಶುಭ ಸುದ್ದಿ ಹೊರ ಬಿದ್ದರೂ ಪ್ರತಿಭಟನಾ ನಿರತರಲ್ಲಿ ಆಶಾದಾಯಕ ಬೆಳೆವಣಿಗೆಗಳು ಮೂಡಿತು. ಪ್ರಾಧಿಕಾರ ಕಾವೇರಿ ಕಣಿವೆಯಲ್ಲಿ ನಿರೀಕ್ಷೆಯಷ್ಟು ಮಳೆಯಾದರೆ ಮಾತ್ರ ತಮಿಳುನಾಡಿಗೆ ನೀರು ಬಿಡಬಹುದು ಎಂದು ತೀರ್ಮಾನಿಸಿದೆ. ಆದರೆ ನಾಲೆಗಳಿಗೆ ನೀರು ಬಿಡಬೇಕೋ ಅಥವಾ ಬೇಡವೋ ಎಂದು ಹೇಳಿಲ್ಲ. ಆದ್ದರಿಂದ ಕೂಡಲೇ ಸರ್ಕಾರ ರೈತರ ಬೆಳೆ ಉಳಿಸಿಕೊಳ್ಳಲು ಹಾಗೂ ಜನ ಜಾನುವಾರುಗಳಿಗೆ ಕುಡಿಯುವ ನೀರು ಪೂರೈಸಲು ಹೇಮಾವತಿ ಹಾಗೂ ಕೆಆರ್‌ಎಸ್‌ ವ್ಯಾಪ್ತಿಯ ಎಲ್ಲಾ ನಾಲೆಗಳಿಗೆ ನೀರು ಹರಿಸುವವರೆಗೂ ಧರಣಿ ಹಿಂಪಡೆಯಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ರೈತ ನಾಯಕ ದರ್ಶನ್‌ ಪುಟ್ಟಣ್ಣಯ್ಯ ಮಾತನಾಡಿ, ಸರ್ಕಾರ ಹಾಗೂ ಜಲ ಸಂಪನ್ಮೂಲ ಸಚಿವರು ರೈತರ ಮನವಿಯನ್ನು ಪುರಸ್ಕರಿಸಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ಮುಂದೆ ವಾದ ಮಂಡಿಸಿ ರೈತಪರ ಆದೇಶ ಹೊರ ಬರಲು ಕಾರಣರಾಗಿರುವುದಕ್ಕೆ ಅಭಿನಂದಿಸುತ್ತೇವೆ. ಪ್ರಾಧಿಕಾರ ತಮಿಳುನಾಡಿಗೆ ನೀರು ಹರಿಸುವ ಚಿಂತನೆ ನಡೆಸದಿರುವುದು ರೈತರ ಮನದಲ್ಲಿ ಇದ್ದ ದುಗಡ ದೂರ ಮಾಡಿದೆ. ಜಿಲ್ಲೆಯಲ್ಲಿ ರೈತರು 60 ಸಾವಿರ ಎಕರೆಯಲ್ಲಿ ಕಬ್ಬು ಬೆಳೆದಿದ್ದಾರೆ. ಅದು ಒಣಗುತ್ತಿದೆ. ಇನ್ನೊಂದು ಕಟ್ಟು ನೀರು ಹರಿಸಿದರೆ ರೈತರ ಬೆಳೆ ಕೈಗೆ ಸಿಗಲಿದೆ. ಅದಕ್ಕೆ ಸರ್ಕಾರ ಮನಸ್ಸು ಮಾಡಿ ರೈತರ ರಕ್ಷಣೆಗೆ ಮುಂದಾಗಬೇಕು ಎಂದು ಮನವಿ ಮಾಡಿದರು.

Advertisement

ಈಗಾಗಲೇ ಬೆಳೆದಿರುವ ಕಬ್ಬನ್ನು ಆಲೆಮನೆಯವರು ಪ್ರತಿ ಟನ್‌ಗೆ 1500 ರೂ.ನಂತೆ ಕಟಾವು ಮಾಡಿಕೊಳ್ಳುವುದಾಗಿ ಕೇಳುತ್ತಿದ್ದಾರೆ. ಇದು ಮುಂದುವರಿೆದರೆ ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ. ಕೂಡಲೇ ನೀರು ಹರಿಸುವ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಸೂಪರಿಂಟೆಂಡೆಂಟ್ ಮಾತಿಗೂ ಬೆಲೆ ಇಲ್ಲ:ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಎಂಜಿನಿಯರ್‌ ರಮೇಂದ್ರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ನಿರತ ರೈತರ ಮನವೊಲಿಕೆಗೆ ಮುಂದಾದರೂ ಇದಕ್ಕೆ ಸೊಪ್ಪು ಹಾಕದ ಪ್ರತಿಭಟನಾಕಾರರು, ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಆಗಮಿಸಬೇಕು. ಜಿಲ್ಲಾಡಳಿತಕ್ಕೆ ನೀರು ಹರಿಸಲು ಸಂಪೂರ್ಣ ಹಕ್ಕಿದೆ. ನಾಲೆಗಳಿಗೆ ನೀರು ಬಿಡಬೇಕು. ತಾವು ಇಲ್ಲಿಗೆ ಆಗಮಿಸಿರುವುದಕ್ಕೆ ತಮ್ಮ ಬಗ್ಗೆ ಗೌರವವಿದೆ. ಆದರೆ, ನೀರು ಹರಿಸುವ ಬಗ್ಗೆ ಮಾತನಾಡಿ, ಪ್ರತಿಭಟನೆ ನಿಲ್ಲಿಸಿ ಎಂದು ಮಾತ್ರ ಹೇಳಬೇಡಿ ಎಂದು ತಿರುಗೇಟು ನೀಡಿದರು.

ರೈತರ ಸಮಸ್ಯೆ ಆಲಿಸದ ಜಿಲ್ಲಾ ಸಚಿವರು:ದರ್ಶನ್‌ ಪುಟ್ಟಣ್ಣಯ್ಯ ತಮ್ಮ ವಿರುದ್ಧ ಪ್ರತಿಸ್ಪರ್ಧಿ ಎಂಬ ಕಾರಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್‌.ಪುಟ್ಟರಾಜು ರೈತರು ಧರಣಿ ನಡೆಸುತ್ತಿರುವ ಸ್ಥಳಕ್ಕೆ ಆಗಮಿಸಿಲ್ಲ. ಇಂತಹ ದ್ವೇಷದ ರಾಜಕಾರಣ ಬಿಡಬೇಕು. ಜಿಲ್ಲೆಯ ಜನರ ಸಮಸ್ಯೆಗಳನ್ನು ಆಲಿಸಬೇಕು. ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ರೈತರ ಸಮಸ್ಯೆಗೆ ಸ್ಪಂದಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಪರಿಣಾಮ ಎದುರಿಸುವ ಸಂದರ್ಭ ಮುಖ್ಯಮಂತ್ರಿಗಳಿಗೇ ಬರಲಿದೆ. ಜಿಲ್ಲೆಯ ಸಚಿವರು, ಶಾಸಕರು ಎಲ್ಲರೂ ಒಟ್ಟಾಗಿ ರೈತರ ಪರ ನಿಲ್ಲಬೇಕು ಎಂದು ಮನವಿ ಮಾಡಿದರು.

ಧರಣಿಯಲ್ಲಿ ಕಾಂಗ್ರೆಸ್‌ ಮುಖಂಡ ಗಣಿಗ ರವಿಕುಮಾರ್‌, ನಗರಸಭೆ ಸದಸ್ಯರಾದ ರಾಮಲಿಂಗಯ್ಯಘಿ, ಅನಿಲ್ಕುಮಾರ್‌, ಮುಖಂಡರಾದ ಹಾಲಹಳ್ಳಿ ರುದ್ರಪ್ಪಘಿ, ರಾಮಕೃಷ್ಣಯ್ಯ, ಪಣಕನಹಳ್ಳಿ ಸ್ವಾಮಿ, ಯರಹಳ್ಳಿ ಬೊಮ್ಮೇಗೌಡ, ಲತಾ ಶಂಕರ್‌, ಕೋಕಿಲಾ, ಎ.ಸಿ.ಮಾದೇಗೌಡ, ಚಂದ್ರು ಶಾಮಿಯಾನ, ಮಂಜುನಾಥ, ಕರವೇ ಮಹೇಶ್‌ ಸೇರಿದಂತೆ ಹಲವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next