ಮೈಸೂರು: ನಗರದ ಹೊರವಲಯದಲ್ಲಿರುವ ಲಿಂಗಾಂಬುದಿಪಾಳ್ಯದ ರಿಂಗ್ ರಸ್ತೆ ಬಳಿಯ ಖಾಸಗಿ ಬಡಾವಣೆಯಲ್ಲಿ ಬುಧವಾರ ರಾತ್ರಿ ಪ್ರಿಯಕರನ ಎದುರೇ ಯುವತಿಯ ಮೇಲೆ ಅತ್ಯಾಚಾರವೆಸಗಿರುವ ದುಷ್ಕರ್ಮಿಗಳು, ಇಬ್ಬರ ಮೇಲೂ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಇಬ್ಬರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಎಚ್.ಡಿ.ಕೋಟೆ ಮೂಲದ 28 ವರ್ಷದ ಯುವಕ ಮತ್ತು ಮೈಸೂರಿನ 23 ವರ್ಷ ವಯಸ್ಸಿನ ಯುವತಿ ನಗರದ ಖಾಸಗಿ ಹೋಟೆಲ್ನಲ್ಲಿ ನೌಕರರಾಗಿದ್ದಾರೆ. ಕಳೆದ 3-4 ತಿಂಗಳಿನಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದು, ನಗರದ ಬಡಾವಣೆಯಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದರು. ಬುಧವಾರ ಸಂಜೆ ಕೆಲಸ ಮುಗಿಸಿಕೊಂಡು ಸುತ್ತಾಡಲು ತೆರಳಿದ್ದು, ಲಿಂಗಾಂಬುದಿ ಪಾಳ್ಯ ಬಳಿಯ ರಿಂಗ್ ರಸ್ತೆಗೆ ಹೊಂದಿಕೊಂಡಂತಿರುವ ಖಾಸಗಿ ಬಡಾವಣೆಯ ಬಳಿ ಬೈಕ್ ನಿಲ್ಲಿಸಿ, ಕುಳಿತು ಕೊಂಡಿದ್ದರು. ರಾತ್ರಿ 10 ಗಂಟೆ ಸಮಯದಲ್ಲಿ ಅದೇ ಮಾರ್ಗದಲ್ಲಿ ಕಾರು ಮತ್ತು ಬೈಕ್‌ನಲ್ಲಿ ತೆರಳುತ್ತಿದ್ದ ಮೂರ್ನಾಲ್ಕು ಮಂದಿ ಯುವಕರು, ಸಮೀಪ ಬಂದು ಯುವತಿಯ ಜತೆ ಅನುಚಿತವಾಗಿ ವರ್ತಿಸಿದರು.
Advertisement
ಯುವತಿಯ ಪ್ರಿಯಕರ ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ದುಷ್ಕರ್ಮಿಗಳು ಯುವಕನ ಕಾಲಿನ ಮೇಲೆ ಕಲ್ಲು ಎತ್ತಿ ಹಾಕಿ, ಹಣೆಯ ಭಾಗಕ್ಕೆ ಕಲ್ಲಿನಿಂದ ಹೊಡೆದು, ಗಾಯಗೊಳಿಸಿದರು. ನಂತರ ಗುಂಪಿನಲ್ಲಿದ್ದ ಇಬ್ಬರು ಯುವಕರು, ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಆಕೆ ಕೂಗಿಕೊಂಡಾಗ, ಅದೇ ಮಾರ್ಗದಲ್ಲಿ ವಾಹನಗಳು ಬರುವುದನ್ನು ಕಂಡು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ನಿತ್ರಾಣಗೊಂಡಿದ್ದ ಯುವತಿ, ಸುಮಾರು ಅರ್ಧ ಕಿ.ಮೀ.ದೂರದಲ್ಲಿರುವ ರಿಂಗ್ ರಸ್ತೆವರೆಗೂ ಓಡಿ ಬಂದು, ದಾರಿಹೋಕರ ನೆರವಿನಿಂದ ಪೊಲೀಸರಿಗೆ ವಿಷಯ ತಿಳಿಸಿದಳು. ಪೊಲೀಸರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಪ್ರಿಯಕರ ಹಾಗೂ ಯುವತಿಯನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ.