Advertisement

ಶಿಕ್ಷಕರ ಸಂಘದಿಂದ ಬೃಹತ್‌ ಪ್ರತಿಭಟನೆ

10:27 AM Jul 10, 2019 | Suhan S |

ಗದಗ: ಪ್ರಾಥಮಿಕ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಾಲಿ ಪದವೀಧರರ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪದವೀಧರ ಶಿಕ್ಷಕರೆಂದು ಪರಿಗಣಿಸಿ, ವೇತನ ಶ್ರೇಣಿ ನಿಗದಿಗೊಳಿಸಬೇಕು ಎಂಬುದು ಸೇರಿದಂತೆ ಇನ್ನಿತರೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೇತೃತ್ವದಲ್ಲಿ ಮಂಗಳವಾರ ಸಾವಿರಾರು ಶಿಕ್ಷಕರು ನಗರದಲ್ಲಿ ಬೃಹತ್‌ ಪ್ರತಿಭಟನಾ ರ್ಯಾಲಿ ನಡೆಸಿದರು.

Advertisement

ಇಲ್ಲಿನ ಮುಳಗುಂದ ರಸ್ತೆಯಲ್ಲಿರುವ ರಾಜ್ಯ ಸರಕಾರಿ ನೌಕರರ ಭವನದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಮುಳಗುಂದ ನಾಕಾ, ಟಿಪ್ಪು ಸುಲ್ತಾನ್‌ ವೃತ್ತ, ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣದ ಮಾರ್ಗವಾಗಿ ಜಿಲ್ಲಾಡಳಿತ ಭವನದ ವರೆಗೆ ಬೃಹತ್‌ ಪ್ರತಿಭಟನೆ ನಡೆಸಿದರು. ಈ ನಡುವೆ ಮುಳಗುಂದ ನಾಕಾ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದ ಶಿಕ್ಷಕರು, ಕೆಲಕಾಲ ರಸ್ತೆ ತಡೆ ನಡೆಸಿ, ರಾಜ್ಯ ಸರಕಾರದ ಪರಿಷ್ಕೃತ ಸಿ ಆ್ಯಂಡ್‌ ಆರ್‌ ನಿಯಮಾವಳಿಗಳನ್ನು ಖಂಡಿಸಿ, ಧಿಕ್ಕಾರ ಕೂಗಿದರು.

ಬಳಿಕ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್‌.ಆರ್‌.ಶ್ರೀನಿವಾಸ ಅವರಿಗೆ ಮನವಿ ಸಲ್ಲಿಸಿ, ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ, ಹಳೇ ಪಿಂಚಣಿ ಯೋಜನೆಯನ್ನೇ ಮುಂದುವರಿಸಬೇಕು. ಕಳೆದ 3 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಇದೀಗ ಪ್ರಾರಂಭಗೊಂಡಿದ್ದು, ಇದರ ಬಳಿಕ ಕೋರಿಕೆ ಮೇರೆಗೆ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.

ರಾಜ್ಯದ ಎಲ್ಲ ಪ್ರಾಥಮಿಕ ಶಾಲೆಗಳಲ್ಲಿ ಎಲ್ಕೆಜಿ, ಯುಕೆಜಿ ಪ್ರಾರಂಭಿಸಬೇಕು. ಶಿಕ್ಷಕರ ಹೆಚ್ಚುವರಿ ಪ್ರಕ್ರಿಯೆಯಲ್ಲಿರುವ ನ್ಯೂನತೆಗಳನ್ನು ಸರಿಪಡಿಸಬೇಕು. ಪ್ರತಿ ವಿಷಯಕ್ಕೆ ಓರ್ವ ಶಿಕ್ಷಕರನ್ನು ಪರಿಗಣಿಸಬೇಕು. ಶಿಕ್ಷಕ ಮತ್ತು ವಿದ್ಯಾರ್ಥಿಗಳ ಅನುಪಾತ ಗುರುತಿಸುವಾಗ ಮುಖ್ಯಗುರುಗಳು ಹಾಗೂ ದೈಹಿಕ ಶಿಕ್ಷಕರನ್ನು ಕೈಬಿಡಬೇಕು. 6ನೇ ವೇತನ ಆಯೋಗದ ಅಂತಿಮ ವರದಿ ಶಿಫಾರಸ್ಸಿನಂತೆ ಮುಖ್ಯಗುರುಗಳಿಗೆ 10, 15, 20, 25 ಹಾಗೂ 30 ವರ್ಷದ ಬಡ್ತಿಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.

ಗ್ರಾಮೀಣ ಕೃಪಾಂಕ ಶಿಕ್ಷಕರ ವಜಾ ಆದ ಸೇವೆಯನ್ನು ಸತತ ಸೇವೆ ಎಂದು ಪರಿಗಣಿಸಿ, ಆರ್ಥಿಕ ಮತ್ತು ಇನ್ನಿತರೆ ಎಲ್ಲ ಸೌಲಭ್ಯಗಳನ್ನು ನೀಡಬೇಕು. ಜುಲೈ-219 ರಲ್ಲಿ ನಡೆದ ಅವೈಜಾನಿಕ ಸಿಆರ್‌ಪಿ, ಬಿಆರ್‌ಪಿಗಳ ಕಡ್ಡಾಯ ವರ್ಗಾವಣೆಯ ಕೌನ್ಸೆಲಿಂಗ್‌ನಿಂದಾದ ಅನ್ಯಾಯವನ್ನು ಸರಿಪಡಿಸಬೇಕು. ದೈಹಿಕ ಶಿಕ್ಷಕರನ್ನು ತಾಲೂಕಿ ಗೊಬ್ಬ ಬಿಆರ್‌ಪಿಯನ್ನಾಗಿ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಣ ಸಂಯೋಜಕರನ್ನಾಗಿ ನೇಮಿಸಬೇಕು ಎಂಬುದು ಸೇರಿದಂತೆ ಇನ್ನಿತರೆ ಬೇಡಿಕೆಗಳಿಗೆ ಮನವಿ ಮಾಡಿದರು.

Advertisement

ತಕ್ಷಣವೇ ರಾಜ್ಯ ಸರಕಾರ ತಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ, ಸೆ.5 ರಂದು ಶಿಕ್ಷಕರ ದಿನಾಚರಣೆಯನ್ನು ಬಹಿಷ್ಕರಿಸಿ, ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗುವು ದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಸರಧಿಕಾರಿ ನೌಕರರ ಸಂಘದ ಅಧ್ಯಕ್ಷ ರವಿ ಎಲ್.ಗುಂಜೀಕರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ವಿ.ಎಂ.ಹಿರೇಮಠ, ಪ್ರಧಾನ ಕಾರ್ಯದರ್ಶಿ ಎಸ್‌.ಎಚ್.ಸೈನಾಪುರ, ಉಪಾಧ್ಯಕ್ಷ ಬಿ.ಎಸ್‌.ಹರ್ಲಾಪುರ, ಎಸ್‌.ಎಲ್.ಶಿವಪ್ಪಗೌಡ್ರ, ಆರ್‌.ಎಸ್‌.ಹಾನಾಪುರ, ಎಚ್.ಆರ್‌.ಕೋಣಿಮನಿ, ಎಸ್‌.ಎನ್‌.ಅತಡಕರ, ಎಸ್‌.ಎಂ.ಪಾಟೀಲ, ಕೆ.ಎಂ.ನರಗುಂದ, ಎಸ್‌.ಎನ್‌.ಬಳ್ಳಾರಿ, ಬಿ.ವೈ.ಡೊಳ್ಳಿನ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next