Advertisement

ಶಾಂತಿ ಕದಡುತ್ತಿದೆ ಚೀನಾ: ಶಿಮುಶ

10:42 AM Jul 06, 2020 | Suhan S |

ಚಿತ್ರದುರ್ಗ: ಭಾರತ ದೇಶ ಶಾಂತಿ ಪ್ರಧಾನ ದೇಶ. ಆದರೆ ಚೀನಾ ಭಾರತದ ಶಾಂತಿ ಕದಡುವ ಕೆಲಸ ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗಡಿಗೆ ತೆರಳಿ ಸೈನಿಕರಿಗೆ ಧೈರ್ಯ ತುಂಬಿದ್ದಾರೆ ಎಂದು ಡಾ| ಶ್ರೀ| ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು.

Advertisement

ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಮತ್ತು ಎಸ್‌ಜೆಎಂ ಶಾಂತಿ ಮತ್ತು ಪ್ರಗತಿ ಫೌಂಡೇಶನ್‌ ಸಹಯೋಗದಲ್ಲಿ ನಡೆದ 30ನೇ ವರ್ಷದ 7ನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಮಾತನಾಡಿದರು. ಕಾಲ್ಕೆರೆದು ಜಗಳ ಮಾಡುವ ಮೂಲಕ, ಶಾಂತಿ ಕದಡುವ ಕೆಲಸಮಾಡುವುದು ಚೀನಾ ದೇಶಕ್ಕೆ ಹಿಡಿದಿರುವ ಗ್ರಹಣ. ನಮ್ಮ ಮೇಲೆ ವಿನಾಕಾರಣ ಹಿಂಸಾತ್ಮಕವಾದ ದಾರಿ ತುಳಿದಿದ್ದು ಅದನ್ನು ನಾವೆಲ್ಲ ಖಂಡಿಸಬೇಕು ಎಂದರು.

ಸೂರ್ಯ-ಚಂದ್ರನಿಗೆ ಗ್ರಹಣ ಹಿಡಿದರೆ ಬಿಟ್ಟು ಹೋಗುತ್ತದೆ. ಆದರೆ ಮಾನವನ ಬದುಕಿಗೆ ಹಿಡಿದಿರುವ ಗ್ರಹಣ ಬಿಡಿಸುವುದು ಕಷ್ಟ. ಸಮಾಜದಲ್ಲಿರುವ ಅಸಮಾನತೆ, ಅಸ್ಪೃಶ್ಯತೆ ಮಾನವನ ಬದುಕನ್ನು ಕಾಡುವ ಗ್ರಹಣಗಳಾಗಿವೆ ಎಂದು ತಿಳಿಸಿದರು.

ಭಾನುವಾರ ಗುರುಪೂರ್ಣಿಮೆ ಹಾಗು ಚಂದ್ರಗ್ರಹಣ ನಡೆಯುತ್ತಿವೆ. ಈ ಅವ ಧಿಯಲ್ಲಿ ವಿವಾಹ ಮಹೋತ್ಸವ ಮಾಡುತ್ತಿರುವುದು ನಮಗೆ ಅಮಂಗಲ ಅಲ್ಲ. ಶುಭಮಂಗಲ. ಬ್ರಹ್ಮಾಂಡದಲ್ಲಿ ಸೂರ್ಯಗ್ರಹಣ, ಚಂದ್ರಗ್ರಹಣ ಆಗಾಗ ಸಂಭವಿಸುತ್ತವೆ. ಗ್ರಹಣ ಒಂದು ವಿಸ್ಮಯ. ಸೂರ್ಯ ಮತ್ತು ಚಂದ್ರರು ಗ್ರಹಣದ ಬಗ್ಗೆ ಯೋಚಿಸುವುದಿಲ್ಲ. ಕಿರಣಗಳಿಗೆ ಮಾತ್ರ ಗ್ರಹಣ. ಈ ಗ್ರಹಣ ವಿಮೋಚನೆ ಆಗುತ್ತದೆ ಎಂದರು.

ಭೂಮಿ ಇದ್ದಾಗಿನಿಂದಲೂ ಜನಾಂಗೀಯ ತಾರತಮ್ಯಗಳಿವೆ. ಬುದ್ಧ, ಬಸವಣ್ಣ, ದಾಸರು, ಗಾಂಧೀ ಜಿ, ಅಂಬೇಡ್ಕರ್‌ ಮತ್ತಿತರರು ಸಾಮಾಜಿಕ ಅಸಮಾನತೆ ದೂರ ಮಾಡಲು ಪ್ರಯತ್ನಿಸಿದ್ದಾರೆ. ಆಧುನಿಕ ಮಾನವನಲ್ಲಿ ಎಲ್ಲಿಲ್ಲದ ಅಸಮಾನತೆ, ಮೂರ್ಖತನದ ನಡವಳಿಕೆಗಳು, ಅಪ್ರಬುದ್ಧ ಚಿಂತನೆಗಳು ಕಾಡುತ್ತಿವೆ ಎಂದರು. ಸಾಮೂಹಿಕ ವಿವಾಹದಲ್ಲಿ ವೈಶ್ಯ ಜಾತಿಯ ವರ ಹಾಗೂ ಭೋವಿ ಜಾತಿಯ ವಧುವಿನ ಅಂತರ್ಜಾತಿ ವಿವಾಹದ ಜತೆಗೆ ಐದು ಜೋಡಿಗಳು ಭಾಗವಹಿಸಿದ್ದರು.

Advertisement

ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಸಿಇಒ ಎಂ.ಜಿ.ದೊರೆಸ್ವಾಮಿ, ಪ್ರೊ| ಸಿ.ಎಂ. ಚಂದ್ರಪ್ಪ, ಪ್ರೊ. ಜ್ಞಾನಮೂರ್ತಿ ಮತ್ತಿತರರಿದ್ದರು. ಜಮುರಾ ಕಲಾವಿದರು ವಚನ ಪ್ರಾರ್ಥನೆ ಮಾಡಿದರು. ವನಕಲ್‌ ಮಠದ ಶ್ರೀ ಬಸವ ರಮಾನಂದ ಸ್ವಾಮಿಗಳು ಸ್ವಾಗತಿಸಿದರು. ಬಸವರಾಜ ಶಾಸ್ತ್ರಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next