Advertisement

ಲಲಿತಾ ಪಂಚಮಿಯಂದು ದೇವಸ್ಥಾನಗಳಲ್ಲಿ ಸಾಮೂಹಿಕ ಕುಂಕುಮಾರ್ಚನೆ: ಸಚಿವೆ ಶಶಿಕಲಾ ಜೊಲ್ಲೆ

03:57 PM Sep 28, 2022 | Team Udayavani |

ಬೆಂಗಳೂರು: ಲೋಕ ಕಲ್ಯಾಣಕ್ಕಾಗಿ ನವರಾತ್ರಿಯ ಲಲಿತಾ ಪಂಚಮಿಯಂದು ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಹಿಂದೂ ಮಹಿಳೆಯರ ಸಮ್ಮುಖದಲ್ಲಿ ಸಾಮೂಹಿಕವಾಗಿ “ಕುಂಕುಮಾರ್ಚನೆ”ನಡೆಸಲು ಮಾನ್ಯ ಮುಜರಾಯಿ, ಹಜ್‌ ಮತ್ತು ವಕ್ಫ್‌ ಸಚಿವರಾದ ಶ್ರೀಮತಿ ಶಶಿಕಲಾಜೊಲ್ಲೆ ಸೂಚನೆ ನೀಡಿದ್ದಾರೆ.

Advertisement

ಪ್ರತಿ ವರ್ಷದ ಆಶ್ವಯುಜ ಮಾಸದ ಮೊದಲ ದಿನ ಅಂದರೆ ಪಾಡ್ಯದಿಂದ ನವಮಿಯವರೆಗೆ (ನವರಾತ್ರಿ) ಶಕ್ತಿ ಸ್ವರೂಪಿಣಿಯವರಾದ ಜಗನ್ಮಾತೆಯರನ್ನು ಹಿಂದಿನಿಂದಲೂ ವಿಶೇಷವಾಗಿ ಆರಾಧಿಸುವುದು ಹಿಂದೂ ಧರ್ಮದಲ್ಲಿ ನಡೆಸಿಕೊಂಡು ಬರುತ್ತಿರುವ ಆಚರಣೆಯಾಗಿದೆ. ಅದರಂತೆ ದಿನಾಂಕ 30.09.2022 ರ ಶುಕ್ರವಾರವು ಲಲಿತಾ ಪಂಚಮಿ ವಿಶೇಷವಾಗಿದ್ದು, ಈ ದಿನದಂದು ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ದೇವಸ್ಥಾನಗಳಲ್ಲಿ ಸಾಮೂಹಿಕವಾಗಿ ಹಿಂದೂ ಮಹಿಳೆಯರನ್ನು ಬರಮಾಡಿಕೊಂಡು ಲೋಕ ಕಲ್ಯಾಣಕ್ಕಾಗಿ ಸಾಮೂಹಿಕ ಕುಂಕುಮಾರ್ಚನೆಯನ್ನು ಲೋಕ ಕಲ್ಯಾಣಕ್ಕಾಗಿ ಕುಂಕುಮಾರ್ಚನೆಯನ್ನು ಅರ್ಚಕರ ಮೂಲಕ ಎರಡು ಪಾಳಿಯಲ್ಲಿ ನೆರವೇರಿಸುವಂತೆ ಸೂಚನೆ ನೀಡಿದ್ದೇನೆ ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೆಪ್ಟೆಂಬರ್‌ 30 ರಂದು ಸಾಮೂಹಿಕ ಕುಂಕುಮಾರ್ಚನೆಯನ್ನು ನಡೆಸಲು ಕಾರಣಾಂತರಗಳಿಂದ ಸಾಧ್ಯವಾಗದಿದ್ದಲ್ಲಿ ದಿನಾಂಕ: 03.10.2022 ರ ಸೋಮವಾರ ದುರ್ಗಾಷ್ಠಮಿಯಂದು ಈ ಕಾರ್ಯಕ್ರಮವನ್ನು ನಡೆಸಬೇಕು ಹಾಗೂ ಈ ಬಗ್ಗೆ ವ್ಯಾಪಕ ಪ್ರಚಾರ ನೀಡುವಂತೆಯೂ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಮಾನ್ಯ ಸಚಿವರ ಸೂಚನೆಯಂತೆ ಇಂದು (ಸೆ. 28, 2022 ರಂದು) ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಸುತ್ತೋಲೆಯನ್ನು ಹೊರಡಿಸಿದ್ದಾರೆ.

ಕಳೆದೊಂದು ವರ್ಷದಲ್ಲಿ ಪ್ರತಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ. ಬಲಿಪಾಢ್ಯಮಿಯಂದು ಗೋಪೂಜೆ, ಪ್ರತಿ ಯುಗಾದಿಯನ್ನ ಧಾರ್ಮಿಕ ದಿನವನ್ನಾಗಿ ಆಚರಣೆ, ವರಮಹಾಲಕ್ಷ್ಮಿ ವ್ರತದಂದು ಮಹಿಳೆಯರಿಗೆ ಅರಿಶಿನ-ಕುಂಕುಮ ಹಾಗೂ ಹಸಿರು ಬಳೆಗಳ ವಿತರಣೆ, ಕೋವಿಡ್‌ ಕಾಲದಲ್ಲಿ ಮಕ್ಕಳಿಗೋಸ್ಕರ ವಿಶೇಷ ಪೂಜೆ ಹೀಗೆ ಹಲವು ವಿಶೇಷ ಕಾರ್ಯಕ್ರಮಗಳ ಮೂಲಕ ದೇವಸ್ಥಾನದ ಕಾರ್ಯಗಳಲ್ಲಿ ಸಾರ್ವಜನಿಕರ ಸಹಭಾಗಿತ್ವವನ್ನು ಹೆಚ್ಚಿಸುವುದು ಹಾಗೂ ಹಿಂದೂ ಧರ್ಮ ಮತ್ತು ಸಂಸ್ಕೃತಿಗಳನ್ನು ರಕ್ಷಿಸಿ ಬೆಳೆಸುವುದು ನಮ್ಮ ಉದ್ದೇಶ. -ಶ್ರೀಮತಿ ಶಶಿಕಲಾ ಅ ಜೊಲ್ಲೆ, ಮುಜರಾಯಿ ಹಜ್‌ ಮತ್ತು ವಕ್ಫ್‌ ಸಚಿವರು.

Advertisement
Advertisement

Udayavani is now on Telegram. Click here to join our channel and stay updated with the latest news.

Next