ಅಂತೂ ಇಂತೂ ಶಿವರಾಜಕುಮಾರ್ ಅಭಿನಯದ “ಮಾಸ್ ಲೀಡರ್’ ಚಿತ್ರದ ಬಿಡುಗಡೆ ಗೊಂದಲಕ್ಕೆ ಈಗ ತೆರೆ ಬಿದ್ದಿದೆ. ಚಿತ್ರದ ಶೀರ್ಷಿಕೆ ವಿವಾದಕ್ಕೆ ಸಂಬಂಧಿಸಿದಂತೆ ಬಿಡುಗಡೆಗೆ ಅಡ್ಡಿಯಾಗಿದ್ದ ತಡೆಯಾಜ್ಞೆ ಸಮಸ್ಯೆ ಸೋಮವಾರ ನಿರ್ಮಾಪಕ ಕೆ.ಮಂಜು ಅವರ ಸಮ್ಮುಖದಲ್ಲಿ ಬಗೆಹರಿದಿದೆ. ಅಲ್ಲಿಗೆ ಆಗಸ್ಟ್ 11 ರಂದು “ಮಾಸ್ ಲೀಡರ್’ ಬಿಡುಗಡೆಯಲ್ಲಿ ಯಾವುದೇ ಗೊಂದಲವಿಲ್ಲ.
ನಿರ್ದೇಶಕ ಎ.ಎಂ.ಆರ್.ರಮೇಶ್ ಅವರು “ಮಾಸ್ ಲೀಡರ್’ ಚಿತ್ರ ಬಿಡುಗಡೆಗೆ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ಹೀಗಾಗಿ ಚಿತ್ರ ಬಿಡುಗಡೆ ಆಗುತ್ತೋ ಇಲ್ಲವೋ ಎಂಬ ಗೊಂದಲಗಳಿದ್ದವು. ಈ ವಿಷಯ ಅರಿತ ನಿರ್ಮಾಪಕ ಕೆ.ಮಂಜು ಅವರು ಸೋಮವಾರ ಮಧ್ಯಾಹ್ನ ಎ.ಎಂ.ಆರ್ ರಮೇಶ್ ಹಾಗೂ ನಿರ್ಮಾಪಕ ತರುಣ್ ಶಿವಪ್ಪ ಇಬ್ಬರನ್ನೂ ತಮ್ಮ ಮನೆಗೆ ಆಹ್ವಾನಿಸಿ, ಚರ್ಚೆ ನಡೆಸಿದ್ದಾರೆ.
ಆ ಬಳಿಕ “ಕನ್ನಡದಲ್ಲಿ ಕೆಲವೇ ಕೆಲವು ನಿರ್ಮಾಪಕರಿದ್ದಾರೆ. ಒಳ್ಳೆಯ ಸಿನಿಮಾಗಳು ಬಿಡುಗಡೆಗೆ ನಿಂತಾಗ, ಹೀಗೆಲ್ಲ ಮಾಡುವುದು ಸರಿಯಲ್ಲ. ಯಾವ ನಿರ್ಮಾಪಕರಿಗೂ ತೊಂದರೆ ಆಗಬಾರದು. ಹಾಗಾಗಿ ನೀವು ಸಿನಿಮಾ ಬಿಡುಗಡೆಗೆ ಅನುಕೂಲ ಮಾಡಿಕೊಡಬೇಕು’ ಎಂದು ಎ.ಎಂ.ಆರ್.ರಮೇಶ್ ಅವರಲ್ಲಿ ಕೇಳಿಕೊಂಡಿದ್ದಾರೆ. ಹೀಗಾಗಿ, ತರುಣ್ ಅವರಿಗೆ ಸಿನಿಮಾ ಬಿಡುಗಡೆ ಮಾಡಿಕೊಳ್ಳಲು ಅನುಕೂಲ ಮಾಡಿಕೊಟ್ಟಿದ್ದಾರೆ ರಮೇಶ್.
ಈ ಕುರಿತು “ಉದಯವಾಣಿ’ ಜತೆ ಮಾತನಾಡಿದ ಎ.ಎಂ.ಆರ್ ರಮೇಶ್, “ಏನೋ ಕೆಟ್ಟ ಗಳಿಗೆ ಹಾಗೆಲ್ಲಾ ಆಗೋಯ್ತು. ನಾನು ಯಾವ ನಿರ್ಮಾಪಕರಿಗೂ ತೊಂದರೆ ಮಾಡುವ ಉದ್ದೇಶ ಹೊಂದಿಲ್ಲ. ಆದರೆ, ಆ ಕ್ಷಣದಲ್ಲಿ ನನಗೆ ಬೇಸರವಾಗಿತ್ತು. ಧರಣಿ ನಡೆಸಿದಾಗಲೂ, ನನ್ನನ್ನು ಕಡೆಗಣಿಸಿದ್ದರು. ಹೀಗಾಗಿ ಈ ತೀರ್ಮಾನಕ್ಕೆ ಬಂದಿದ್ದೆ ಅಷ್ಟೇ. ಕೆ.ಮಂಜು ಅವರು ತುಂಬಾನೇ ಮನವಿ ಮಾಡಿಕೊಂಡರು. ಅಲ್ಲದೆ, ನಾನೂ ಒಬ್ಬ ನಿರ್ಮಾಪಕನಾಗಿದ್ದೇನೆ.
ಕನ್ನಡ ನಿರ್ಮಾಪಕರ ಕಷ್ಟ ನನಗೂ ಗೊತ್ತಿದೆ. ಹಾಗಾಗಿ ನಾನು ಬಿಡುಗಡೆಗೆ ಅನುವು ಮಾಡಿಕೊಡುತ್ತಿದ್ದೇನೆ’ ಎಂದರು ರಮೇಶ್. ತರುಣ್ ಶಿವಪ್ಪ ಕೂಡ “ರಮೇಶ್ ಅವರು ಬಿಡುಗಡೆಗೆ ಅನುವು ಮಾಡಿಕೊಟ್ಟಿರುವುದಕ್ಕೆ ಧನ್ಯವಾದ ಹೇಳಿದರಲ್ಲದೆ, ಆಗಸ್ಟ್ 11 ರಂದು ಚಿತ್ರ ತೆರೆಗೆ ಬರಲಿದೆ. ಮಂಗಳವಾರ ಕೋರ್ಟ್‌ನಿಂದ ಪತ್ರವೊಂದು ಬರಲಿದೆ. ಹಾಗಾಗಿ ಚಿತ್ರದ ಬಿಡುಗಡೆಗೆ ಯಾವುದೇ ಅಡ್ಡಿ ಇರುವುದಿಲ್ಲ. ಕೆ.ಮಂಜು ಹಾಗೂ ರಮೇಶ್ ಇಬ್ಬರಿಗೂ ಥ್ಯಾಂಕ್ಸ್ ಎಂದು ಹೇಳಿದ್ದಾರೆ ತರುಣ್ ಶಿವಪ್ಪ.