Advertisement

ವಿದ್ಯಾರ್ಥಿಗಳ ಗೋಳು ಕೇಳ್ಳೋರ್ಯಾರು?

10:46 AM Jul 17, 2019 | Naveen |

ಮಸ್ಕಿ: ತಾಲೂಕಿನ ವಿವಿಧ ಗ್ರಾಮಗಳಿಂದ ಪಟ್ಟಣಕ್ಕೆ ಶಾಲಾ-ಕಾಲೇಜಿಗೆ ಆಗಮಿಸುವ ವಿದ್ಯಾರ್ಥಿಗಳು ಸಮರ್ಪಕ ಬಸ್‌ ಸೌಲಭ್ಯವಿಲ್ಲದೇ ನಿತ್ಯ ಪರದಾಡುವಂತಾಗಿದೆ. ಸಮರ್ಪಕ ಬಸ್‌ ಸೌಕರ್ಯ ಕಲ್ಪಿಸಲು ವಿದ್ಯಾರ್ಥಿಗಳು ಮನವಿ ಸಲ್ಲಿಸಿದರೂ ಗೋಳು ಕೇಳ್ಳೋರಿಲ್ಲದಂತಾಗಿದೆ.

Advertisement

ತಾಲೂಕಿನ ನೀರಲೂಟಿ, ಬೆನಕನಾಳ, ಬೆಲ್ಲದಮರಡಿ, ದಿನ್ನಿಬಾವಿ ಸೇರಿದಂತೆ ಸುಮಾರು ನಾಲ್ಕೈದು ಗ್ರಾಮದ ವಿದ್ಯಾರ್ಥಿಗಳು ಸಮರ್ಪಕ ಬಸ್‌ ವ್ಯವಸ್ಥೆ ಇಲ್ಲದ್ದರಿಂದ ನಿತ್ಯ ಶಾಲಾ-ಕಾಲೇಜಿನ ತರಗತಿಗೆ ಹಾಜರಾಗಲು ಪರದಾಡುತ್ತಿದ್ದಾರೆ. ಖಾಸಗಿ ವಾಹನಗಳಲ್ಲಿ ಪಟ್ಟಣಕ್ಕೆ ಆಗಮಿಸುವ ಅನಿವಾರ್ಯತೆ ಇದೆ.

ಮಸ್ಕಿ ತಾಲೂಕು ಕೇಂದ್ರವಾಗಿದ್ದು, ಸುತ್ತಲಿನ ಗ್ರಾಮಗಳ ನೂರಾರು ವಿದ್ಯಾರ್ಥಿ-ವಿದ್ಯಾರ್ಥಿನಿಯರು ನಿತ್ಯ ಪಟ್ಟಣಕ್ಕೆ ಶಾಲಾ-ಕಾಲೇಜಿಗೆ ಆಗಮಿಸುತ್ತಾರೆ. ಆದರೆ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಮತ್ತು ಶಾಲಾ-ಕಾಲೇಜು ಆರಂಭವಾಗುವ ಮತ್ತು ಸಂಜೆ ಬಿಡುವ ವೇಳೆಗೆ ಗ್ರಾಮೀಣ ಭಾಗಕ್ಕೆ ಬಸ್‌ ಸೌಲಭ್ಯವಿಲ್ಲ. ಬೆಳಗ್ಗೆ 7 ಗಂಟೆಗೆ ಮುದಗಲ್ಲ ಕಡೆಯಿಂದ ಒಂದು ಬಸ್‌ ಬರುತ್ತದೆ. ಅದರಲ್ಲಿ ಸುಮಾರು 60-70 ವಿದ್ಯಾರ್ಥಿಗಳು ಹೋಗುತ್ತಾರೆ. ಇನ್ನುಳಿದ ವಿದ್ಯಾರ್ಥಿಗಳು ಖಾಸಗಿ ಆಟೋ, ಟೆಂಪೋ ಅವಲಂಬಿಸಿದ್ದಾರೆ. ಒಂದು ವೇಳೆ ಅವುಗಳು ಸರಿಯಾದ ಸಮಯಕ್ಕೆ ಬರದೇ ಇದ್ದರೆ ವಿದ್ಯಾರ್ಥಿಗಳು ಆ ದಿನದ ತರಗತಿ ತಪ್ಪಿಸಿಕೊಂಡು ಶಿಕ್ಷಕರಿಂದ ಬೈಸಿಕೊಳ್ಳುವುದು ಅನಿವಾರ್ಯವಾಗಿದೆ.

ಒತ್ತಾಯ: ಸರಿಯಾದ ಸಮಯಕ್ಕೆ ಬಸ್‌ ಸೌಲಭ್ಯ ಕಲ್ಪಿಸುವಂತೆ ಶಾಸಕರ ಗಮನಕ್ಕೂ ತರಲಾಗಿದೆ ಹಾಗೂ ಘಟಕ ವ್ಯವಸ್ಥಾಪಕರಿಗೂ ಮನವಿ ಸಲ್ಲಿಸಲಾಗಿದೆ. ಪ್ರತಾಪಗೌಡ ಪಾಟೀಲರು ಸಹ ಸರಿಯಾಗಿ ಬಸ್‌ ಓಡಿಸಲು ಸೂಚಿಸಿದ್ದರೂ ಘಟಕ ವ್ಯವಸ್ಥಾಪಕರು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಕೂಡಲೇ ಬೆಳಗ್ಗೆ ಹೆಚ್ಚುವರಿಯಾಗಿ ಇನ್ನೊಂದು ಬಸ್‌ ಓಡಿಸಲು ಸಾರಿಗೆ ಸಂಸ್ಥೆ ಅಧಿಕಾರಿಗಳು ಮುಂದಾಗಬೇಕೆಂದು ವಿದ್ಯಾರ್ಥಿಗಳು, ಪಾಲಕರು ಆಗ್ರಹಿಸಿದ್ದಾರೆ.

ಕಾಲೇಜು ತರಗತಿಗಳು ಬೆಳಗ್ಗೆ 8 ಗಂಟೆಗೆ ಪ್ರಾರಂಭವಾಗುತ್ತವೆ. ಬೆಳಗ್ಗೆ ಒಂದೇ ಬಸ್‌ ಬರುತ್ತದೆ. ಇದರಿಂದ ಕೆಲ ವಿದ್ಯಾರ್ಥಿಗಳು ಗ್ರಾಮದಲ್ಲಿಯೇ ಉಳಿದುಕೊಂಡು ಖಾಸಗಿ ವಾಹನಗಳು ಬಂದರೆ ತರಗತಿಗಳಿಗೆ ಬರಬೇಕು. ಇಲ್ಲದಿದ್ದರೆ ಇಲ್ಲ.
ಶಿವಾನಂದ,
ಕಾಲೇಜು ವಿದ್ಯಾರ್ಥಿ ಬೆನಕನಾಳ ಗ್ರಾಮ.

Advertisement

ಬೆನಕನಾಳ, ಬೆಲ್ಲದಮರಡಿ ಭಾಗದಿಂದ ಈ ವರ್ಷ ಮಸ್ಕಿ ಪಟ್ಟಣಕ್ಕೆ ಸುಮಾರು 150 ವಿದ್ಯಾರ್ಥಿಗಳು ಬರುತ್ತಾರೆ. ಇದರಲ್ಲಿ ಹೆಚ್ಚಾಗಿ ವಿದ್ಯಾರ್ಥಿನಿಯರೇ ಇರುವುದರಿಂದ ತುಂಬಾ ತೊಂದರೆಯಾಗುತ್ತಿದೆ. ಹಲವಾರು ಬಾರಿ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರೂ ಸ್ಪಂದಿಸುತ್ತಿಲ್ಲ. ಕೂಡಲೇ ಸಂಬಂಧಪಟ್ಟ ಮೇಲಾಧಿಕಾರಿಗಳು ಬಸ್‌ ವ್ಯವಸ್ಥೆ ಮಾಡಬೇಕು.
•ಶರಣಬಸವ, ವಿದ್ಯಾರ್ಥಿ

Advertisement

Udayavani is now on Telegram. Click here to join our channel and stay updated with the latest news.

Next