Advertisement

ಪಡಿತರ ಫಲಾನುಭವಿಗಳಿಗಿಲ್ಲ ತೊಗರಿಬೇಳೆ ಭಾಗ್ಯ

03:47 PM May 13, 2019 | Team Udayavani |

ಮಸ್ಕಿ: ಅನ್ನಭಾಗ್ಯ ಯೋಜನೆಯಡಿ ಮಸ್ಕಿ ತಾಲೂಕಿನ ಪಡಿತರ ಚೀಟಿದಾರರಿಗೆ ಕಳೆದ ಎರಡು ತಿಂಗಳಿನಿಂದ ತೊಗರಿಬೇಳೆ ವಿತರಿಸುತ್ತಿಲ್ಲ. ಕೇವಲ ಅಕ್ಕಿ ಮಾತ್ರ ನೀಡಲಾಗುತ್ತಿದೆ. ಆದರೆ ಫಲಾನುಭವಿಗಳ ಮೊಬೈಲ್ಗೆ ನಿಮಗೆ ಅಕ್ಕಿ ಮತ್ತು ತೊಗರಿಬೇಳೆ ಬಂದಿದೆ ಎಂಬ ಸಂದೇಶ ಬರುತ್ತಿದ್ದು, ಫಲಾನುಭವಿಗಳು ಗೊಂದಲಕ್ಕೀಡಾಗುತ್ತಿದ್ದಾರೆ.

Advertisement

ರಾಜ್ಯವನ್ನು ಹಸಿವು ಮುಕ್ತ ಮಾಡಲು ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಅನ್ನಭಾಗ್ಯ ಯೋಜನೆ ಜಾರಿಗೆ ತಂದು ಉಚಿತವಾಗಿ ಅಕ್ಕಿ ವಿತರಣೆಗೆ ಮುಂದಾದರು. ಅದರ ಜೊತೆಗೆ ತೊಗರಿಬೇಳೆ, ಸಕ್ಕರೆ, ಉಪ್ಪು, ಅಡುಗೆ ಎಣ್ಣೆ ಕೂಡ ವಿತರಿಸಲಾಗುತ್ತಿತ್ತು. ಆದರೆ ಬರಬರುತ್ತ ಸಕ್ಕರೆ, ಉಪ್ಪು, ಅಡುಗೆ ಎಣ್ಣೆ ಮಾಯವಾಗಿದ್ದು, ತೊಗರಿಬೇಳೆ, ಅಕ್ಕಿ ಮಾತ್ರ ವಿತರಿಸಲಾಗುತ್ತಿತ್ತು. ಆದರೆ ಕಳೆದ ಎರಡು ತಿಂಗಳಿನಿಂದ ಮಸ್ಕಿ ತಾಲೂಕಿನಲ್ಲಿ ಪಡಿತರ ಚೀಟಿದಾರರಿಗೆ ತೊಗರಿಬೇಳೆ ಕೂಡ ವಿತರಿಸುತ್ತಿಲ್ಲ. ಕೇವಲ ಕುಟುಂಬ ಸದಸ್ಯರ ಸಂಖ್ಯೆಗನುಗುಣವಾಗಿ ಅಕ್ಕಿ ಮಾತ್ರ ವಿತರಿಸಲಾಗುತ್ತಿದೆ. ಆದರೆ ಪಡಿತರ ಚೀಟಿದಾರರ ನೋಂದಾಯಿತ ಮೊಬೈಲ್ಗೆ ಆಹಾರ ಇಲಾಖೆಯಿಂದ ನಿಮಗೆ ಅಕ್ಕಿ, ತೊಗರಿಬೇಳೆ ಬಂದಿದೆ ಎಂಬ ಸಂದೇಶ ಕಳುಹಿಸಲಾಗುತ್ತಿದೆ. ಪಡಿತರ ಚೀಟಿದಾರರು ಸಂಬಂಧಿಸಿದ ನ್ಯಾಯಬೆಲೆ ಅಂಗಡಿಗೆ ಹೋಗಿ ಕೇಳಿದರೆ ಕೇವಲ ಅಕ್ಕಿ ಮಾತ್ರ ವಿತರಿಸಲಾಗುತ್ತಿದ್ದು, ಇದು ಪಡಿತರ ಚೀಟಿದಾರರಲ್ಲಿ ಗೊಂದಲಕ್ಕೆಡೆ ಮಾಡಿದೆ. ಮಾರುಕಟ್ಟೆಯಲ್ಲಿ ತೊಗರಿಬೇಳೆ ದರ ಕೆಜಿಗೆ 70ರಿಂದ 90 ರೂ.ವರೆಗೆ ಇದೆ. ಇದು ಬಡವರಿಗೆ ಹೊರೆ ಆಗುತ್ತಿದೆ. ನ್ಯಾಯಬೆಲೆ ಅಂಗಡಿಯಲ್ಲಿ ರಿಯಾಯಿತಿ ದರದಲ್ಲಿ ತೊಗರಿಬೇಳೆ ಸಿಗದೇ ಬಡ ಫಲಾನುಭವಿಗಳು ಸರ್ಕಾರಕ್ಕೆ ಶಾಪ ಹಾಕುವಂತಾಗಿದೆ.

ಆಕ್ರೋಶ: ಅನ್ನಭಾಗ್ಯ ಯೋಜನೆಯಡಿ ಬರಬರುತ್ತ ಒಂದೊಂದೇ ಆಹಾರಧಾನ್ಯ ಕಡಿತಗೊಳಿಸಿ ಈಗ ಕೇವಲ ಅಕ್ಕಿ ಮಾತ್ರ ವಿತರಿಸುತ್ತಿರುವುದಕ್ಕೆ ಪಡಿತರ ಚೀಟಿದಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಧಾನ್ಯಗಳನ್ನು ಸರಿಯಾಗಿ ವಿತರಿಸುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.

ಕಳೆದ ಎರಡ್ಮೂರು ವರ್ಷಗಳಿಂದ ಮಳೆ ಸರಿಯಾಗಿ ಆಗಿಲ್ಲ. ತೀವ್ರ ಬರಗಾಲವಿದೆ. ಇಂತಹ ಸಮಯದಲ್ಲಿ ಸರಕಾರ ಬಡವರಿಗೆ ರಿಯಾಯಿತಿ ದರದಲ್ಲಿ ವಿತರಿಸುತ್ತಿದ್ದ ತೊಗರಿಬೇಳೆಯನ್ನು ಎರಡು ತಿಂಗಳಿನಿಂದ ಸ್ಥಗಿತಗೊಳಿಸಿದೆ. ಈ ಕೂಡಲೇ ಸರ್ಕಾರ ಪಡಿತರ ಚೀಟಿದಾರರಿಗೆ ತೊಗರಿಬೇಳೆ ವಿತರಿಸಲು ಮುಂದಾಗಬೇಕು.
ದುರ್ಗರಾಜ್‌ ವಟಗಲ್,
ಕರವೇ ತಾಲೂಕು ಅಧ್ಯಕ್ಷ ಮಸ್ಕಿ.

Advertisement

Udayavani is now on Telegram. Click here to join our channel and stay updated with the latest news.

Next