ಮಸ್ಕಿ: ಪಟ್ಟಣದ ಬಸವೇಶ್ವರ ನಗರದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಇರುವುದರಿಂದ ತಹಶೀಲ್ದಾರ ಕಛೇರಿಗೆ ವಿವಿಧ ಕೆಲಸಕ್ಕಾಗಿ ಬರುವ ಸಾರ್ವಜನಿಕರಿಗೆ ತಲೆನೋವಾಗಿದೆ.
ಶಾಲಾ-ಕಾಲೇಜು ಆರಂಭವಾದಾಗಿನಿಂದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, 371‘ಜೆ’ ಪ್ರಮಾಣ ಪತ್ರಕ್ಕಾಗಿ ದಿನನಿತ್ಯ ನೂರಾರು ಜನರು ತಹಶೀಲ್ದಾರ ಕಛೇರಿ ಮುಂದೆ ಬಂದು ಸರದಿ ಸಾಲಿನಲ್ಲಿ ನಿಂತಿರುತ್ತಾರೆ. ಆದರೆ ದಿನಕ್ಕೆ ಐದಾರು ಸಲ ವಿದ್ಯುತ್ ತೆಗೆಯುವುದರಿಂದ ವಿವಿಧ ಕೆಲಸ-ಕಾರ್ಯಗಳಿಗೆ ಅಡ್ಡಿ ಉಂಟಾಗುತ್ತಿದೆ. ಇನ್ನೂ ರೈತರು ಬ್ಯಾಂಕಿನ ಸೌಲಭ್ಯ ಪಡೆಯುವುದಕ್ಕೆ ಗೇಣಿ, ವಂಶಾವಳಿ, ಭೂ-ಹಿಡುವಳಿ ಪಡೆಯಲು ಅದಕ್ಕೆ ಬೇಕಾದ ಅಗತ್ಯ ದಾಖಲೆಗಳನ್ನು ಲಗತ್ತಿಸಲು ಝೆರಾಕ್ಸ್ ಮಾಡಿಸಲು ಹೋದಾಗ ಕರೆಂಟ್ ಇಲ್ಲ ಎಂದು ಹೇಳುತ್ತಾರೆ. ಇದರಿಂದ ಗಂಟೆಗಟ್ಟಲೇ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಜೆಸ್ಕಾಂ ಇಲಾಖೆಗೆ ಗಮನಕ್ಕೆ ತಂದರೆ ಮೇನ್ ಸಪ್ಲೈ ಹೋಗಿರುತ್ತದೆ ಎಂದು ಕುಂಟುನೆಪ ಹೇಳುತ್ತಾರೆ. ಇದರಿಂದ ತಹಶೀಲ್ದಾರ ಕಛೇರಿ ಮುಂದೆ ಪ್ರತಿದಿನ ವಿವಿಧ ಕೆಲಸಕ್ಕಾಗಿ ಬರುವ ಸಾರ್ವಜನಿಕರು ಜೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ವಿದ್ಯುತ್ ಬಂದು ಹೋಗುವುದರಿಂದ ಸಾರ್ವಜನಿಕರು ಬಿಸಿಲು-ಮಳೆ ಎನ್ನದೇ ಸರದಿ ಸಾಲಿನಲ್ಲಿ ನಿಂತು ಹೈರಾಣಾಗಿದ್ದಾರೆ. ಹಳ್ಳಿಯ ಜನರು ಕೂಲಿ ಕೆಲಸ ಬಿಟ್ಟು ಪ್ರಮಾಣ ಪತ್ರಕ್ಕಾಗಿ ಅಲೆದಾಡುವಂತಾಗಿದೆ. ಗೃಹಿಣಿಯರು, ಮಹಿಳೆಯರು, ವಿದ್ಯಾರ್ಥಿಗಳು ಮತ್ತು ವಯೋವೃದ್ಧರು ವಿದ್ಯುತ್‌ನ ಕಣ್ಣಾಮುಚ್ಚಾಲೆಯಿಂದ ಕೆಲಸ ಆಗದೇ ಬಂದ ದಾರಿಗೆ ಸುಂಕವಿಲ್ಲ ಎಂದು ವಾಪಾಸು ಹೋಗುತ್ತಿದ್ದಾರೆ. ಜೆಸ್ಕಾಂ ಇಲಾಖೆಯ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ವಿದ್ಯುತ್ ಕಣ್ಣಾಮುಚ್ಚಾಲೆ ನಿಲ್ಲಿಸಬೇಕೆಂದು ಒತ್ತಾಯಿಸಿದರು.
ವಿದ್ಯುತ್‌ನ್ನೇ ನಂಬಿಕೊಂಡು ಬದುಕು ನಡೆಸುತ್ತಿರುವ ತಹಶೀಲ ಕಛೇರಿ ಮುಂಭಾಗದ ಕಂಪ್ಯೂಟರ್, ಝೆರಾಕ್ಸ್ ಅಂಗಡಿ ಮಾಲೀಕರಿಗೆ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ತೊಂದರೆಯಾಗಿದೆ. ದಿನಕ್ಕೆ ಸಾವಿರ ರೂಪಾಯಿ ದುಡಿಯುವ ಇಲ್ಲಿನ ಅಂಗಡಿ ಮಾಲೀಕರು ವಿದ್ಯುತ್ ಹೋಗಿ ಬರುವುದರಿಂದ ದಿನಕ್ಕೆ 200 ದುಡಿಯುವುದಕ್ಕೂ ಹರಸಾಹಸ ಪಡುವಂತಾಗಿದೆ. ಜೆಸ್ಕಾಂ ಇಲಾಖೆಯ ಅಧಿಕಾರಿಗಳು ವಿದ್ಯುತ್ ಕಣ್ಣಾಮುಚ್ಚಾಲೆ ಸಮಸ್ಯೆಯನ್ನು ಪರಿಹರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: Hubli; ಪೂಜಾರಿ ದೇವೇಂದ್ರಪ್ಪ ಹತ್ಯೆ ಪ್ರಕರಣ ತನಿಖೆಗೆ ಪ್ರತ್ಯೇಕ ತಂಡ ರಚನೆ: ಎನ್.ಶಶಿಕುಮಾರ್