ಕಲಬುರಗಿ: ಉಪ ಚುನಾವಣೆಗಳನ್ನು ಗೆಲ್ಲಲು ಬಿಜೆಪಿ ವಾಮಮಾರ್ಗ ಅನುಸರಿಸುತ್ತಿದೆ. ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಮುಖಂಡರೇ ಮುಂದೆ ನಿಂತು ಮತದಾರರಿಗೆ ಹಣ ಹಂಚುತ್ತಿದ್ದಾರೆ. ಇದಕ್ಕೆ ವಿಡಿಯೋ ಸಾಕ್ಷ್ಯಗಳು ಲಭ್ಯವಿವೆ. ಹೀಗಾಗಿ ತಕ್ಷಣವೇ ಬಿಜೆಪಿ ಅಭ್ಯರ್ಥಿಯನ್ನು ಚುನಾವಣಾ ಆಯೋಗ ಅನರ್ಹಗೊಳಿಸಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒತ್ತಾಯಿಸಿದರು.
ಬಸವಕಲ್ಯಾಣ ಉಪ ಚುನಾವಣೆ ಪ್ರಚಾರಕ್ಕೆ ತೆರಳುವ ಮುನ್ನ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜನ ಬೆಂಬಲ ವ್ಯಕ್ತವಾಗುತ್ತಿದೆ. ಪ್ರಚಾರಕ್ಕೆ ನಾವು ಹೋದಲ್ಲೆಲ್ಲ ಅಪಾರ ಪ್ರೀತಿ, ವಿಶ್ವಾಸ ತೋರುತ್ತಿದ್ದಾರೆ. ಸಾವಿರ ಸಾವಿರ ಸಂಖ್ಯೆಯಲ್ಲಿ ಜನರು ಸ್ವಯಂ ಪ‍್ರೇರಣೆಯಿಂದ ಸೇರುತ್ತಿದ್ದಾರೆ. ಹೀಗಾಗಿ ದೃತಿಗೆಟ್ಟ ಬಿಜೆಪಿಯವರು ಅಡ್ಡಮಾರ್ಗ ಹಿಡಿದು ಮತದಾರರಿಗೆ ಹಣದ ಹಂಚುತ್ತಿದ್ದಾರೆ ಎಂದು ಆರೋಪಿಸಿದರು.
ಮಸ್ಕಿಯಲ್ಲಿ ಬಿಜೆಪಿಯವರು ಮತದಾರರಿಗೆ ಹಣ ಹಂಚುತ್ತಿರುವುದನ್ನು ಜನರೇ ಬಹಿರಂಗಗೊಳಿಸಿದ್ದಾರೆ. ಇದನ್ನು ಆಧರಿಸಿ ಬಿಜೆಪಿ ಅಭ್ಯರ್ಥಿಯನ್ನು ಅನರ್ಹಗೊಳಿಸಬೇಕು. ಈ ಸಂಬಂಧ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ನಿಂದ ದೂರು ಸಲ್ಲಿಸಲಾಗುವುದು ಎಂದು ಹೇಳಿದರು.
ಉಪ ಚುನಾವಣೆಗಳು ನಡೆಯುತ್ತಿರುವ ಎಲ್ಲ ಕಡೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಪೊಲೀಸ್ ಸಿಬ್ಬಂದಿ ರಾಜ್ಯ ಸರ್ಕಾರದ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಇಲ್ಲದಿದ್ದರೆ ಬಹಿರಂಗವಾಗಿಯೇ ಇಂತಹ ಅಕ್ರಮ ನಡೆಸಲು ಸಾಧ್ಯವೇ ಇಲ್ಲ ಎಂದು ದೂರಿದರು.
ಉಪಚುನಾವಣೆಗಳು ಮುಗಿದ ನಂತರ ರಾಜ್ಯ ಸರ್ಕಾರದ ಕಥೆಯೂ ಮುಗಿಯಲಿದೆ. ಇದನ್ನು ನಾನು ಹೇಳುತ್ತಿಲ್ಲ. ಬಿಜೆಪಿ ಶಾಸಕರು, ಮುಖಂಡರೇ ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದಾರೆ. ಯತ್ನಾಳ ಸೇರಿದಂತೆ ಅನೇಕರು ಸಿಎಂ ವಿರುದ್ಧ ಮಾತನಾಡುತ್ತಿದ್ದಾರೆ. ಇದು ತಪ್ಪು ಎಂದು ಹೇಳುವವರು ಯಾರೂ ಇಲ್ಲದಂತಹ ಸ್ಥಿತಿಗೆ ಬಿಜೆಪಿ ಬಂದು ನಿಂತಿದೆ ಎಂದು ಲೇವಡಿ ಮಾಡಿದರು.
ಸಾರಿಗೆ ನೌಕರರ ಮುಷ್ಕರಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಉಪಚುನಾವಣೆ ಫಲಿತಾಂಶದ ಮೇಲೂ ಇದರ ಪರಿಣಾಮ ಏನು ಎಂಬುವುದು ಶೀಘ್ರದಲ್ಲೇ ಅರ್ಥವಾಗಲಿದೆ. ರಾಜ್ಯ ಮಾತ್ರವಲ್ಲ, ದೇಶದಾದ್ಯಂತ ಕಾರ್ಮಿಕರಿಗೆ ಸಾಕಷ್ಟು ಅನ್ಯಾಯವಾಗುತ್ತಿದೆ. ದುಡಿಯುವ ವರ್ಗದ ನೋವು ಕೇಳುವ ಮನಸ್ಸು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೂ ಇಲ್ಲ ಎಂದು ಕಿಡಿ ಕಾರಿದರು.