Advertisement

Maski: ಭೂವಿವಾದದಿಂದ ಸಮುದಾಯ ಆರೋಗ್ಯ ಕೇಂದ್ರ ಕಟ್ಟಡ ಕಾಮಗಾರಿಗೆ ಗ್ರಹಣ

11:47 PM Jul 20, 2024 | Team Udayavani |

ಮಸ್ಕಿ: ಭೂವಿವಾದ ಹಿನ್ನಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ 30 ಹಾಸಿಗೆ ಸಾಮರ್ಥ್ಯದ ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡ ಕಾಮಗಾರಿ ಮೂರು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಸರ್ಕಾರಿ ಆಸ್ಪತ್ರೆ ನಿರ್ಮಾಣಕ್ಕೆ ಸಿಂಧನೂರು ರಸ್ತೆ ಹೆದ್ದಾರಿ ಪಕ್ಕದಲ್ಲಿ ನಾಲ್ಕು ಎಕರೆ ಜಾಗವನ್ನು ಭೂ ಮಾಲಕರು ದಾನವಾಗಿ ನೀಡಿರುವುದರಿಂದ 40 ವರ್ಷಗಳ ಆರು ಹಾಸಿಗೆ ಆಸ್ಪತ್ರೆ, ವೈದ್ಯರ ವಸತಿ ಗೃಹ ನಿರ್ಮಿಸಲಾಗಿತ್ತು, ಇದೀಗ ಪ್ರಾಥಾಮಿಕ ಆರೋಗ್ಯ ಕೇಂದ್ರದಿಂದ ಸಮುದಾಯ ಆರೋಗ್ಯ ಕೇಂದ್ರವನ್ನಾಗಿಸಲು 30 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯ ಕಟ್ಟಡ ನಿರ್ಮಾಣ ಮಾಡುವ ಹಂತದಲ್ಲಿ ಭೂವಿವಾದ ನಡೆದಿದೆ.

Advertisement

ಜಾಗವನ್ನು ದಾನವಾಗಿ ಪಡೆದ ಆರೋಗ್ಯ ಇಲಾಖೆಯ ಬಳಿ ಯಾವುದೇ ದಾಖಲೆ ಇಲ್ಲದಿರುವುದು ಸಮಸ್ಯೆಗೆ ಕಾರಣವಾಗಿದೆ. ನಮಗೆ ಸೇರಿದ ಜಾಗದಲ್ಲಿ ಸರ್ಕಾರಿ ಆಸ್ಪತ್ರೆ ನಿರ್ಮಿಸಿದ್ದಾರೆ. ಎಂದು ಭೂ ಮಾಲೀಕ ಅಪ್ಪಾಜಿಗೌಡ ಕರ‍್ಲಕುಂಟಿ ಅವರು ಕಲಬುರಗಿ ಹೈಕೋರ್ಟಿನ ಪೀಠದ ಮೆಟ್ಟಿಲೇರಿದ್ದರು. ಹೈಕೋರ್ಟ್ ತಡೆಯಾಜ್ಞೆ ನೀಡಿದ್ದರಿಂದ6 ಹಾಸಿಗೆ ಆಸ್ಪತ್ರೆಯ ಕಟ್ಟಡ ಹೊರತುಪಡಿಸಿ ಶವಪರೀಕ್ಷೆ ಕೇಂದ್ರ ಸೇರಿದಂತೆ ಉಳಿದ ಖಾಲಿ ಜಾಗಕ್ಕೆ ಭೂಮಾಲಕರು ತಂತಿ ಬೇಲಿ ಹಾಕಿದ್ದಾರೆ. ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಚಂದ್ರಶೇಖರ ನಾಯಕ ಹಾಗೂ ಶಾಸಕ ಆರ್.ಬಸನಗೌಡ ತುರವಿಹಾಳ ಭೂಮಾಲಕರೊಂದಿಗೆ ಮಾತುಕತೆ ನಡೆಸಿ ಆಸ್ಪತ್ರೆಗೆ ಭೂಮಿ ಬಿಟ್ಟು ಕೊಡುವಂತೆ ಮನವೊಲಿಸಿದ ಪ್ರಯತ್ನ ವಿಫಲವಾಗಿತ್ತು, ಹೆದ್ದಾರಿಗೆ ಹೊಂದಿಕೊಂಡಿರುವ ಆಸ್ಪತ್ರೆಯ ಪಕ್ಕದ ಜಾಗವನ್ನು ಮನೆ ಕಟ್ಟಲು ಎನ್‌ಎ ಮಾಡಿ ಕೊಡುತ್ತೇವೆ. ಉಳಿದ ಜಾಗವನ್ನು ಆಸ್ಪತ್ರೆ ಬಿಟ್ಟುಕೊಡಿ ಎಂದು ಜಿಲ್ಲಾಧಿಕಾರಿ ನೀಡಿದ್ದ ಪ್ರಸ್ತಾವಕ್ಕೂ ಭೂಮಾಲೀಕರು ಸ್ಪಂದಿಸಿಲ್ಲ, ಮೂರು ವರ್ಷಗಳಿಂದ ಸಮುದಾಯ ಆರೋಗ್ಯ ಕೇಂದ್ರ ಕಟ್ಟಡ ಕಾಮಗಾರಿ ಸ್ಥಗಿತಗೊಂಡಿದೆ. ಶಾಸಕರು ಸರ್ಕಾರದ ಮೇಲೆ ಒತ್ತಡ ಹಾಕಿ ಭೂವಿವಾದವನ್ನು ಬೇಗನೆ ಇತ್ಯರ್ಥಪಡಿಸಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಮಸ್ಕಿ ಸರ್ಕಾರಿ ಆಸ್ಪತ್ರೆ ಭೂವಿವಾದವನ್ನು ಸರ್ಕಾರದ ಗಮನಕ್ಕೆ ಈಗಾಗಲೇ ತರಲಾಗಿದ್ದು, ಈ ಬಗ್ಗೆ ಆರೋಗ್ಯ ಸಚಿವರೊಂದಿಗೆ ಚರ್ಚಿಸಲಾಗಿದೆ. ಎಂದು ಶಾಸಕ ಆರ್.ಬಸನಗೌಡ ತುರವಿಹಾಳ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಹಾಗೂ ನಾವು ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸಿದ್ದೇವೆ ಆದರೆ ಭೂ ಮಾಲೀಕರು ಪರಿಹಾರಕ್ಕೆ ಪಟ್ಟು ಹಿಡಿದಿದ್ದಾರೆ. ಮೂರ್ನಾಲ್ಕು ದಿನಗಳಲ್ಲಿ ಮತ್ತೊಮ್ಮೆ ಅವರ ಮನವೊಲಿಸುವ ಪ್ರಯತ್ನ ಮಾಡುತ್ತೇವ. ಶೀಘ್ರದಲ್ಲೆ ಸರ್ಕಾರ ತೀರ್ಮಾನ ಕೈಗೊಂಡು ವಿವಾದ ಇತ್ಯರ್ಥಪಡಿಸಲಿದೆ ಎಂದಿದ್ದಾರೆ.

ಭೂಮಿಗೆ ತಕ್ಕಂತೆ ಪರಿಹಾರ ನೀಡುವಂತೆ ಜಮೀನು ಮಾಲೀಕರು ಪಟ್ಟು ಹಿಡಿದು, ಹೈಕೋರ್ಟ್ನಿಂದ ತಡೆಯಾಜ್ಞೆ ತಂದಿದ್ದು, ಇದರಿಂದ ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡ ನಿರ್ಮಿಸಲು ವಿಳಂಭವಾಗುತ್ತಿದೆ, ಅದಷ್ಟು ಬೇಗನೆ ಈ ಪ್ರಕರಣವನ್ನು ಇತ್ಯರ್ಥಪಡಿಸಿ ಆಸ್ಪತ್ರೆ ಮೇಲ್ದರ್ಜೆಗೇರಿಸಲಾಗುವುದು.- ಸುರೇಂದ್ರ ಬಾಬು. ಡಿಹೆಚ್‌ಒ ರಾಯಚೂರು,

4 ಎಕರೆ ಜಮೀನಿಗೆ ಸರ್ಕಾರ ಸೂಕ್ತ ಪರಿಹಾರ ನೀಡಿಲ್ಲ, ನಮ್ಮ ಭೂಮಿಗೆ ಸರ್ಕಾರ ಸೂಕ್ತ ಪರಿಹಾರ ನೀಡಿದರೆ ಮಾತ್ರ ಆಸ್ಪತ್ರೆಗೆ ಭೂಮಿ ಬಿಡಲಾಗುವುದು. ಅಪ್ಪಾಜಿಗೌಡ ಕರ‍್ಲಕುಂಟಿ, ಭೂ ಮಾಲಕ.

Advertisement

ವರದಿ: ವಿಠ್ಠಲ ಕೆಳೂತ್

Advertisement

Udayavani is now on Telegram. Click here to join our channel and stay updated with the latest news.

Next