ಮಲ್ಲಿಕಾರ್ಜುನ ಚಿಲ್ಕರಾಗಿ
ಮಸ್ಕಿ: ಚುನಾವಣೆ ಆಯೋಗದ ಮಿತಿಗೆ ತಕ್ಕಂತೆ ಖರ್ಚು-ವೆಚ್ಚ ಸರಿದೂಗಿಸಲು ರಾಜಕೀಯ ಪಕ್ಷಗಳು ಹೆಣಗುತ್ತಿವೆ. ಇದರ ಮೊದಲ ಭಾಗವಾಗಿಯೇ ಮಸ್ಕಿಯಲ್ಲಿ ಹೆಲಿಪ್ಯಾಡ್ ಬದಲು ನೆರೆ-ಹೊರೆಯಲ್ಲಿ ಲೋಹದ ಹಕ್ಕಿಗಳ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ!
ಬಿಜೆಪಿ ಮತ್ತು ಕಾಂಗ್ರೆಸ್ ಎರಡು ಪಕ್ಷದಿಂದಲೂ ಇಂತಹ ತಂತ್ರ ಅನುಸರಿಸಲಾಗಿದೆ. ಚುನಾವಣೆ ಖರ್ಚು-ವೆಚ್ಚಕ್ಕೆ ಆಯೋಗ ಮಿತಿ ಹೇರಿದೆ. ಪ್ರತಿ ಅಭ್ಯರ್ಥಿಗೆ 27 ಲಕ್ಷ ರೂ. ನಿಗದಿ ಮಾಡಲಾಗಿದೆ. ಆದರೆ ಇಲ್ಲಿ ಉಪಚುನಾವಣೆ ಕಣದಲ್ಲಿ ನಡೆಯುವ ಪ್ರತಿ ಕಾರ್ಯಕ್ರಮ, ಮುಖಂಡರ ಪ್ರವಾಸ ಸೇರಿ ಇತರೆ ಕಾರ್ಯಕ್ರಮಗಳಿಗೆ ವ್ಯಯಿಸಿದ ಖರ್ಚಿನ ಲೆಕ್ಕವೆಲ್ಲವೂ ಅಭ್ಯರ್ಥಿ ಖಾತೆಗೆ ಸೇರಲಿದೆ. ಇದಕ್ಕಾಗಿಯೇ ಅತಿ ಹೆಚ್ಚಿನ ಹೊರೆ ಎನಿಸುವ ಹೆಲಿಕಾಪ್ಟರ್‌ಗಳನ್ನು ಮಸ್ಕಿ ಗಡಿ ಪ್ರವೇಶಕ್ಕೂ ಮುನ್ನವೇ ತಡೆದು ನಿಲ್ಲಿಸಲಾಗುತ್ತಿದೆ. ಮಸ್ಕಿ ಉಪಚುನಾವಣೆ ಪ್ರಚಾರಕ್ಕಾಗಿಯೇ ರಾಜಕೀಯ ಧುರೀಣರ ದಂಡು ಆಗಮಿಸಲಿದೆ. ಆದರೆ 25-30 ಕಿ.ಮೀ ಅಂತರದಲ್ಲಿಯೇ ಹೆಲಿಕ್ಯಾಪ್ಟರ್ ಇಳಿದು ಬಳಿಕ ರಸ್ತೆ ಮೂಲಕ ಮಸ್ಕಿ ಪ್ರವೇಶ ಮಾಡಲಿದ್ದಾರೆ.
ಏಲ್ಲೆಲ್ಲಿ ವ್ಯವಸ್ಥೆ?:
ಮಸ್ಕಿ ವಿಧಾನ ಸಭೆ ಕ್ಷೇತ್ರದ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಗಿಯುವ ಮುನ್ನವೇ ಈಗಾಗಲೇ ಎರಡು ಬಾರಿ ಹೆಲಿಕ್ಯಾಪ್ಟರ್ ಮೂಲಕ ರಾಜಕೀಯ ಮುಖಂಡರು ಪ್ರವಾಸ ಮುಗಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ ಮತ್ತು ಸಚಿವರಾದ ಕೆ.ಎಸ್. ಈಶ್ವರಪ್ಪ, ಲಕ್ಷ್ಮಣ ಸವದಿ, ಬಿ.ಶ್ರೀರಾಮುಲು ಮಾ.23ರಂದು ಮಸ್ಕಿಗೆ ಆಗಮಿಸಿದ್ದರು. ಆದರೆ ಸಿಂಧನೂರಿನಲ್ಲಿಯೇ ಹೆಲಿಕ್ಯಾಪ್ಟರ್ ಇಳಿದು ಬಳಿಕ ಕಾರಿನಲ್ಲಿ ಮಸ್ಕಿ ತಲುಪಿದ್ದರು. ಮಸ್ಕಿ ಪ್ರವಾಸ ಮುಕ್ತಾಯದ ಬಳಿಕ ಪುನಃ ಸಿಂಧನೂರಿನ ಹೆಲಿಪ್ಯಾಡ್ ನಿಂದಲೇ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದರು. ಇನ್ನು ಕಾಂಗ್ರೆಸ್‌ನಲ್ಲೂ ಅಂತಹದ್ದೇ ಸ್ಥಿತಿ ಇದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿ ಇತರೆ ನಾಯಕರ ದಂಡು ಮಾ.29ರಂದು ಮಸ್ಕಿಗೆ ಆಗಮಿಸಿತ್ತು. ಆದರೆ ತಾವಿದ್ದ ಹೆಲಿಕಾಪ್ಟರ್‌ನಲ್ಲಿ ನೇರವಾಗಿ ಮಸ್ಕಿಗೆ ಆಗಮಿಸದೇ, ನೆರೆಯ ಮುದಗಲ್ ಪಟ್ಟಣದ ಹೆಲಿಪ್ಯಾಡ್‌ನಲ್ಲಿ ಲ್ಯಾಂಡ್ ಆದರು. ಲಿಂಗಸುಗೂರು ಶಾಸಕ ಡಿ.ಎಸ್.ಹೂಲಗೇರಿಯ ಮುದಗಲ್‌ನಲ್ಲಿನ ನಿವಾಸದ ಬಳಿ ನಿರ್ಮಾಣ ಮಾಡಲಾಗಿದ್ದ ಹೆಲಿಪ್ಯಾಡ್ ನಲ್ಲಿ ಇಳಿದು ಅಲ್ಲಿಂದ ರಸ್ತೆ ಮಾರ್ಗವಾಗಿ ಮಸ್ಕಿಗೆ ಆಗಮಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿದ ಬಳಿಕ ಪುನಃ ವಾಪಸ್ಸು ಮುದಗಲ್‌ನಿಂದಲೇ ಬಸವಕಲ್ಯಾಣಕ್ಕೆ ಹಾರಿದ್ದಾರೆ.
ಮುಂದೆಯೂ ಹೀಗೆ:
ಮಸ್ಕಿ ವಿಧಾನ ಸಭೆ ಕ್ಷೇತ್ರದಲ್ಲಿ ಈಗಿನ್ನು ಚುನಾವಣೆ ಪ್ರಚಾರ ಆರಂಭವಾಗಿದೆ. ಇನ್ನು ಅಬ್ಬರದ ಪ್ರಚಾರ ಬಾಕಿ ಇದ್ದು, ಲೋಹದ ಹಕ್ಕಿಗಳ ಹಾರಾಟ ಇನ್ನಷ್ಟು ಚುರುಕಾಗಲಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿ ಇನ್ನು ಹಲವು ಘಟಾನುಘಟಿ ನಾಯಕರು ಮಸ್ಕಿ ಅಖಾಡಕ್ಕೆ ಇಳಿಯಲಿದ್ದಾರೆ. ಹೆಲಿಕಾಪ್ಟರ್ ಗಳಲ್ಲಿ ಬರುವ ನಾಯಕರು ಮಾತ್ರ ಇಲ್ಲಿಗೆ ಆಗಮಿಸಲಿದ್ದಾರೆ. ವಿನಃ ಹೆಲಿಕಾಪ್ಟರ್‌ಗಳು ಮಾತ್ರ ಮಸ್ಕಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ಬದಲಾಗಿ ನೆರೆಯ ಸಿಂಧನೂರು, ಮುದಗಲ್ ಇಲ್ಲವೇ ಲಿಂಗಸಗೂರಿನಲ್ಲಿಯೇ ಹೆಲಿಕಾಪ್ಟರ್‌ಗಳು ಲ್ಯಾಂಡ್ ಆಗಲಿವೆ. ಮಸ್ಕಿ ವಿಧಾನ ಸಭೆ ಕ್ಷೇತ್ರದಲ್ಲಿ ಪ್ರಚಾರದ ಧೂಳೆದ್ದೆಳಲಿದ್ದರೆ, ಹೆಲಿಕಾಪ್ಟರ್‌ಗಳ ಧೂಳು ಮಾತ್ರ ಪಕ್ಕದ ಕ್ಷೇತ್ರದಲ್ಲಿ ಎದ್ದೇಳಲಿದೆ.