ಬೆಂಗಳೂರು: ರಾಯಚೂರು ಜಿಲ್ಲೆಯ ಕಾಂಗ್ರೆಸ್ ಪಕ್ಷದ ಶಾಸಕರು, ಮುಖಂಡರ ಜೊತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ಸಮಾಲೋಚನೆ ನಡೆಸಿದರು.
ಸಿದ್ದರಾಮಯ್ಯ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಂಸದ ಬಿ.ವಿ.ನಾಯಕ್ ಅವರು, ಮಸ್ಕಿ ಉಪಚುನಾವಣೆಯ ಬಗ್ಗೆ ಚರ್ಚೆ ನಡೆಸಲಾಗಿದೆ. ಬಿಜೆಪಿಯ ಬಸನಗೌಡ ತುರ್ವಿಹಾಳ ಅವರು ಕಾಂಗ್ರೆಸ್ ಸೇರ್ಪಡೆ ಬಗ್ಗೆ ಚರ್ಚೆಯಾಗಿದೆ ಎಂದರು.
ಉಪಚುನಾವಣೆ ಆಗಿರುವುದರಿಂದ ಸಮರ್ಥ ಅಭ್ಯರ್ಥಿಯ ಹುಡುಕಾಟ ಮಾಡುತ್ತಿದ್ದೇವೆ. ಬಸನಗೌಡ ತುರ್ವಿಹಾಳ ಬಳಿ ನೇರವಾಗಿ ನಾವು ಮಾತನಾಡಿಲ್ಲ, ಆದರೆ ಪಕ್ಷ ಸೇರುವ ಬಗ್ಗೆ ಅವರ ಕಾರ್ಯಕರ್ತರ ಬಳಿ ತುರ್ವಿಹಾಳ ಹೇಳುತ್ತಿದ್ದಾರೆ. ಅವರು ಪಕ್ಷಕ್ಕೆ ಬಂದರೆ ಸ್ವಾಗತ. ಇದರ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದರು.
ಡಿಕೆಶಿಯವರನ್ನು ಭೇಟಿ ವಿಚಾರವಾಗಿ ಮಾತನಾಡಿದ ಬಿ.ವಿ.ನಾಯಕ್, ಡಿಕೆ ಶಿವಕುಮಾರ್ ಅವರು ಇನ್ನೂ ದೆಹಲಿಯಲ್ಲೇ ಇದ್ದಾರೆ. ಬೆಂಗಳೂರಿಗೆ ಬಂದ ನಂತರ ಅವರನ್ನು ಭೇಟಿ ಮಾಡುತ್ತೇವೆ. ಅವರನ್ನು ಭೇಟಿ ಮಾಡುತ್ತಲೇ ಇರುತ್ತೇವೆ ಎಂದರು.
ಉಪಚುನಾವಣೆಯಲ್ಲಿ ತಮ್ಮ ಸೊಸೆ ಶ್ರೀದೇವಿ ನಾಯಕ್ ಸ್ಪರ್ಧಿಸುತ್ತಾರೆಂಬ ಮಾತಿಗೆ ಪ್ರತಿಕ್ರಿಯೆ ನೀಡಿದ ಬಿ.ವಿ.ನಾಯಕ್, ಜಿಲ್ಲಾ ಮುಖಂಡರ ಅಭಿಪ್ರಾಯ ಪಡೆಯಬೇಕು, ನಂತರ ಅದರ ಬಗ್ಗೆ ಚರ್ಚೆ ಮಾಡುತ್ತೇವೆ. ಈಗ ಸ್ಪರ್ಧೆ ಕಣದಲ್ಲಿ ನಮ್ಮ ಕುಟುಂಬದಿಂದ ಯಾರೂ ಇಲ್ಲ ಎಂದರು.