ಮಸ್ಕಿ,: 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲುವಿನ ಅಂತರ ಕೇವಲ 213. ಆದರೆ 2021ರಲ್ಲಿ ಗೆಲುವಿನ ಅಂತರ 30,641. ಅಂದು ಅತಿ ಕಡಿಮೆ ಅಂತರದಲ್ಲಿ ಸೋತ ಅಭ್ಯರ್ಥಿಯೇ ಇಂದು ಅಧಿಕ ಅಂತರದಲ್ಲಿ ಗೆದ್ದಿದ್ದಾರೆ! ಇದು ಮಸ್ಕಿ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿನ ಹೊಸ ದಾಖಲೆ.
ಈ ಹಿಂದಿನ 3 ಅವಧಿಯ ಚುನಾವಣೆಯಲ್ಲೂ ದಾಖಲಾಗದ ಅಂಕಿ- ಸಂಖ್ಯೆ ಈ ಬಾರಿ ದಾಖಲಾಗಿದ್ದು ಗಮನಾರ್ಹ. ಗೆಲುವಿನ ಅಂತರ ಇದೇ ಮೊದಲ ಬಾರಿಗೆ 30 ಸಾವಿರದ ಗಡಿ ದಾಟಿರುವುದು ಹೊಸ ಇತಿಹಾಸ. ಈ ದಾಖಲೆ ಪ್ರಮಾಣ ಮಸ್ಕಿ ಕ್ಷೇತ್ರದ ರಾಜಕೀಯ ಚಿತ್ರಣವನ್ನೇ ಏರುಪೇರಾಗಿಸಿದ್ದು, ರಾಜಕೀಯ ಮುಖಂಡರು ಮಾತ್ರವಲ್ಲ, ವಿಶ್ಲೇಷಕರ ಲೆಕ್ಕಚಾರವನ್ನೇ ಬುಡಮೇಲು ಮಾಡಿದೆ.
ಹೀಗಿದೆ ಅಂತರ :
ಕ್ಷೇತ್ರದ ಮರು ವಿಂಗಡಣೆ ವೇಳೆ 2008ರಲ್ಲಿ ಮಸ್ಕಿ ವಿಧಾನಸಭೆ ಕ್ಷೇತ್ರ ಉದಯವಾಗಿದ್ದು, ಮೊದಲ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಪ್ರತಾಪಗೌಡ ಪಾಟೀಲ್ 35,711 ಮತಗಳನ್ನು ಹಾಗೂ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದ ಆರ್.ತಿಮ್ಮಯ್ಯ ನಾಯಕ 28,068 ಮತಗಳನ್ನು ಪಡೆದಿದ್ದರು.
2013ರಲ್ಲಿ ಪಕ್ಷಾಂತರ ಮಾಡಿದ್ದ ಪ್ರತಾಪಗೌಡ ಪಾಟೀಲ್ ಕಾಂಗ್ರೆಸ್‌ನಿಂದ ಸ್ಪರ್ಧಿಸಿ 45,552 ಮತಗಳನ್ನು ಪಡೆದುಕೊಂಡಿದ್ದು, ಕೆಜೆಪಿಯಿಂದ ಸ್ಪರ್ಧಿಸಿದ್ದ ಮಹಾದೇವಪ್ಪಗೌಡ 26,405 ಮತಗಳನ್ನು ಪಡೆದು ಕೊಂಡಿದ್ದರು. 2018ರ ಸಾರ್ವತ್ರಿಕ ಚುನಾವಣೆ ವೇಳೆ ಪುನಃ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ಪ್ರತಾಪಗೌಡ ಪಾಟೀಲ್ 60,387 ಮತಗಳನ್ನು ಪಡೆದುಕೊಂಡರೆ, ಬಿಜೆಪಿಯ ಆರ್.ಬಸನಗೌಡ ತುರುವಿಹಾಳ 60,174 ಮತಗಳನ್ನು ಪಡೆದುಕೊಂಡಿದ್ದರು.
ಊಹೆ ಮೀರಿ ಮತ ಹಾಕಿದ ಮಹಿಳೆಯರು :
2008ರಲ್ಲಿ ಶೇ.50ರಷ್ಟು, 2013ರಲ್ಲಿ ಶೇ.64.14, 2018ರಲ್ಲಿ ಶೇ.68.98ರಷ್ಟು ಮತದಾನವಾಗಿತ್ತು. ಆದರೆ ಈ ಬಾರಿಯ ಉಪಚುನಾ ವಣೆಯಲ್ಲಿ ಮಸ್ಕಿ ಮತಕ್ಷೇತ್ರ ದಲ್ಲಿ ಮೊದಲ ಬಾರಿಗೆ ಶೇ. 70.46ರಷ್ಟು ಮತದಾನ ದಾಖಲಾಗಿತ್ತು. ಈ ಮತ ಪ್ರಮಾ ಣವೇ ಗೆಲುವಿನ ಅಂತರ ಹೆಚ್ಚಾ ಗಲಿದೆ ಎನ್ನುವ ಮುನ್ಸೂಚನೆ ನೀಡಿತ್ತು. ವಿಶೇಷವಾಗಿ ಮಹಿಳಾ ಮತದಾರರೇ ಈ ಬಾರಿ ನಿರ್ಣಾಯಕರಾಗಿದ್ದಾರೆ ಎನ್ನಲಾಗುತ್ತಿದೆ.
-ಮಲ್ಲಿಕಾರ್ಜುನ ಚಿಲ್ಕರಾಗಿ