ಬೆಳಗಾವಿ: ಕೋವಿಡ್ 19 ವೈರಸ್ ಹರಡದಂತೆ ಶ್ರಮಿಸುತ್ತಿರುವವರಿಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ವತಿಯಿಂದ ಮಾಸ್ಕ್ಗಳು, ಸ್ಯಾನಿಟೈಸರ್ ಮತ್ತು ಹ್ಯಾಂಡ್ ಗ್ಲೌಸ್ ವಿತರಿಸಲಾಯಿತು.
ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಎಂ. ರಾಮಚಂದ್ರಗೌಡ ಕುಲಪತಿಗಳ ನೇತೃತ್ವದಲ್ಲಿ ಕೊರೊನಾ ವಾರಿಯರ್ಸ್ ಗಳಾದ ಪೌರ ಕಾರ್ಮಿಕರು, ಹೋಮ್ ಗಾಡ್ಸ್ ಹಾಗೂ ಪೊಲೀಸ್ ಸಿಬ್ಬಂದಿಗೆ1000 ಮಾಸ್ಕ್, 400 ಸ್ಯಾನಿಟೈಸರ್ ಹಾಗೂ 500 ಹ್ಯಾಂಡ್ ಗ್ಲೌಸ್‌ಗಳನ್ನು ನೀಡಲಾಯಿತು.
ಮಹಾನಗರ ಪಾಲಿಕೆ ಆಯುಕ್ತ ಜಗದೀಶ, ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶಕುಮಾರ, ಬೆಳಗಾವಿಯ ಹೋಮ್‌ಗಾರ್ಡ್ಸ್ ಕಮಾಂಡೆಂಟ್ ಆಫೀಸರ್ ಡಾ| ಕಿರಣ ನಾಯಿಕ ಸಮ್ಮುಖದಲ್ಲಿ ಸಾಮಗ್ರಿ ವಿತರಿಸಲಾಯಿತು. ಕುಲಪತಿ ಪ್ರೊ| ಎಂ. ರಾಮಚಂದ್ರಗೌಡ ಮಾತನಾಡಿ, ಕೋವಿಡ್ 19 ವೈರಸ್ ದೇಶಕ್ಕೆ ತಗುಲಿದ ಪಿಡುಗು. ಇದನ್ನು ಪ್ರತಿಯೊಬ್ಬರೂ ಒಂದಾಗಿ ತೊಲಗಿಸಬೇಕಾಗಿದೆ. ಈ ನಿಟ್ಟಿನಲ್ಲಿ ವೈದ್ಯರು, ಪೌರ ಕಾರ್ಮಿಕರು, ಪೊಲೀಸರು, ಹೋಮ್‌ಗಾಡ್ಸ್ ಮತ್ತು ಆಶಾ ಕಾರ್ಯಕರ್ತೆಯರು ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿದ್ದಾರೆ. ಅವರ ಸೇವೆ ಶ್ಲಾಘನೀಯ ಎಂದರು.
ಈ ವೇಳೆ ಕುಲಸಚಿವರಾದ ಪ್ರೊ| ಬಸವರಾಜ ಪದ್ಮಶಾಲಿ, ಹಣಕಾಸು ಅಧಿಕಾರಿ ಪ್ರೊ| ಡಿ.ಎನ್. ಪಾಟೀಲ, ಕುಲಪತಿಗಳ ವಿಶೇಷಾಧಿಕಾರಿ ಡಾ| ಎಂ. ಜಯಪ್ಪ, ಪ್ರೊ| ವಿಜಯಲಕ್ಷ್ಮೀಶೀಗೆಹಳ್ಳಿ, ಪ್ರೊ| ಚಂದ್ರಕಾಂತ ವಾಘಮೋರೆ, ಪ್ರೊ| ಚಂದ್ರಿಕಾ ಕೆ.ಬಿ, ವಿಶ್ವವಿದ್ಯಾಲಯದ ವೈದ್ಯಾಧಿಕಾರಿ ಡಾ| ಯೋಗಿತಾ ಪೋತದಾರ, ರಾಷ್ಟ್ರೀಯ ಸೇವಾ ಯೋಜನಾ ಸಂಯೋಜಕ ಪ್ರೊ| ಬಿ.ಎಸ್. ನಾವಿ ಇದ್ದರು.