Advertisement

ಮಾರುಕಟ್ಟೆಯಲ್ಲಿ ಮಾಸ್ಕ್ ಮಾಫಿಯಾ ಶಂಕೆ!

02:40 PM Mar 14, 2020 | Suhan S |

ಹಾವೇರಿ: ಕೊರೊನಾ ಸೋಂಕಿನ ಭೀತಿಯಿಂದ ಜನರು ಆತಂಕಗೊಂಡು ಎಲ್ಲೆಡೆ ಮುನ್ನೆಚ್ಚರಿಕೆ ಕ್ರಮವಾಗಿ ಮಾಸ್ಕ್ ಗೆ ಮೊರೆ ಹೋಗುತ್ತಿದ್ದಾರೆ. ಆದರೆ, ಜಿಲ್ಲೆಯ ಔಷಧ ಅಂಗಡಿಗಳಲ್ಲಿ ಮಾತ್ರ ಮಾಸ್ಕ್ ಸಿಗದೆ ಜನರು ಮತ್ತಷ್ಟು ಕಂಗಾಲಾಗಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಯಾವುದೇ ಕಂಡು ಬಾರದೆ ಇದ್ದರೂ ಕೆಮ್ಮು, ಶೀತದಿಂದ ವೈರಾಣುಗಳು ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದನ್ನು ತಡೆಯಲು ಜನರು ಮಾಸ್ಕ್ ಗಳಿಗೆ ಮೊರೆ ಹೋಗುತ್ತಿದ್ದಾರೆ.

Advertisement

ಇನ್ನು ಶಾಲಾ- ಕಾಲೇಜುಗಳಲ್ಲಿಯೂ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸಲು ವಿದ್ಯಾರ್ಥಿಗಳಿಗೆ ಸೂಚಿಸಲಾಗುತ್ತಿದ್ದು, ಜಿಲ್ಲೆಯಲ್ಲಿ ಮಾಸ್ಕ್ಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಆದರೆ, ಮಾರುಕಟ್ಟೆಯಲ್ಲಿ ಮಾಸ್ಕ್ಗಳು ದೊರೆಯದೇ ಇರುವ ಹಿಂದೆ ಮಾಸ್ಕ್ ಮಾಫಿಯಾದ ಶಂಕೆ ವ್ಯಕ್ತವಾಗಿದೆ.

ನೋ ಸ್ಟಾಕ್‌: ಮಾರುಕಟ್ಟೆಯಲ್ಲಿ ಮಾಸ್ಕ್ ಲಭ್ಯತೆಯ ಸತ್ಯಾಸತ್ಯತೆ ಅರಿಯಲು “ಉದಯವಾಣಿ’ ಜನೌಷಧಿ ಅಂಗಡಿ ಸೇರಿದಂತೆ 30ಕ್ಕೂ ಹೆಚ್ಚು ಪ್ರಮುಖ ಔಷ ಧ ಅಂಗಡಿಗಳಲ್ಲಿ ವಿಚಾರಿಸಿದಾಗ ಎಲ್ಲೆಡೆ “ಮಾಸ್ಕ್ ಇಲ್ಲ’, “ಮಾಸ್ಕ್ ಸ್ಟಾಕ್‌ ಇಲ್ಲ’, “ಮಾಸ್ಕ್ ಸಪ್ಲೈ ಇಲ್ಲ’ ಎಂಬ ಉತ್ತರಗಳೇ ಕೇಳಿ ಬಂದವು.

ಕಳೆದ ಒಂದೆರಡು ವಾರಗಳಿಂದ ಮಾಸ್ಕ್ ಗಳು ಸರಬರಾಜು ಆಗಿಲ್ಲ ಎಂದು ಹಲವು ಔಷಧ ಅಂಗಡಿಗಳ ಮಾಲೀಕರು ಗ್ರಾಹಕರಿಗೆ ಹೇಳುತ್ತಿದ್ದು, ಇದು ಎಷ್ಟರ ಮಟ್ಟಿಗೆ ನಿಜ ಎಂಬುದನ್ನು ಆರೋಗ್ಯ ಇಲಾಖೆಯೇ ಖಚಿತ ಪಡಿಸಬೇಕಾಗಿದೆ.

ಅತ್ಯಧಿಕ ದರಕ್ಕೆ ಮಾರಾಟ: ಮಾಸ್ಕ್ಗಳು ವಾಸ್ತವದಲ್ಲಿ ಸರಬರಾಜು ಇಲ್ಲ ಎಂಬ ಉತ್ತರ ಔಷಧ ಅಂಗಡಿಗಳಿಂದ ಕೇಳಿ ಬರುತ್ತಿದೆಯಾದರೂ ಕೆಲವು ಅಂಗಡಿಗಳಲ್ಲಿ ಮಾಸ್ಕ್ಗಳನ್ನು 150ರಿಂದ 200ರೂ. ಗಳಿಗೆ ಮಾರಾಟ ಮಾಡುತ್ತಿದ್ದಾರೆಂಬ ವದಂತಿಯೂ ವ್ಯಾಪಕವಾಗಿ ಹಬ್ಬಿದೆ. ಹೀಗಾಗಿ “ಮಾಸ್ಕ್ ದಾಸ್ತಾನು ಇಲ್ಲ’ ಎಂಬುದರ ಹಿಂದೆ ಕಾಣದ ಕೈಗಳ ಕೈವಾಡ ಇರಬಹುದೇ ಎಂಬ ಸಂಶಯ ದಟ್ಟವಾಗಿದೆ.

Advertisement

ಬಟ್ಟೆ ಮಾಸ್ಕ್ ಗೆ ದರ ಹೆಚ್ಚಳ: ಔಷಧ ಅಂಗಡಿಗಳಲ್ಲಿ ಮಾಸ್ಕ್ ಸಿಗುತ್ತಿಲ್ಲ. ಸಾದಾ ಬಟ್ಟೆಯಿಂದ ತಯಾರಿಸಿದ ಮಾಸ್ಕ್ಗಳನ್ನಾದರೂ ಖರೀದಿಸೋಣ ಎಂದರೆ ಅಲ್ಲಿಯೂ ದರ ಹೆಚ್ಚಳದ ಭೂತ ಜನರನ್ನು ಕಾಡುತ್ತಿದೆ. ಸಾಮಾನ್ಯ ದಿನಗಳಲ್ಲಿ 10-15ರೂ. ಗಳಿಗೆ ಒಂದರಂತೆ ಮಾರಾಟವಾಗುತ್ತಿದ್ದ ಬಟ್ಟೆಯ ಮಾಸ್ಕ್ ಗಳನ್ನು 50ರಿಂದ 100ರೂ.ವರೆಗೂ ಮಾರಾಟ ಮಾಡಲಾಗುತ್ತಿದೆ. ಒಟ್ಟಾರೆ ಕೊರೊನಾ ಸೋಂಕಿನ ಭೀತಿಯ ದುರ್ಲಾಭ ಪಡೆಯಲು ಕೆಲವು ಕುಹಕಿಗಳು ಮುಂದಾಗಿದ್ದು ಜನರು ಸುರಕ್ಷತಾ ಕ್ರಮ ಕೈಗೊಳ್ಳಲು ಸಹ ಪರದಾಡುವಂತಾಗಿದೆ.

ಮಾಸ್ಕ್ ಸರಬರಾಜು ಸಮರ್ಪಕವಾಗಿಲ್ಲ. ಕೆಲ ಸಗಟು ವ್ಯಾಪಾರಸ್ಥರು ಮಾರಾಟ ಮಾಡುತ್ತಿದ್ದರೂ ಅವರ ದರ ಅತಿ ಹೆಚ್ಚಾಗಿದೆ. 100-150ರೂ.ಗಳಿಗೆ ಒಂದರಂತೆ ಮಾರುತ್ತಿದ್ದಾರೆ. ನಾವು ಅಂಗಡಿಯವರು ಅಷ್ಟೊಂದು ಅ ಧಿಕ ದರ ಕೊಟ್ಟು ತಂದು ನಾವು ಅದರಲ್ಲಿ ನಾವೂ ಲಾಭ ಇಟ್ಟುಕೊಂಡು

ಎಷ್ಟಕ್ಕೆ ಮಾರಬೇಕು ಎಂಬುದು ತಿಳಿಯುತ್ತಿಲ್ಲ. ಇನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡಿ ಸಿಕ್ಕಿಬಿದ್ದರೆ ಲಕ್ಷಾಂತರ ರೂ. ದಂಡ ತುಂಬಬೇಕು. ಹಾಗಾಗಿ ನಾವು ಮಾಸ್ಕ್ ತರಿಸುತ್ತಿಲ್ಲ.  –ಹೆಸರು ಹೇಳಲಿಚ್ಛಿಸದ ಔಷಧಿ ಅಂಗಡಿ ಮಾಲೀಕ

ಜಿಲ್ಲಾಸ್ಪತ್ರೆಯಲ್ಲಿ 24000 ಮಾಸ್ಕ್ ದಾಸ್ತಾನು ಇದೆ. ಇನ್ನು ತಾಲೂಕಾಸ್ಪತ್ರೆಗಳಲ್ಲಿಯೂ ಸಾಕಷ್ಟು ದಾಸ್ತಾನು ಇದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎಷ್ಟು ಬೇಕಾಗಿದೆ ಎಂಬುದನ್ನು ಪರಿಶೀಲಿಸಿ ಶೀಘ್ರವೇ ತರಿಸುವ ವ್ಯವಸ್ಥೆ ಮಾಡುತ್ತೇನೆ. ಇನ್ನು ಖಾಸಗಿ ಔಷಧಿ ಅಂಗಡಿಯವರಿಗೆ ಮಾಸ್ಕ್ ಗಳನ್ನು ಕಡ್ಡಾಯವಾಗಿ ತರಿಸಿಕೊಳ್ಳಲು ಆದೇಶಿಸಲಾಗಿದೆ.- ರಾಜೇಂದ್ರ ದೊಡ್ಡಮನಿ, ಜಿಲ್ಲಾ ಆರೋಗ್ಯಾಧಿಕಾರಿ

 

-ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next