Advertisement

ಕೋವಿಡ್ ಕಾರಣ: ಮನಸ್ಸಿನ ಕನ್ನಡಿಗೆ ಮಾಸ್ಕ್ ಮುಸುಕು

03:47 AM May 20, 2020 | Hari Prasad |

ಬೆಂಗಳೂರು: ಬಸ್‌ ಬಳಿ ಪ್ರಯಾಣಿಕರು ಸಾಲುಗಟ್ಟಿದ್ದರು. ಅದರಲ್ಲೊಬ್ಬರು ಗಡಿಬಿಡಿಯಲ್ಲಿ ನಿಗದಿತ ರೇಖೆ ಉಲ್ಲಂಘಿಸಿ ಸ್ವಲ್ಪ ಮುಂದೆ ಹೋದರು.

Advertisement

ತತ್‌ಕ್ಷಣ ಎದುರಿದ್ದ ಇನ್ನೊಬ್ಬರ ಮುಖಭಾವ ಬದಲಾಯಿತು. ಆದರೆ ಅದು ಕಾಣುವಂತಿಲ್ಲ, ಏಕೆಂದರೆ ಮಾಸ್ಕ್ ಇದೆ!

ಹಾಗಾಗಿ, ಕೂಗಿ ಕೈಸನ್ನೆ ಮಾಡಿ ಹಿಂದಕ್ಕೆ ಕಳುಹಿಸಬೇಕಾಯಿತು. ಪ್ರತಿಯಾಗಿ ಸಹ ಪ್ರಯಾಣಿಕ ಕಿರುನಗು ಬೀರಿದರು. ಅದು ಕೂಡ ಕಾಣಿಸಲಿಲ್ಲ!

ಮೇಲ್ನೋಟಕ್ಕೆ ಇದೊಂದು ಸಣ್ಣ ಸಮಸ್ಯೆ. ಆದರೆ ಈಗಾಗಲೇ ಸಾರ್ವಜನಿಕ ಸ್ಥಳಗಳಲ್ಲಿ ನಿತ್ಯ ಅನುಭವಕ್ಕೆ ಬರುತ್ತಿದೆ. ಮುಖ ಮನಸ್ಸಿನ ಕನ್ನಡಿ ಎಂಬ ಮಾತಿದೆ. ಆದರೆ ಕೋವಿಡ್ ಕಾಟ ಈಗ ಅದಕ್ಕೆ ಮಾಸ್ಕ್ ಮುಸುಕು ಹಾಕಿದೆ. ಭವಿಷ್ಯದಲ್ಲಿ ಇದು ನಮ್ಮ ಜೀವನ ಶೈಲಿಯ ಬದಲಾವಣೆಗೂ ಕಾರಣವಾಗಬಹುದು. ಅದಕ್ಕಾಗಿ ಮಾನಸಿಕವಾಗಿ ಸಿದ್ಧರಾಗಬೇಕಾಗಿದೆ.

ಸಾಮಾನ್ಯವಾಗಿ ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ಪುಟ್ಟ ಸಂಭಾಷಣೆಗಳು ಆತ್ಮೀಯತೆ ಬೆಳೆಯಲು ಕಾರಣವಾಗುತ್ತವೆ. ಆದರೆ ಈಗಿನ ಮಾಸ್ಕ್ ಈ ಮಾತುಕತೆಯ ಸಂದರ್ಭ ಸಂವಹನಕ್ಕೆ ಪೂರಕವಾದ ಮುಖದ ಅಭಿವ್ಯಕ್ತಿಗೆ ಅಡ್ಡಿಯಾಗಿದೆ. ಮಾಸ್ಕ್ ಜತೆಗೆ ಸಾಮಾಜಿಕ ಅಂತರ, ಸ್ಯಾನಿಟೈಸರ್‌ನಂತಹ ನಿಯಮಗಳನ್ನು ವರ್ಷಗಟ್ಟಲೆ ಅನುಸರಿಸುವುದು ನಮಗಿನ್ನು ಅನಿವಾರ್ಯ ಆಗಲಿದೆ.

Advertisement

ಇದು ಸಂವಹನದ ಮೇಲೆ ಪರಿಣಾಮ ಬೀರಲಿದ್ದು, ವ್ಯಕ್ತಿಗಳ ನಡುವಿನ ಬಾಂಧವ್ಯ ಬೆಸುಗೆಗೆ ಅಡ್ಡಿಯಾಗಬಹುದೇನೋ. ಮುಂದಿನ ದಿನಗಳಲ್ಲಿ ನಮ್ಮ ಜೀವನ ಪದ್ಧತಿಗಳಲ್ಲಿ ಬದಲಾವಣೆ ಮಾಡಿಕೊಳ್ಳುವುದು ಅನಿವಾರ್ಯ ಆಗಬಹುದು ಎಂದು ಮನೋವೈದ್ಯರು ಮತ್ತು ತಜ್ಞರು ಅಭಿಪ್ರಾಯಪಡುತ್ತಾರೆ.
ಮಾನಸಿಕ ಅಂತರದ ಕಡೆಗೆ…

ಸೋಂಕಿನ ಹರಡುವಿಕೆಯ ಮೂಲದ ಬಗ್ಗೆ ಸದ್ಯ ಸ್ಪಷ್ಟತೆ ಇಲ್ಲ. ಚಿಕಿತ್ಸೆಯನ್ನೂ ಕಂಡುಹಿಡಿದಿಲ್ಲ. ಇದು ಎಲ್ಲಿಯವರೆಗೆ ಇರಲಿದೆ ಎಂಬುದೂ ಗೊತ್ತಿಲ್ಲ. ಈ ಎಲ್ಲ ಅನಿಶ್ಚಿತತೆಗಳ ನಡುವೆ ಬದುಕು ಸಾಗುತ್ತಿದೆ. ಪರಿಣಾಮವಾಗಿ ದೈಹಿಕ -ಸಾಮಾಜಿಕ ಅಂತರ ಈಗ ಮಾನಸಿಕ ಅಂತರವಾಗಿ ಪರಿವರ್ತನೆಯಾಗುತ್ತಿದೆ. ವಾಸ್ತವವಾಗಿ ಮಾಸ್ಕ್ ಮತ್ತು ಸಾಮಾಜಿಕ ಅಂತರ ಎರಡೂ ಮನುಷ್ಯನ ಸಂಘಜೀವಿ ಮೂಲಗುಣಕ್ಕೇ ತದ್ವಿರುದ್ಧ ಎನ್ನುತ್ತಾರೆ ಮನಶಾಸ್ತ್ರಜ್ಞರು.

ಮಾಸ್ಕ್ ಮುಸುಕಿನಿಂದ ಎಲ್ಲ ಹಂತಗಳಲ್ಲೂ ಸಂವಹನಕ್ಕೆ ‘ವಿಚಿತ್ರ’ ಅಡ್ಡಿ ಉಂಟಾಗುತ್ತಿದೆ. ಅದರಲ್ಲೂ ನರ್ಸರಿ ಮತ್ತು ಪೂರ್ವ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಆಗಬಲ್ಲ ಕಿರಿಕಿರಿ ಹೆಚ್ಚು. ಮಕ್ಕಳ ವರ್ತನೆ, ಅವರು ಎದುರಿಸುತ್ತಿರುವ ಸಮಸ್ಯೆ, ತರಗತಿಯಲ್ಲಿ ಆಸಕ್ತಿ ಮತ್ತಿತರ ಅಂಶಗಳ ಬಗ್ಗೆ ತಿಳಿಯಲು ಮಾಸ್ಕ್ ಅಡ್ಡಿ ಆಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next