ಕುರುಗೋಡು : ರಾಜ್ಯದಲ್ಲಿ ಕೊರೊನಾ ಅಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣದ ತಹಸೀಲ್ದಾರ್ ಕಛೇರಿ ಸಿಬ್ಬಂದಿಗಳು, ಪುರಸಭೆ ಸಿಬ್ಬಂದಿಗಳು, ಪೊಲೀಸ್ ಇಲಾಖೆ ಜಂಟಿಯಾಗಿ ಪಟ್ಟಣದ ವಿವಿಧ ಕಡೆ ತೆರಳಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಮಾಸ್ಕ್ ಧರಿಸದೆ ಇರುವವರಿಗೆ ದಂಡ ವಿಧಿಸಿದ್ದಾರೆ.
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಮಾಸ್ಕ್ ಧರಿಸದ ಪ್ರಯಾಣಿಕರಿಗೆ ದಂಡ ವಿಧಿಸಿದರು.
ಪಟ್ಟಣದ ಅಂಬೇಡ್ಕರ್ ವೃತ್ತ, ಗೆಣಿಕೆಹಾಳ್ ರಸ್ತೆ, ಕಂಪ್ಲಿ ರಸ್ತೆ ಸೇರಿದಂತೆ ಮುಖ್ಯ ರಸ್ತೆ ಗಳಲ್ಲಿ ತೆರಳಿ ಹಾಗೂ ಅಂಗಡಿಗಳಲ್ಲಿ ವ್ಯಾಪಾರ ಮಾಡುವ ಮಾಲೀಕರು ಮಾಸ್ಕ್ ಧರಿಸದೆ ವಹಿವಾಟು ನಡೆಸುತ್ತಿದ್ದವರಿಗೆ ದಂಡ ವಿಧಿಸುವ ಮೂಲಕ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಡೆಸಿದರು.
ಪುರಸಭೆ ಅಧಿಕಾರಿಗಳು ಕೊರೊನಾ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಪಟ್ಟಣದ ಪ್ರತಿಯೊಂದು ಕಡೆ ನಿಂತುಕೊಂಡು ಮಾಸ್ಕ್ ಧರಿಸದೆ ಸಂಚರಿಸುವ ಪ್ರಯಾಣಿಕರಿಗೆ ಕೋವಿಡ್ ಜಾಗೃತಿ ಮೂಡಿಸುವ ಜತೆಗೆ ದಂಡ ವಿಧಿಸುವಂತೆ ಪುರಸಭೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಹಸೀಲ್ದಾರ್ ರಾಘವೇಂದ್ರ ರಾವ್ ತಿಳಿಸಿದರು.
ಅಂಗಡಿ ಮಾಲೀಕರಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ಗ್ರಾಹಕರಿಗೂ ಮಾಸ್ಕ್ ಧರಿಸುವಂತೆ ಮಾಹಿತಿ ನೀಡಬೇಕು. ತಪ್ಪಿದಲ್ಲಿ ಅಂಗಡಿ ಮಾಲೀಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಇದಲ್ಲದೆ ನಾಳೆಯಿಂದ ಪ್ರತಿಯೊಂದು ವಾರ್ಡ್ ಗಳಿಗೆ ಭೇಟಿ ನೀಡಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಹಮ್ಮಿಕೊಳ್ಳಲಾಗಿದೆ. ಇನ್ನೂ ಬರೆ ಮಾಸ್ಕ್ ಹಾಕದೆ ಇರುವವರ ಬಗ್ಗೆ ನಿಗಾ ವಹಿಸಲು 9 ತಂಡಗಳನ್ನು ರಚನೆ ಮಾಡಲಾಗಿದೆ ಎಂದರು.
ನೂತನವಾಗಿ ಪುರಸಭೆ ಗೆ ಆಯ್ಕೆಗೊಂಡ ಸದಸ್ಯರನ್ನು ಸಭೆ ಕರೆದು ವಾರ್ಡ್ ಗಳಲ್ಲಿ ಕೊರೊನಾ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು. ಒಂದು ವೇಳೆ ಅಂತಹ ಕೇಸ್ ಗಳು ಕಂಡು ಬಂದಲ್ಲಿ ಪುರಸಭೆ ಸದಸ್ಯರು ಹಾಗೂ ಅಂಗನವಾಡಿ ಕಾರ್ಯಕರ್ತರು ಮತ್ತು ಆಶಾ ಕಾರ್ಯಕರ್ತರು ತಹಸೀಲ್ದಾರ್ ಕಚೇರಿ ಗಮನಕ್ಕೆ ತರಬೇಕು ಎಂದು ತಿಳಿಸಿಲಾಗುತ್ತದೆ ಎಂದರು.
ಮಾಸ್ಕ್ ಧರಿಸದೆ ಇರುವವರಿಗೆ ದಂಡ ವಿಧಿಸಲಾಗಿದ್ದು ಒಟ್ಟು 5 ಸಾವಿರ ವಸೂಲಿ ಮಾಡಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಗ್ರೇಡ್ 2 ತಹಸೀಲ್ದಾರ್ ಮಲ್ಲೇಶಪ್ಪ, ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಹಾಗೂ ಪುರಸಭೆ ಸಿಬ್ಬಂದಿಗಳು ಇದ್ದರು.