ದಕ್ಷಿಣ ಭಾರತೀಯರನ್ನು ಒಗ್ಗೂಡಿಸಬಹುದಾದ ಏನಾದರೊಂದು ಸಂಗತಿಯಿದ್ದರೆ ಅದು ಖಾದ್ಯವೇ. ಅದರಲ್ಲೂ ದೋಸೆಗೆ ಪ್ರಮುಖ ಸ್ಥಾನ! ಹೊಟೇಲುಗಳಿಗೆ ಹೋದಾಗ ನಾನಾ ಬಗೆಯ ದೋಸೆಗಳನ್ನು ನೀವು ತಿಂದಿರಬಹುದು. ಅವುಗಳ ಗಾತ್ರ ಎಷ್ಟಿದ್ದಿರಬಹುದು. ಪ್ಲೇಟಿನಷ್ಟು ಗಾತ್ರದ ಪುಟ್ಟದ್ದಿರಬಹುದು, ಅಬ್ಬಬ್ಟಾ ಎಂದರೆ ಹರಿವಾಣ ತಟ್ಟೆಯಷ್ಟು ಅಗಲವಿದ್ದಿರಬಹುದು. ಅದಕ್ಕಿಂತ ದೊಡ್ಡ ದೋಸೆಯನ್ನು ನೋಡಿದ್ದೀರಾ? ಇಲ್ಲಿದೆ ನೋಡಿ ಆರಡಿ ದೋಸೆ!
ನಮ್ಮ ಬೆಂಗಳೂರಿನಲ್ಲಿ “ಆರ್.ಕೆ ದೋಸಾ ಕ್ಯಾಂಪ್’ ಎಂಬ ಹೋಟೆಲ್ ಇದೆ. ದರ್ಶಿನಿಯ ಶೈಲಿಯಲ್ಲಿರುವ ಈ ಹೋಟೆಲ್‌ನ ವೈಶಿಷ್ಟ ಅಂದ ಚಂದದಲ್ಲೋ, ಮಾಡ್ರನ್ ಒಳಾಲಂಕಾರದಲ್ಲೋ ಇಲ್ಲ. ಬದಲಿಗೆ ಅಲ್ಲಿ ಸಿಗೋ ದೋಸೆಯಲ್ಲಿದೆ. ಒಂದು ದೋಸೆಯಿಂದ ಹೇಗೆ ಪ್ರಖ್ಯಾತವಾಗಬಹುದು ಎಂಬುದಕ್ಕೆ ಈ ಹೋಟೆಲ್ ಉದಾಹರಣೆ. ಇಂಟರ್‌ನೆಟ್‌ನಲ್ಲಿರುವ ಈ ಹೋಟೆಲ್ ಕುರಿತ ವಿಡಿಯೋ ಒಂದನ್ನು 8 ಲಕ್ಷಕ್ಕೂ ಅಧಿಕ ಮಂದಿ ನೋಡಿದ್ದಾರೆ.
ಅಷ್ಟಕ್ಕೂ ಅಲ್ಲಿನ ದೋಸೆಯ ಸ್ಪೆಷಾಲಿಟಿ ಏನು ಗೊತ್ತಾ? ಆರಡಿ ದೋಸೆಯದು! ಈ ಹೋಟೆಲ್‌ಗೆ ಹೋಗಿ ಫ್ಯಾಮಿಲಿ ದೋಸೆ ಕೊಡಿ ಎಂದರೆ ನಿಮಗದು ಸಿಗುತ್ತೆ. ಈ ಆರಡಿ ದೋಸೆಯನ್ನು ತಿನ್ನೋಕೆ ಒಬ್ಬರಿಂದ ಅಂತೂ ಖಂಡಿತಾ ಸಾಧ್ಯವಿಲ್ಲ. ಅದಕ್ಕೇ ಇದನ್ನು ಫ್ಯಾಮಿಲಿ ದೋಸೆ ಎಂದು ಕರೆದಿದ್ದಾರೆ. ಇದನ್ನು ಖಾಲಿ ಮಾಡೋಕೆ ಫ್ಯಾಮಿಲಿಯಿಂದ ಮಾತ್ರವೇ ಸಾಧ್ಯ. ಈ ಆರಡಿ ದೋಸೆ ಎಂದ ಮಾತ್ರಕ್ಕೆ ಬೆಲೆ ತುಂಬಾ ಜಾಸ್ತಿ ಇದ್ದಿರಬಹುದು ಎಂದು ನೀವಂದುಕೊಂಡರೆ ನಿಮ್ಮ ಊಹೆ ತಪ್ಪು.
ಈ ಫ್ಯಾಮಿಲಿ ದೋಸೆಯ ಬೆಲೆ 200 ರೂಪಾಯಿ! ನಾಲ್ಕೈದು ಮಂದಿಯ ಹೊಟ್ಟೆ ತುಂಬಿಸುವ ಈ ದೋಸೆಗೆ ಈ ದರವೇನು ಹೆಚ್ಚಲ್ಲ. ನಿಮ್ಮ ಆರ್ಡರ್ ನಿಮ್ಮ ಕೈಸೇರಲು ತುಂಬಾ ಸಮಯವೂ ವ್ಯಯವಾಗುವುದಿಲ್ಲ. ಆರ್ಡರ್ ಹೇಳಿದ ತಕ್ಷಣ ಕೆಲ ಸಮಯದಲ್ಲೇ ನಿಮ್ಮ ಕಣ್ಣೆದುರಿಗೆ ಫ್ಯಾಮಿಲಿ ದೋಸೆ ಪ್ರತ್ಯಕ್ಷವಾಗಿಬಿಡುತ್ತೆ. ಈ ಹಿಂದೆ ಶಿವಾಜಿನಗರ ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ಮಾಲೀಕರಿಗೆ ಈ ಉಪಾಯ ಹೊಳೆದಿತ್ತಂತೆ. ಆಮೇಲೆ ತಮ್ಮದೇ ಹೊಟೇಲು ಶುರುಮಾಡಿಕೊಂಡ ನಂತರವೇ ಈ ಐಡಿಯಾವನ್ನು ಅನುಷ್ಠಾನಕ್ಕೆ ತಂದಿದ್ದು.
ಅಲ್ಲಿಂದ ಅಸಂಖ್ಯ ದೋಸೆ ಪ್ರಿಯರು ಈ ಹೊಟೇಲಿಗೆ ಭೇಟಿ ನೀಡಿದ್ದಾರೆ. ಈಗಲೂ ಭೇಟಿ ನೀಡುತ್ತಲೇ ಇದ್ದಾರೆ. ದೋಸೆ ಬಿಟ್ಟರೆ ಈ ಹೋಟೆಲ್‌ನ ಪೊಂಗಲ್ ತುಂಬಾ ಫೇಮಸ್ ಅನ್ನೋದು ಮಾಲೀಕ ಕರುಪ್ಪಯ್ಯನವರ ಅಭಿಪ್ರಾಯ. ದೋಸಾ ಕ್ಯಾಂಪ್‌ಗೆ ಅಂಟಿಕೊಂಡಂತಿರುವ ಲಂಚ್ ಹೋಂ ಕೂಡಾ ಅವರದೇ. ಇವರಲ್ಲಿ ಪಲಾವ್, ಪೈನಾಪಲ್ ಕೇಸರಿಬಾತ್, ಶ್ಯಾವಿಗೆ ಬಾತ್ ಮುಂತಾದ ಖಾದ್ಯಗಳೂ ಸಿಗುತ್ತವೆ. ಎಲ್ಲದರ ರೇಟೂ ಹೆಚ್ಚೇನಿಲ್ಲ. 20- 30 ರೂ. ಆಸುಪಾಸಿನಲ್ಲಿವೆ.
ಒಬ್ಬನೇ ತಿಂದ ಭೂಪ!: ಐದಾರು ಮಂದಿ ತಿನ್ನಬಹುದಾದ ಈ ಫ್ಯಾಮಿಲಿ ದೋಸೆಯನ್ನು ಒಬ್ಬರೇ ತಿನ್ನೋದು ತುಂಬಾ ಕಷ್ಟ ಎಂದಿದ್ದೆವಲ್ಲ. ಹಾಗಿದ್ದರೂ ಇದನ್ನು ಸವಾಲಾಗಿ ಸ್ವೀಕರಿಸಿದ ಭೂಪನೊಬ್ಬ ಒಂದಿಡೀ ಫ್ಯಾಮಿಲಿ ದೋಸೆಯನ್ನು ಒಬ್ಬನೇ ಖಾಲಿ ಮಾಡಿದ್ದ ಎಂದು ಹೋಟೆಲಿನ ಸಿಬ್ಬಂದಿ ನೆನಪಿಸಿಕೊಂಡು ನಗುತ್ತಾರೆ.
ಎಲ್ಲಿ?: ಬಿ.ಟಿ. ಎಸ್ ಮುಖ್ಯರಸ್ತೆ, ಬಿ.ಎಂ.ಆರ್.ಡಬ್ಲ್ಯೂ ಕ್ವಾಟರ್ಸ್ ಎದುರುಗಡೆ, ವಿಲ್ಸನ್ ಗಾರ್ಡನ್
* ಹವನ