Advertisement

ಮೇರಿಹಿಲ್‌ ಸರಕಾರಿ ವರ್ಕ್‌ಶಾಪ್‌ಗೇ ಲಭಿಸಬೇಕಿದೆ ದುರಸ್ತಿ ಭಾಗ್ಯ!

11:37 PM Mar 02, 2020 | mahesh |

ಮಹಾನಗರ: ದ.ಕ., ಉಡುಪಿ ಮತ್ತು ಕೊಡಗು ಜಿಲ್ಲಾ ವ್ಯಾಪ್ತಿಯ ಬೃಹತ್‌ ನೀರಾವರಿ ಹಾಗೂ ಲೋಕೋಪಯೋಗಿ ಇಲಾಖೆಯ ಲಾರಿ, ಟಿಪ್ಪರ್‌, ರೋಡ್‌ ರೋಲರ್‌, ಜೀಪ್‌ ಮುಂತಾದ ವಾಹನಗಳನ್ನು ದುರಸ್ತಿ ಮಾಡಲೆಂದು ನಗರದ ಮೇರಿಹಿಲ್‌ನಲ್ಲಿ 17 ವರ್ಷಗಳ ಹಿಂದೆ ಆರಂಭವಾಗಿದ್ದ ವರ್ಕ್‌ಶಾಪ್‌ ಸದ್ಯ ಕೆಲಸ ನಿರ್ವಹಿಸದೆ ಬಾಗಿಲು ಹಾಕಿದೆ!

Advertisement

ಮೇರಿಹಿಲ್‌ ಹೆಲಿಪ್ಯಾಡ್‌ನ‌ ರಸ್ತೆ ಬದಿಯಲ್ಲಿ ರಾಜ್ಯ ಸರಕಾರದ ಕೇಂದ್ರ ಯಾಂತ್ರಿಕ ಸಂಸ್ಥೆ (ಸೆಂಟ್ರಲ್‌ ಮೆಕ್ಯಾನಿಕಲ್‌ ಆರ್ಗನೈಸೇಶನ್‌) 2003ರಲ್ಲಿ ಈ ವರ್ಕ್‌ ಶಾಪ್‌ ನಿರ್ಮಿಸಿತ್ತು. ವರ್ಕ್‌ಶಾಪ್‌ ನಿರ್ಮಿಸಿದ ಇಲಾಖೆ ಬಳಿಕ ಇಲ್ಲಿಗೆ ಮೆಕ್ಯಾನಿಕ್‌ ಸಹಿತ ಯಾವುದೇ ಸಿಬಂದಿ ನೇಮಕ ಮಾಡುವ ಗೋಜಿಗೆ ಹೋಗಿಲ್ಲ. ಹೀಗಾಗಿ ದುರಸ್ತಿಗೆ ಇಲಾಖೆಯ ವಾಹನ ಬಂದರೂ ರಿಪೇರಿ ಮಾಡಲು ಸಾಧ್ಯವಾಗಿಲ್ಲ. ಪರಿಣಾಮ ಒಂದೂವರೆ ದಶಕದಿಂದ ಈ ಗ್ಯಾರೇಜ್‌ನ ಗೇಟ್‌ ತೆರೆದಿಲ್ಲ.

ಉದ್ಘಾಟನೆ ಸಮಾರಂಭದ ಫೋಟೋಗಳು
ವರ್ಕ್‌ಶಾಪ್‌ನ ಒಳಗಡೆ ಈಗ ಬೋರ್ಡ್‌ ಮತ್ತು ಕಾವಲುಗಾರ ಮಾತ್ರ ಇದ್ದಾರೆ. ಕೋಣೆಯೊಳಗಿನ ಗೋಡೆಯಲ್ಲಿ ಉದ್ಘಾಟನೆ ಸಮಾರಂಭದ ಫೋಟೋಗಳಿವೆ. ಆರಂಭದ ದಿನಗಳಲ್ಲಿ ಲೋಕೋಪಯೋಗಿ ಇಲಾಖೆಯ ಕೆಲವು ವಾಹನಗಳನ್ನು ದುರಸ್ತಿ ಮಾಡಿದ ಆಗಿನ ಫೋಟೋಗಳಿವೆ. ಒಂದು ಕೋಣೆಯಲ್ಲಿ ಕಾವಲುಗಾರ ಕುಟುಂಬ ವಾಸ್ತವ್ಯ ಇದೆ. ಕೆಲವೊಮ್ಮೆ ಅಧಿಕಾರಿಗಳು ತಮ್ಮ ವಾಹನವನ್ನು ಪಾರ್ಕ್‌ ಮಾಡಿ ಹೋಗುತ್ತಾರೆ.

ದ.ಕ. ಜಿಲ್ಲೆಯಲ್ಲಿ ಬೃಹತ್‌ ನೀರಾವರಿ ಇಲಾಖೆ ಯಾವುದೇ ಯೋಜನೆಗಳಿಲ್ಲ. ಇನ್ನು ಲೋಕೋಪಯೋಗಿ ಇಲಾಖೆಯ ಹಳೆಯ ಕಾಲದ ವಾಹನಗಳನ್ನು ಗುತ್ತಿಗೆ ದಾರರು ಬಾಡಿಗೆಗೆ ಪಡೆಯುತ್ತಿಲ್ಲ. ಇಲಾಖೆಯಲ್ಲಿ ವಾಹನಗಳ ಸಂಖ್ಯೆಯೂ ಕಡಿಮೆಯಾಗಿದೆ. ಇರುವ ವಾಹನಗಳನ್ನು ಖಾಸಗಿ ಗ್ಯಾರೇಜ್‌ಗಳಲ್ಲಿ ದುರಸ್ತಿ ಮಾಡ ಲಾಗುತ್ತದೆ. ಹೀಗಾಗಿ ಸರಕಾರಿ ಗ್ಯಾರೇಜ್‌ ಈಗ ಕೆಲಸಕ್ಕೆ ಬಾರದಂತೆ ಬಾಗಿಲು ಹಾಕಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯ.

ಮುಂದಿನ ತಿಂಗಳಿನಿಂದ ಕಾರ್ಯಾರಂಭ
ಮೆಕ್ಯಾನಿಕ್‌ ನೇಮಕ ಆಗದೆ ಹಾಗೂ ಕೆಲವು ಕಾರಣದಿಂದ ಮೇರಿಹಿಲ್‌ನಲ್ಲಿರುವ ವರ್ಕ್‌ ಶಾಪ್‌ ಬಳಕೆಯಾಗಿರಲಿಲ್ಲ. ಸದ್ಯ ಮೆಕ್ಯಾನಿಕ್‌ ಹಾಗೂ ಇತರ ಯಂತ್ರೋಪಕರಣಗಳನ್ನು ಇಲ್ಲಿ ತರಿಸುವ ನಿಟ್ಟಿನಲ್ಲಿ ಪ್ರಕ್ರಿಯೆ ನಡೆಯುತ್ತಿದೆ. ಹೀಗಾಗಿ ಮುಂದಿನ ತಿಂಗಳಿನಿಂದ ವರ್ಕ್‌ಶಾಪ್‌ ಕಾರ್ಯಾರಂಭ ಆಗಲಿದೆ.
 - ರವಿಚಂದ್ರ, ಸಹಾಯಕ ಅಭಿಯಂತರರು, ಕೇಂದ್ರ ಯಾಂತ್ರಿಕ ಸಂಸ್ಥೆ-ಮಂಗಳೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next