Advertisement

ತಾಜ್‌ಮಹಲ್‌ನಲ್ಲಿ ಮರ್ಯಾದಾ ಹತ್ಯೆ!

12:20 AM Jul 05, 2019 | Team Udayavani |

ಕನ್ನಡ ಚಿತ್ರರಂಗದಲ್ಲಿ ಇಲ್ಲಿಯವರೆಗೆ ಬಂದ ಪ್ರೀತಿ, ಪ್ರೇಮ, ಪ್ರಣಯದ ಚಿತ್ರಗಳಿಗೆ ಲೆಕ್ಕವಿಲ್ಲ. ಪ್ರತಿವರ್ಷ ಬರುವ ಚಿತ್ರಗಳಲ್ಲಿ ಅರ್ಧಕ್ಕೂ ಹೆಚ್ಚು ಚಿತ್ರಗಳು ಇಂಥ ಸಬ್ಜೆಕ್ಟ್ಗಳಿಗೆ ಮೀಸಲು ಅನ್ನೋದರಲ್ಲೂ ಎರಡು ಮಾತಿಲ್ಲ. ಅದರಲ್ಲೂ ಸ್ಯಾಂಡಲ್ವುಡ್‌ನ‌ಲ್ಲಿ ಇಂಥ ಯಾವುದಾದರೂ ಒಂದು ಚಿತ್ರ ಹಿಟ್ ಆದ್ರೆ ಸಾಕು ಅದೇ ಶೀರ್ಷಿಕೆಯ ಮುಂದೆ ಅಥವಾ ಹಿಂದೆ ಒಂದು ಅಕ್ಷರವನ್ನೊ, ಪದವನ್ನೋ ಸೇರಿಸಿ ತಮ್ಮ ಚಿತ್ರಕ್ಕೆ ಶೀರ್ಷಿಕೆ ಮಾಡಿಕೊಳ್ಳುವುದು ಹೊಸದೇನಲ್ಲ. ಈಗ ಯಾಕೆ ಈ ಬಗ್ಗೆ ಮಾತು ಅಂತೀರಾ? ಅದಕ್ಕೊಂದು ಕಾರಣವಿದೆ. 2008ರಲ್ಲಿ ಆರ್‌.ಚಂದ್ರು ನಿರ್ದೇಶನದಲ್ಲಿ ತೆರೆಗೆ ಬಂದ ‘ತಾಜ್‌ಮಹಲ್’ ಚಿತ್ರ ನಿಮಗೆ ನೆನಪಿರಬಹುದು. ಅಜೇಯ್‌ ರಾವ್‌, ಪೂಜಾ ಗಾಂಧಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದ ಲವ್‌ ಕಂ ರೊಮ್ಯಾಂಟಿಕ್‌ ಚಿತ್ರ ‘ತಾಜ್‌ಮಹಲ್’ ಹಿಟ್ ಲೀಸ್ಟ್‌ ಕೂಡ ಸೇರಿತ್ತು. ಈಗ ಅದೇ ‘ತಾಜ್‌ಮಹಲ್’ ಹೆಸರಿನ ಮುಂದುವರೆದ ಭಾಗ ಎಂಬಂತೆ ‘ತಾಜ್‌ಮಹಲ್-2’ ಎನ್ನುವ ಚಿತ್ರ ಕೂಡ ತೆರೆಗೆ ಬರುತ್ತಿದೆ. ಅಂದಹಾಗೆ, ‘ತಾಜ್‌ಮಹಲ್-2’ ಚಿತ್ರತಂಡದ ಪ್ರಕಾರ, ಈ ಚಿತ್ರಕ್ಕೂ ದಶಕದ ಹಿಂದೆ ಬಂದ ‘ತಾಜ್‌ಮಹಲ್’ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲವಂತೆ.

Advertisement

ಚಿತ್ರದ ಕಥೆಗೆ ಹೊಂದಾಣಿಕೆಯಾ­ಗುತ್ತದೆ ಎನ್ನುವ ಕಾರಣಕ್ಕೆ ಚಿತ್ರದ ಟೈಟಲ್ ಅನ್ನು ‘ತಾಜ್‌ಮಹಲ್-2’ ಅಂಥ ಇಟ್ಟುಕೊಂಡಿದ್ದೇವೆ ಅನ್ನೋದು ಚಿತ್ರತಂಡದ ಮಾತು. ಅಂದಹಾಗೆ, ಇತ್ತೀಚೆಗೆ ‘ತಾಜ್‌ಮಹಲ್-2’ ಚಿತ್ರ ಮುಹೂರ್ತವನ್ನು ಆಚರಿಸಿಕೊಂಡು, ಚಿತ್ರೀಕರಣಕ್ಕೆ ಚಾಲನೆ ನೀಡಿದೆ. ಇನ್ನು ‘ತಾಜ್‌ಮಹಲ್-2’ ಚಿತ್ರದ ಕಥೆ ಬಗ್ಗೆ ಮಾತನಾಡುವ ಚಿತ್ರತಂಡ, ‘ಕೆಲ ವರ್ಷಗಳ ಹಿಂದೆ ತಮಿಳುನಾಡಿನ ಪೊಲ್ಲಾಚಿಯಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿ ಈ ಚಿತ್ರವನ್ನು ಮಾಡಲಾಗುತ್ತಿದೆ. ಶ್ರೀಮಂತ ಹುಡುಗಿ ಮತ್ತು ಬಡ ಹುಡುಗನ ನಡುವಿನ ಪ್ರೀತಿ ಚಿತ್ರದಲ್ಲಿದೆ. ಕಬ್ಬಿನ ಹಾಲು ಮಾರುವ ಬಡ ಹುಡುಗನ ಮೇಲೆ ಶ್ರೀಮಂತ ಮನೆತನದ ಹುಡುಗಿಗೆ ಪ್ರೀತಿ ಮೂಡುತ್ತದೆ. ಮುಂದೆ ವಿಷಯ ತಿಳಿದ ಆಕೆಯ ಮನೆಯವರು ಹುಡುಗನ ಎರಡು ಕಾಲುಗಳ ಮೇಲೆ ವಾಹನದ ಚಕ್ರ ಹರಿಸಿ ಅವನನ್ನು ಅಂಗವಿಕಲನನ್ನಾಗಿ ಮಾಡುತ್ತಾರೆ. ಆದರೂ ಪ್ರೀತಿ ಬಿಡದ ಆತ ಹೇಗೆ ಸೇಡು ತೀರಿಸಿಕೊಳ್ಳುತ್ತಾನೆ ಎಂಬುದು ಚಿತ್ರದ ಕಥೆಯ ಒಂದು ಏಳೆ. ಮರ್ಯಾದ ಹತ್ಯೆಯ ಸುತ್ತ ಚಿತ್ರದ ಕಥೆ ನಡೆಯುತ್ತದೆ’ ಎಂದು ಚಿತ್ರದ ಬಗ್ಗೆ ಒಂದಷ್ಟು ಮಾಹಿತಿಯನ್ನು ಬಿಚ್ಚಿಟ್ಟಿತು.

ಇನ್ನು ಈಗಾಗಲೇ ಮೂರು ಚಿತ್ರಗಳನ್ನು ನಿರ್ದೇಶಿಸಿರುವ ದೇವರಾಜ ಕುಮಾರ್‌ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಜೊತೆಗೆ ತಾನೇ ನಾಯಕನಾಗಿಯೂ ಅಭಿನಯಿಸುತ್ತಿದ್ದಾರೆ. ಮುಂಬೈ ಮೂಲದ ಸಮೃದ್ಧ ಶುಕ್ಲಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ತಬಲ ನಾಣಿ, ಬಲರಾಜವಾಡಿ, ಶೋಭರಾಜ್‌, ಜಿಮ್‌ ರವಿ, ಹೊನ್ನವಳ್ಳಿ ಕೃಷ್ಣ, ವಿಕ್ಟರಿ ವಾಸು ಇತರೆ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಎಲ್ಲಾ ಅಂದುಕೊಂಡಂತೆ ನಡೆದರೆ, ಇದೇ ವರ್ಷದ ಡಿಸೆಂಬರ್‌ 20ಕ್ಕೆ ‘ತಾಜ್‌ಮಹಲ್-2’ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಆಲೋಚನೆ ಚಿತ್ರತಂಡದ್ದು. ಒಟ್ಟಾರೆ ಕನ್ನಡದಲ್ಲಿ ಈಗಾಗಲೇ ಬಂದ ಹತ್ತು ಹಲವು ಪ್ರೀತಿ-ಪ್ರೇಮ, ಮರ್ಯಾದ ಹತ್ಯೆಯ ಕಥಾಹಂದರ ಹೊಂದಿರುವ ಚಿತ್ರಗಳ ‘ತಾಜ್‌ಮಹಲ್-2’ ಎಷ್ಟು ಭಿನ್ನವಾಗಿರಲಿದೆ, ಪ್ರೇಕ್ಷಕ ಪ್ರಭುಗಳಿಗೆ ಇಷ್ಟವಾಗಲಿದೆ ಅನ್ನೋದು ತೆರೆಗೆ ಬಂದ ಮೇಲಷ್ಟೇ ಗೊತ್ತಾಗಬೇಕು.

Advertisement

Udayavani is now on Telegram. Click here to join our channel and stay updated with the latest news.

Next