ಬೆಂಗಳೂರು: ಮಹಿಳಾ ಸುರಕ್ಷತೆಗಾಗಿ ನೈಋತ್ಯ ರೈಲ್ವೇ ಬೆಂಗಳೂರು ವಿಭಾಗದಲ್ಲಿ ಪ್ರಾರಂಭಿಸಲಾದ ಮೇರಿ ಸಹೇಲಿ ಆರ್‌ಪಿಎಫ್ ಅಧಿಕಾರಿಗಳ ತಂಡವು ಮಹಿಳಾ ಪ್ರಯಾಣಿಕರಿಗೆ ರಕ್ಷಾ ಕವಚವಾಗುವುದರ ಜತೆಗೆ ಇತರೆ ಕಾನೂನು ಬಾಹಿರ ಚಟುವಟಿಕೆಯನ್ನು ಸಹ ತಡೆಯುವಲ್ಲಿ ಯಶಸ್ವಿಯಾಗಿದೆ. ರೈಲಿನಲ್ಲಿ ಪ್ರಯಾಣ ಬೆಳೆಸುವ ಮಹಿಳೆಯರ ಸುರಕ್ಷತೆಗೆ “ಆರ್‌ಪಿಎಫ್’ ಮಹಿಳಾ ಅಧಿಕಾರಿಗಳನ್ನು ಒಳಗೊಂಡ ತಂಡ ನಿಯೋಜಿಸಿದೆ.
ಇದು ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ 3 ವರ್ಷಗಳಿಂದ ಕಾರ್ಯಾಚರಿಸುತ್ತಿದೆ. ಇದುವರೆಗೆ 7,492 ವಿವಿಧ ಪ್ರಕರಣಗಳಲ್ಲಿ ಕೇವಲ ಮಹಿಳಾ ಸುರಕ್ಷತೆಗೆ ಮಾತ್ರವಲ್ಲದೇ ಅಪಹರಣ, ಬಾಲಕಾರ್ಮಿಕರು, ಮಕ್ಕಳ ಕಳ್ಳಸಾಗಣೆ ತಡೆಯುವಲ್ಲಿ ಸಫಲವಾಗಿದೆ. ಮೇರಿ ಸಹೇಲಿ ತಂಡ ರೈಲುಗಳು ನಿಲ್ದಾಣ ಬಿಡುವುದಕ್ಕೂ ಮುಂಚೆ ಆರ್‌ಪಿಎಫ್ ಮಹಿಳಾ ಸಿಬ್ಬಂದಿ ರೈಲಿನಲ್ಲಿ ಪ್ರವೇಶಿಸಿ ಅಲ್ಲಿ ಕುಳಿತ ಮಹಿಳಾ ಪ್ರಯಾಣಿಕರ ಜತೆ ಸಂವಾದ ನಡೆಸುತ್ತಾರೆ. ಈ ವೇಳೆ ಸೀಟಿನ ಸಂಖ್ಯೆ, ಮೊಬೈಲ್ ನಂಬರ್ ಪಡೆಯುತ್ತಾರೆ. ಸುರಕ್ಷತೆ ದೃಷ್ಟಿಯಿಂದ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಮಾಹಿತಿ ಹಾಗೂ ತುರ್ತು ಸಂದರ್ಭದಲ್ಲಿ ಭದ್ರತಾ ಸಹಾಯವಾಣಿ ಸಂಖ್ಯೆ 182 ಸಂಪರ್ಕಿಸುವಂತೆ ಸಲಹೆ ನೀಡುತ್ತಾರೆ.
ಬಳಿಕ ಪ್ರಯಾಣದುದ್ದಕ್ಕೂ ಆರ್‌ಪಿಎಫ್ ಸಿಬ್ಬಂದಿ ಅವರೊಂದಿಗೆ ಸಂಪರ್ಕದಲ್ಲಿ ಇರುತ್ತಾರೆ. ಜತೆಗೆ ಪ್ರಯಾಣದ ನಡುವೆ ಬರುವ ನಿಲ್ದಾಣಗಳಲ್ಲಿನ ಆರ್‌ಪಿಎಫ್ ಸಿಬ್ಬಂದಿ ಕೂಡ ಸಂಬಂಧಪಟ್ಟ ಬೋಗಿಗಳ ಮೇಲೆ ನಿಗಾ ಇಡುತ್ತಾರೆ. 23 ಸಾವಿರ ರೈಲಿಗೆ ಭೇಟಿ: ಮಹಿಳಾ ಆರ್‌ಪಿಎಫ್ ತಂಡ ಅಧಿಕಾರಿಗಳು ಎಸ್‌ಬಿಸಿ (ಮೆಜೆಸ್ಟಿಕ್), ವೈಪಿಆರ್ (ಯಶವಂತಪುರ) ಬಿವೈಪಿಎಲ್ (ಬೈಯ್ಯಪ್ಪನಹಳ್ಳಿ)ನಲ್ಲಿ ಇದುವರೆಗೆ ಒಟ್ಟು 23 ಸಾವಿರ ರೈಲುಗಳಿಗೆ ಭೇಟಿ ನೀಡಿ, 8.62 ಲಕ್ಷ ಮಹಿಳಾ ಪ್ರಯಾಣಿಕರ ಜತೆಗೆ ಮಾತುಕತೆ ನಡೆಸಿ ಸಮಸ್ಯೆಗಳಿದ್ದರೆ ಸ್ಥಳದಲ್ಲಿ ಪರಿಹರಿಸಿದ್ದಾರೆ. ವಿಶೇಷವೆಂದರೆ ತುಂಬು ಗರ್ಭಿಣಿಗೆ ನೋವು ಕಾಣಿಸಿಕೊಂಡ ವೇಳೆ ಆರ್ ಪಿಎಫ್ ತಂಡವು ಅಗತ್ಯವಿರುವ ನೆರವು ಒದಗಿಸಿ, ಸುಖಕರ ಹೆರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಇದರ ಹೊರತಾಗಿಯೂ ಅನುಮಾನಾಸ್ಪದವಾಗಿ ರೈಲುಗಳಲ್ಲಿ ಪ್ರಯಾಣಿಸುತ್ತಿದ್ದ 33 ಮಕ್ಕಳನ್ನು ರಕ್ಷಿಸಿದ್ದಾರೆ. ಅದರಲ್ಲಿ 26 ಗಂಡು ಹಾಗೂ 7 ಹೆಣ್ಣು ಮಕ್ಕಳ ಇದ್ದಾರೆ. ಇವರ ಆಧಾರ ಕಾರ್ಡ್ ಮಾಹಿತಿ ಪರಿಶೀಲನೆಗೊಳಿಸಿ ಮನೆಗೆ ಸೇರಿಸುವ ಮಹತ್ವದ ಕೆಲಸವನ್ನು ಮಾಡಿದ್ದಾರೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಯಾಣ ಭಯ: ಸಾಮಾನ್ಯವಾಗಿ ಹೆಣ್ಣುಮಕ್ಕಳು ಹಾಗೂ ಒಂಟಿ ಮಹಿಳೆಯರು ರೈಲಿನಲ್ಲಿ ದೂರ ಪ್ರಯಾಣ ಮಾಡಲು ಹಿಂದೇಟು ಹಾಕುತ್ತಾರೆ. ಇದಕ್ಕೆ ಮುಖ್ಯ ಕಾರಣ ಪ್ರಯಾಣಿಸುವ ವೇಳೆಯಲ್ಲಿ ಆಗುವ ಕಹಿ ಘಟನೆಗಳು ಕಾರಣ. ಧರಿಸಿದ ಚಿನ್ನಾಭರಣ, ಪರ್ಸ್, ಮೊಬೈಲ್ ಕಳ್ಳತನ ಸೇರಿದಂತೆ ಅಸಭ್ಯ ವರ್ತನೆ, ಸಹ ಪ್ರಯಾಣಿಕರ ಅತಿರೇಕದ ವರ್ತನೆಗೆ ಹೆದರಿ ರೈಲು ಪ್ರಯಾಣದಿಂದ ದೂರ ಉಳಿಯುತ್ತಾರೆ.
ಮೇರಿ ಸಹೇಲಿ ಆರ್‌ಪಿಎಫ್ ಅಧಿಕಾರಿಗಳ ತಂಡ ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ಕಾರ್ಯಾಚರಿಸುತ್ತಿದೆ. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಹಿಳಾ ಪ್ರಯಾಣಿಕರ ಸುರಕ್ಷತೆ ಸೇರಿದಂತೆ ಮಾನವ ಕಳ್ಳ ಸಾಗಣೆ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆ ತಡೆಯುವಲ್ಲಿ ಯಶಸ್ವಿಯಾಗಿದೆ.
– ಕುಸುಮಾ ಹರಿಪ್ರಸಾದ್, ಹೆಚ್ಚುವರಿ ವ್ಯವಸ್ಥಾಪಕಿ, ನೈಋತ್ಯ ರೈಲ್ವೇ ಬೆಂಗಳೂರು ವಿಭಾಗ