Advertisement
ಈ ಸುದ್ದಿ ಹೊರ ಬೀಳುತ್ತಿದ್ದಂತೆ ದೊಡ್ಡ ಸಂಚಲನ ಉಂಟು ಮಾಡಿತು. ಅಟ್ಟಪ್ಪಟ್ಟು ಕೋಣೆಯಲ್ಲಿ ಎಷ್ಟು ಹಣ ಹೇಗೆ ಬಂತು? ಯಾಕೆ ಬಂತು? ಅಟ್ಟಪಟ್ಟು ಫಿಕ್ಸಿಂಗ್ ಮಾಡಿದರೆ? ಲಂಕಾ ಕ್ಯಾಪ್ಟನ್ ಫಿಕ್ಸರ್ ಆದರಾ? ಇದು ದೇಶದ್ರೋಹ..! ಒಂದೇ ಎರಡೇ.. ಅದುವರೆಗೆ ದೇಶದ ಜನರ ಕಣ್ಣಲ್ಲಿ ಹೀರೋ ಆಗಿದ್ದ ಅದ್ಭುತ ಬ್ಯಾಟರ್ ಮರ್ವನ್ ಅಟ್ಟಪಟ್ಟು ಅಂದು ಒಂದೇ ಕ್ಷಣದಲ್ಲಿ ವಿಲನ್ ಆಗಿ ಬಿಟ್ಟಿದ್ದರು.
Related Articles
Advertisement
ಅಂದು ಲಂಕಾ ಕೇವಲ 82 ರನ್ ಗೆ ಆಲೌಟಾಗಿತ್ತು. ಮರ್ವನ್ ಸೇರಿ ಐವರು ಅಂದು ಡಕ್ ಔಟಾಗಿದ್ದರು. ಭಾರತ ಫಾಲೋ ಆನ್ ನೀಡಿತು. ಎರಡನೇ ಇನ್ನಿಂಗ್ ನಲ್ಲೂ ಪರಿಸ್ಥಿತಿ ಸುಧಾರಣೆ ಆಗಲಿಲ್ಲ. ತಂಡದ ಮೊತ್ತ 110 ರನ್ ಆಗಿದ್ದ ವೇಳೆ ಕ್ರೀಸ್ ಗೆ ಬಂದ ಮರ್ವನ್ ಗೆ ಕಪಿಲ್ ದೇವ್ ಎಸೆದ ಚೆಂಡು ಬಂದು ಕಾಲಿಗೆ ಬಡಿದಿದ್ದು ತಿಳಿಯಲೇ ಇಲ್ಲ. ಮರ್ವನ್ ಮತ್ತೆ ಜೀರೋ.
ಮೊದಲ ಪಂದ್ಯದ ಎರಡೂ ಇನ್ನಿಂಗ್ಸ್ ಗಳಲ್ಲಿ ಶೂನ್ಯ ಸಂಪಾದನೆ ಮಾಡಿದರೆ ಮುಂದೆ ಅವಕಾಶ ಸಿಗುವುದು ಕಡಿಮೆ. ಮರ್ವನ್ ಗೂ ಹಾಗೆಯೇ ಆಯಿತು. ಮುಂದಿನ ಸರಣಿಗೆ ಆಯ್ಕೆಯಾಗಲಿಲ್ಲ. ನೆಟ್ ನಲ್ಲಿ ಬೆವರು ಹರಿಸಿದರು. ಮತ್ತಷ್ಟು ಪ್ರಥಮ ದರ್ಜೆ ಕ್ರಿಕೆಟ್ ಆಡಿದರು. ಆಯ್ಕೆಗಾರರ ಗಮನ ಸೆಳೆದರು. ಹೀಗೆ ಕಳೆದಿದ್ದು 21 ತಿಂಗಳು. ಮತ್ತೆ ಲಂಕಾ ತಂಡ ಕರೆಯಿತು.
ಮೊದಲ ಪಂದ್ಯದ ಸೋಲನ್ನು ಮರ್ವನ್ ಇನ್ನೂ ಮರೆತಿರಲಿಲ್ಲ. ಸಿಕ್ಕ ಮತ್ತೊಂದು ಅವಕಾಶವನ್ನು ಬಳಸಲೇ ಬೇಕು ಎಂದು ಬ್ಯಾಟ್ ಹಿಡಿದು ಬಂದರು. ಆದರೆ ಅದೃಷ್ಟವು ತನ್ನ ಸ್ಕ್ರಿಪ್ಟ್ ಬದಲು ಮಾಡಿರಲಿಲ್ಲ. ಮತ್ತೆ ಶೂನ್ಯಕ್ಕೆ ಔಟ್. ಆದರೆ ಎರಡನೇ ಇನ್ನಿಂಗ್ಸ್ ನಲ್ಲಿ ಮೊದಲ ರನ್ ಓಡಿದ ಮರ್ವನ್ ನಿರಾಳತೆಯ ಉಸಿರೊಂದನ್ನು ಹೊರಹಾಕಿದರು. ಆದರೆ ಅಷ್ಟೇ ಔಟ್. ಹೌದು 21 ತಿಂಗಳ ಅಂತರದಲ್ಲಿ ಆಡಿದ ನಾಲ್ಕು ಇನ್ನಿಂಗ್ಸ್ ಗಳಲ್ಲಿ ಮರ್ವನ್ ಸಾಧನೆ ಒಂಟಿ ರನ್.
ಮತ್ತೆ ತಂಡದಿಂದ ಕೈಬಿಡಲಾಯಿತು. ಮತ್ತೆ ನೆಟ್ಸ್ ನಲ್ಲಿ ಬೆವರು ಹರಿಸಿದ. ದೇಶಿಯ ಕೂಟಗಳಲ್ಲಿ ಭರ್ಜರಿ ಆಡಿದ. ಮತ್ತೊಂದು ಕರೆಗಾಗಿ ಕಾದ. ಹದಿನೇಳು ತಿಂಗಳ ಕಾಯುವಿಕೆಗೆ ಬೆಲೆ ಸಿಕ್ಕಿತು, ಮತ್ತೆ ಟೆಸ್ಟ್ ತಂಡಕ್ಕೆ ಕರೆಸಲಾಯಿತು. ಈ ಬಾರಿ ಆಡಲೇ ಬೇಕು ಎಂದು ಬ್ಯಾಟ್ ಹಿಡಿದು ಮೈದಾನಕ್ಕೆ ಆಗಮಿಸಿದ ಮರ್ವನ್ ಅಟ್ಟಪಟ್ಟು ಮೇಲೆ ಪೂರ್ತಿ ಲಂಕಾ ಕಣ್ಣಿಟ್ಟಿತ್ತು. ಮತ್ತೆ ಭರವಸೆಯಿಂದ ಅವಕಾಶ ನೀಡಿದ ಆಯ್ಕೆ ಸಮಿತಿಯೂ ಕಾಯುತ್ತಿತ್ತು. ಎಲ್ಲರ ಹಾರೈಕೆ ಒಂದೇ ಮರ್ವನ್ ಚೆನ್ನಾಗಿ ಆಡಲಿ. ಆದರೆ ಅದೃಷ್ಟದಾಟ ಬೇರೆಯೇ ಇತ್ತು. ಆ ಪಂದ್ಯದಲ್ಲಿ ಎರಡು ಇನ್ನಿಂಗ್ಸ್ ಗಳಲ್ಲಿ ಮರ್ವನ್ ಗಳಿಸಿದ್ದು 0 ಮತ್ತು 0.
ಇಂತವ್ರಿಗೆ ಯಾಕ್ರಿ ಅವಕಾಶ ಕೊಡ್ತೀರಾ ಅಂದ್ರು ಜನ. ಈ ಹುಡುಗನಿಗೆ ದೊಡ್ಡ ಪಂದ್ಯಕ್ಕೆ ಬೇಕಾದ ಸಂಯಮ, ಮನಸ್ಥಿತಿ ಇಲ್ಲ ಎಂದರು. ಸಾಕು ಅವಕಾಶ ಎಂದರು. ಸಾಕು ನೀನು ಕ್ರಿಕೆಟ್ ಆಡಿದ್ದು ಎಂದರು ಸ್ನೇಹಿತರು. ಪ್ರಾಯ ಇದ್ದಾಗಲೇ ಬೇರೆ ಕೆಲಸ ಮಾಡು ಎಂದರು. ಆದರೆ ಮರ್ವನ್ ಹಠ ಬಿಡಲಿಲ್ಲ. ಮತ್ತೆ ಆಡಿದ. ಮತ್ತೆ ಬೆವರು ಹರಿಸಿದ, ತನ್ನ ಟೆಕ್ನಿಕ್ ಸರಿ ಮಾಡಿಕೊಂಡ. ಮೂರು ವರ್ಷದ ಬಳಿಕ ಮತ್ತೆ ಚಾನ್ಸ್ ಸಿಕ್ಕಿತು. ಈ ಬಾರಿ ಆಡಿದ ಚೆನ್ನಾಗಿಯೇ ಆಡಿದ.
1990ರಲ್ಲಿ ಟೆಸ್ಟ್ ಪದಾರ್ಪಣೆ ಮಾಡಿದ ಮರ್ವನ್ 1997ರಲ್ಲಿ ಮೊದಲ ಶತಕ ಗಳಿಸಿದ. ಅಲ್ಲಿಂದ ಮತ್ತೆ ಹಿಂತಿರುಗಿ ನೋಡಲಿಲ್ಲ. ಎಲ್ಲಿಯವರೆಗೆ ಎಂದರೆ ಮುಂದೆ ಮರ್ವನ್ ಗಳಿಸಿದ್ದು ಬರೋಬ್ಬರಿ ಆರು ದ್ವಿಶತಕಗಳು ಮತ್ತು 16 ಶತಕಗಳು. 90 ಟೆಸ್ಟ್ ಪಂದ್ಯ, 268 ಏಕದಿನ ಪಂದ್ಯಗಳನ್ನಾಡಿದ. ಟೆಸ್ಟ್ ನಲ್ಲಿ ಐದು ಸಾವಿರಕ್ಕೂ ಹೆಚ್ಚು ರನ್ ಗಳಿಸಿದ. ಟೆಸ್ಟ್ ಮಾನ್ಯತೆ ಪಡೆದ ಎಲ್ಲಾ ದೇಶಗಳ ವಿರುದ್ದ ಶತಕ ಬಾರಿಸಿದ. ಲಂಕಾ ತಂಡ ನಾಯಕನಾದ. 18 ವರ್ಷ ಲಂಕಾ ಪರ ಆಡಿದ.
ಹಠ, ತನ್ನ ಕೆಲಸದ ಮೇಲಿನ ಶೃದ್ಧೆ, ಅದೃಷ್ಟಕ್ಕಿಂತ ಕಠಿಣ ಪರಿಶ್ರಮವನ್ನು ನೆಚ್ಚಿಕೊಂಡರೆ ತಡವಾಗಿಯಾದರೂ ಸರಿಯೇ ಫಲಿತಾಂಶ ಖಂಡಿತ ಸಿಗುತ್ತದೆ ಎನ್ನುವುದಕ್ಕೆ ಮರ್ವನ್ ಅಟ್ಟಪಟ್ಟು ಜೀವನವೇ ಸಾಕ್ಷಿ.
- ಕೀರ್ತನ್ ಶೆಟ್ಟಿ ಬೋಳ