ಗುಡಿಬಂಡೆ: ಮಹನೀಯರ ಜಯಂತಿಗಳು ಆಚರಣೆಗೆ ಸೀಮಿತವಾಗಬಾರದು. ಆಚರಣೆಗಳ ಮೂಲಕ ನಮ್ಮ ತಪ್ಪುಗಳನ್ನು ತಿದ್ದಿಕೊಂಡು ಸರಿದಾರಿಯತ್ತ ನಡೆಯಲು ಪ್ರೇರೇಪಣೆ ಆಗಬೇಕು ಎಂದು ತಾಲೂಕು ವಾಲ್ಮೀಕಿ ಸಂಘಧ ಅಧ್ಯಕ್ಷ ಎನ್.ವಿ. ಗಂಗಾಧರ್ ತಿಳಿಸಿದರು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣ ದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹರ್ಷಿ ವಾಲ್ಮೀಕಿಯವರು ಜಗತ್ತಿನ ಮಾನವನ ಮನಸ್ಸಿನ ಚಿತ್ರಣವನ್ನು ರಾಮಾಯಣದಲ್ಲಿ ಚಿತ್ರಿಸಿದ್ದಾರೆ. ಆ ಮೂಲಕ ಅಸಂಖ್ಯಾತ ಸಾಹಿತಿಗಳಿಗೆ ಪ್ರೇರಕ ಶಕ್ತಿಯಾಗಿದ್ದಾರೆ. ಹೀಗಾಗಿ ಜಾತಿ ಧರ್ಮ ದೇಶವ್ಯಾಪ್ತಿ ಮೀರಿದ ಮಹಾನು ಪುರುಷರಲ್ಲಿ ವಾಲ್ಮೀಕಿ ಮಹರ್ಷಿಗಳು ಒಬ್ಬರಾಗಿದ್ದಾರೆ ಎಂದರು.
ಪ್ರತಿಭಟನೆ ಎಚ್ಚರಿಕೆ: ಸಂವಿಧಾನ ಬದ್ಧವಾಗಿ ವಾಲ್ಮೀಕಿ ಜನಾಂಗಕ್ಕೆ ನೀಡಬೇಕಾದ ಮೀಸಲಾತಿ ಜಾರಿಗೊಳಿಸಲು ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಶೇ.7.5 ರಷ್ಟು ಮೀಸಲಾತಿಗಾಗಿ ಈಗಾಗಲೇ ಬೃಹತ್ ಮಟ್ಟದ ಪ್ರತಿಭಟನೆ ಸಹ ನಡೆದಿದೆ. ವಾಲ್ಮೀಕಿ ಪೀಠದ ಗುರುಗಳು ನೀಡಿದ ಗಡುವಿನೊಳಗೆ ಮೀಸಲಾತಿ ಜಾರಿ ಮಾಡದಿದ್ದಲ್ಲಿ ಉಗ್ರ ಹೋರಾಟ ಕೈಗೊಳ್ಳ ಬೇಕಾಗುತ್ತದೆ ಎಂದರು. ಮುಖ್ಯ ಭಾಷಣಕಾರರಾಗಿ ಮಾತನಾಡಿದ ಶಿಕ್ಷಕ ಪಿ.ಎಸ್.ರಾಜಶೇಖರ್, ವಾಲ್ಮೀಕಿ ಅವರ ತತ್ವ ಸಿದ್ಧಾಂತ ಎಂದೆಂದಿಗೂ ಪ್ರಸ್ತುತ ಎಂದರು.
ತಹಶೀಲ್ದಾರ್ ಸಿಗ್ಬತ್ತುಲ್ಲಾ ಮಾತನಾಡಿ, ಕೋವಿಡ್ ಹಿನ್ನೆಲೆಯಲ್ಲಿ ಜಯಂತಿಯನ್ನು ಸರಳವಾಗಿ ಆಚರಿಸಲಾಗುತ್ತಿದೆ. ಈಗಾಗಲೇ ವಾಲ್ಮೀಕಿ ಮುಖಂಡರ ಮನವಿಯಂತೆ ಅನೇಕ ಗ್ರಾಮಗಳಲ್ಲಿ ವಸತಿ, ಸ್ಮಶಾನಕ್ಕಾಗಿ ಸ್ಥಳ ಗುರುತಿಸುವಿಕೆ ಸೇರಿದಂತೆ ಪಿಂಚಣಿ ಸಹ ನೀಡಲಾಗುತ್ತಿದೆ ಎಂದರು.
ತಾಪಂ ಇ.ಒ ರವೀಂದ್ರ, ಆರಕ್ಷಕ ವೃತ್ತ ನಿರೀಕ್ಷಕ ಮಂಜುನಾಥ್, ಬಿಇಒ ವೆಂಕಟೇಶಪ್ಪ, ತಾಲೂಕುಆರೋಗ್ಯಾಧಿಕಾರಿ ಡಾ.ನರಸಿಂಹಮೂರ್ತಿ, ಪ.ಪಂ. ಮುಖ್ಯಾಧಿಕಾರಿ ರಾಜಶೇಖರ್, ಸಮಾಜ ಕಲ್ಯಾಣಾಧಿಕಾರಿ ಜಗದೀಶ್, ದಾಸಪ್ಪ, ಬಿಸಿಎಂ ರಾಮಯ್ಯ, ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಸ.ನ.ನಾಗೇಂದ್ರ, ಮುಖಂಡರಾದ ನಾಗರಾಜ್, ಮುದ್ದಪ್ಪ, ಜಿ.ಎನ್.ನರಸಿಂಹಯ್ಯ, ನರೇಂದ್ರ, ರಾಮಾಂಜಿ, ರಮೇಶ್, ಬಿ. ಮಂಜುನಾಥ್, ಆನಂದಪ್ಪ, ಆಂಜಿನಪ್ಪ, ಬಾಲಾಜಿ, ತಿಲಕ್, ಶಿಕ್ಷಕರಾದ ಗೋವಿಂದಪ್ಪ, ರಾಮಾಂಜಿನೇಯ್ಯ, ಶಂಕರ್, ಶ್ರೀರಾಮಪ್ಪ, ಮುನಿಕೃಷ್ಣ ಇದ್ದರು.