Advertisement

ಪಿಡಿಒಗಳಿಗೆ ವಿವಾಹ ನೋಂದಣಿ ಅಧಿಕಾರ : ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚೆ

01:31 AM Jun 21, 2021 | Team Udayavani |

ಬೆಂಗಳೂರು : ಇನ್ನು ಮುಂದೆ ವಿವಾಹ ನೋಂದಣಿ, ಸಾಮಾಜಿಕ ಭದ್ರತೆಯ ಪಿಂಚಣಿ ಯೋಜನೆಗಳ ಫಲಾನುಭವಿಗಳ ಆಯ್ಕೆ ಹಾಗೂ ಜನನ ಮತ್ತು ಮರಣ ದೃಢೀಕರಣ ಪತ್ರ ವಿತರಣೆ ಗ್ರಾ.ಪಂ. ಮಟ್ಟದಲ್ಲೇ ನಡೆಯಲಿದೆ.

Advertisement

ಈ ಸಂಬಂಧ ಪ್ರಸ್ತಾವನೆ ಗ್ರಾಮೀ ಣಾಭಿವೃದ್ಧಿ ಮತ್ತು ಪಂ.ರಾಜ್‌ ಇಲಾಖೆ ಮಟ್ಟದಲ್ಲಿ ಸಿದ್ಧಗೊಳ್ಳುತ್ತಿದ್ದು, ಶೀಘ್ರವೇ ಜಾರಿಗೊಳ್ಳುವ ನಿರೀಕ್ಷೆ ಇದೆ.

ಇತ್ತೀಚೆಗೆ ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ವಿಚಾರದ ಬಗ್ಗೆ ಚರ್ಚೆ ನಡೆದಿದ್ದು, ಹಲವು ಇಲಾಖೆಗಳು ಇದರ ವ್ಯಾಪ್ತಿಗೆ ಬರುವುದರಿಂದ ಸಂಬಂಧಪಟ್ಟ ಇಲಾಖೆಗಳ ಸಮ್ಮತಿ ಪಡೆಯಬೇಕು ಎನ್ನಲಾಗಿದೆ.

ಪ್ರಸ್ತುತ ವಿವಾಹ ನೋಂದಣಿ ಪ್ರಕ್ರಿಯೆ ತಾಲೂಕು ಮಟ್ಟದಲ್ಲಿ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನಡೆಯುತ್ತಿದೆ. ನೋಂದಣಿ ಮಾಡಿಸಿಕೊಳ್ಳದವರೂ ಇದ್ದಾರೆ. ಗ್ರಾ.ಪಂ. ಮಟ್ಟದಲ್ಲೇ ನೋಂದಣಿಗೆ ಅವಕಾಶ ಇದ್ದರೆ ಅನುಕೂಲ. ಹೀಗಾಗಿ ಪಿಡಿಒಗಳನ್ನು ನೋಂದಣಿ ಪ್ರಾಧಿಕಾರಿಗಳನ್ನಾಗಿ ಘೋಷಿಸಲು ಪ್ರಸ್ತಾವಿಸಲಾಗಿದೆ.

ಗ್ರಾ.ಪಂ.ಗಳಲ್ಲಿ ಪಿಂಚಣಿಗೆ ಆಯ್ಕೆ
ಪ್ರಸ್ತುತ ಸಾಮಾಜಿಕ ಭದ್ರತೆಯ ಪಿಂಚಣಿ ಯೋಜನೆಗಳನ್ನು ಕಂದಾಯ ಇಲಾಖೆಯ ಮೂಲಕ ಒದಗಿಸಲಾಗುತ್ತಿದೆ. ಆದರೆ ಪಿಂಚಣಿ ಯೋಜನೆಗಳಿಗೆ ಗ್ರಾ.ಪಂ. ಗ್ರಾಮ ಸಭೆಗಳಲ್ಲಿ ಹೆಚ್ಚು ಬೇಡಿಕೆ ಬರುತ್ತಿದೆ.

Advertisement

ಅರ್ಹ ಫಲಾನುಭವಿಗಳು ಗ್ರಾ.ಪಂ.ಗೆ ಅರ್ಜಿ ಸಲ್ಲಿಸಿ, ಅವುಗಳನ್ನು ಯೋಜನೆಗಳ ಮಾನದಂಡಗಳ ಅನುಸಾರ ಪರಿಶೀಲಿಸಿ ಆನ್‌ಲೈನ್‌ ಮೂಲಕ ತಹಶೀಲ್ದಾರರಿಗೆ ಶಿಫಾರಸು ಮಾಡಲು ಅವಕಾಶ ಕೊಡಬೇಕು. ತಹಶೀಲ್ದಾರ್‌ ಅನುಮೋದನೆ ಬಳಿಕ ಗ್ರಾ.ಪಂ.ಗಳ ಮೂಲಕ ಮಂಜೂರಾತಿ ನೀಡಬಹುದು. ಆಯ್ಕೆಯಾದ ಫಲಾನುಭವಿಗಳ ವಿವರಗಳನ್ನು ಗ್ರಾಮ ಸಭೆಗಳಲ್ಲಿ ಮಂಡಿಸಬಹುದು. ಹಾಗಾಗಿ ಪಿಂಚಣಿ ಯೋಜನೆಗಳ ಫಲಾನುಭವಿಗಳ ಆಯ್ಕೆಗೆ ಗ್ರಾ.ಪಂ.ಗಳನ್ನು ಹೆಚ್ಚುವರಿ ಕೇಂದ್ರವನ್ನಾಗಿಸಲು ಪ್ರಸ್ತಾವಿಸಲಾಗಿದೆ.

ಜನನ, ಮರಣ ಪ್ರಮಾಣಪತ್ರ
ಪ್ರಸ್ತುತ ಜನನ, ಮರಣ ಮತ್ತು ವಾಸದ ದೃಢೀಕರಣ ಪತ್ರಗಳನ್ನು ಕಂದಾಯ ಇಲಾಖೆ ಮೂಲಕ ನೀಡಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಜನರು ಹಲವಾರು ಸೌಕರ್ಯಗಳನ್ನು ಪಡೆಯಲು ಈ ದೃಢೀಕರಣ ಪತ್ರಗಳು ಅಗತ್ಯ. ಈಗಾಗಲೇ ನಗರ ಪ್ರದೇಶಗಳಲ್ಲಿ ಈ ದೃಢೀಕರಣ ಪತ್ರಗಳನ್ನು ನಗರ ಸ್ಥಳೀಯ ಸಂಸ್ಥೆಗಳ ಮೂಲಕ ನೀಡಲಾಗುತ್ತಿದೆ. ಇದೇ ಮಾದರಿಯಲ್ಲಿ ಹೆಚ್ಚುವರಿಯಾಗಿ ಗ್ರಾ.ಪಂ.ಗಳಿಂದಲೂ ದೃಢೀಕರಣ ಪತ್ರಗಳನ್ನು ನೀಡುವ ಪದ್ಧತಿ ಜಾರಿಗೊಳಿಸುವ ಪ್ರಸ್ತಾವನೆಯೂ ಇಲಾಖೆಯ ಮುಂದಿದೆ.

ಸಾಮಾಜಿಕ ಭದ್ರತೆಯ ಪಿಂಚಣಿ ಯೋಜನೆಗಳ ಫಲಾನುಭವಿಗಳ ಆಯ್ಕೆಗೆ ಗ್ರಾ.ಪಂ.ಗಳನ್ನು ಹೆಚ್ಚುವರಿ ಕೇಂದ್ರವನ್ನಾಗಿ ಮಾಡುವ, ಪಿಡಿಒಗಳಿಗೆ ವಿವಾಹ ನೋಂದಣಿ ಅಧಿಕಾರ ನೀಡುವುದರ ಸಹಿತ ವಿವಿಧ ಪ್ರಸ್ತಾವನೆ ಪ್ರಕ್ರಿಯೆಯಲ್ಲಿದೆ.
– ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ , ಪಂ.ರಾಜ್‌ ಆಯುಕ್ತರು

–  ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next