ಖೈಬರ್ ಪ್ರಾಂತ್ಯ: 72 ವರ್ಷ ಪ್ರಾಯದ ವೃದ್ದನ ಜೊತೆಗೆ 12 ವರ್ಷದ ಬಾಲಕಿಯ ವಿವಾಹ ಸಮಾರಂಭವನ್ನು ಪೊಲೀಸರು ಮಧ್ಯಪ್ರವೇಶಿಸಿ ತಡೆದ ಘಟನೆ ಪಾಕಿಸ್ತಾನದ ಚಾರ್ಸದ್ದಾ ಪಟ್ಟಣದಲ್ಲಿ ನಡೆದಿದೆ. ಪೊಲೀಸರು ಮದುಮಗನನ್ನು ಬಂಧಿಸಿದ್ದಾರೆ.
ಪೊಲೀಸರ ವರದಿಯ ಪ್ರಕಾರ, ಬಾಲಕಿಯ ತಂದೆ ಅಲಾಂ ಸೈಯದ್ ತನ್ನ ಮಗಳನ್ನು 5 ಲಕ್ಷ ಪಾಕಿಸ್ತಾನಿ ರೂಪಾಯಿಗಳಿಗೆ ಮಾರಾಟ ಮಾಡಲು ಒಪ್ಪಿದ್ದಾನೆ. 72 ವರ್ಷ ಪ್ರಾಯದ ಮದುಮಗನನ್ನು ಹಬೀಬ್ ಖಾನ್ ಎಂದು ಗುರುತಿಸಲಾಗಿದೆ. ನಿಖಾಹ್ ನಡೆಯುವ ಮೊದಲೇ ಮಧ್ಯಪ್ರವೇಶಿಸಿದ ಪೊಲೀಸರು ಮದುವೆ ನಡೆಯದಂತೆ ತಡೆದಿದ್ದಾರೆ.
ಪೊಲೀಸರು ಹಬೀಬ್ ಖಾನ್ ಮತ್ತು ಮೌಲಿಯನ್ನು ಬಂಧಿಸಿದ್ದಾರೆ. ಬಾಲಕಿಯ ತಂದೆಯು ಪೊಲೀಸರನ್ನು ಕಂಡೊಡನೆ ಪರಾರಿಯಾಗಿದ್ದಾನೆ. ಈ ಮೂವರ ಮೇಲೆಯೂ ಪೊಲೀಸರು ಬಾಲ್ಯ ವಿವಾಹ ತಡೆ ಕಾಯ್ದೆಯಡಿ ಕೇಸು ದಾಖಲಿಸಿಕೊಂಡಿದ್ದಾರೆ.
ಬಾಲ್ಯ ವಿವಾಹ ತಡೆ ಕಾಯ್ದೆ ಜಾರಿಯಿದ್ದರೂ ಪಾಕಿಸ್ತಾನದಲ್ಲಿ ಬಾಲ್ಯವಿವಾಹಗಳು ಸಾಮಾನ್ಯವಾಗಿದೆ.
ಇತ್ತೀಚೆಗೆ, ಕಾನೂನು ಜಾರಿ ಸಂಸ್ಥೆಗಳು ರಾಜನ್‌ಪುರ ಮತ್ತು ಥಟ್ಟಾದಲ್ಲಿ ಇದೇ ರೀತಿಯ ಪ್ರಯತ್ನಗಳನ್ನು ವಿಫಲಗೊಳಿಸಿದವು, ಅಲ್ಲಿ ಚಿಕ್ಕ ಹುಡುಗಿಯರು ವಯಸ್ಸಾದ ಪುರುಷರನ್ನು ಮದುವೆಯಾಗಲು ಒತ್ತಾಯಿಸಲಾಗಿತ್ತು. ಒಂದು ಪ್ರಕರಣದಲ್ಲಿ, ಪಂಜಾಬ್ ಪ್ರಾಂತ್ಯದ ರಾಜನ್‌ಪುರದಲ್ಲಿ 11 ವರ್ಷದ ಬಾಲಕಿ 40 ವರ್ಷದ ವ್ಯಕ್ತಿಯನ್ನು ಮದುವೆಯಾಗಲು ನಿರ್ಧರಿಸಿದ್ದಳು ಎಂದು ಆರಿ ನ್ಯೂಸ್ ವರದಿ ಮಾಡಿದೆ.