Advertisement

Arrested: ವಿವಾಹ ಆಮಿಷವೊಡ್ಡಿ ಲೈಂಗಿಕ ದೌರ್ಜನ್ಯ

11:13 AM Oct 10, 2024 | Team Udayavani |

ಬೆಂಗಳೂರು: ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ಯುವತಿಗೆ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಸಂಪರ್ಕ ನಡೆಸಿ ವಂಚಿಸಿದ ಕೇರಳ ಮೂಲದ ಖಾಸಗಿ ಶಿಪ್‌ನ ಸಿಬ್ಬಂದಿಯನ್ನು ಗೋವಿಂದ ಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಕೇರಳ ಮೂಲದ ಬಿಲಾಲ್‌ ರಫೀಕ್‌ (30) ಬಂಧಿತ. ಆರೋಪಿ ಛತ್ತಿಸ್‌ಗಡ ಮೂಲದ 30 ವರ್ಷದ ಯುವತಿಗೆ ಮದುವೆಯಾಗುವುದಾಗಿ ವಂಚಿಸಿ, ಜಾತಿ ನಿಂದನೆ ಮಾಡಿದ್ದಾನೆ. ಈ ಸಂಬಂಧ ಸಂತ್ರಸ್ತೆ ಬಿಲಾಲ್‌ ರಫೀಕ್‌ ಹಾಗೂ ಆತನ ತಂದೆ ಮೊಹಮ್ಮದ್‌ ರಫೀಕ್‌, ತಾಯಿ ಮುತ್ತಬಿ ರಫೀಕ್‌, ಸಹೋದರಿ ಅತೀನಾ ವಿರುದ್ಧ ದೂರು ನೀಡಿದ್ದರು.

ಕೆಲ ವರ್ಷಗಳ ಹಿಂದೆಯೇ ಬೆಂಗಳೂರಿಗೆ ಬಂದಿರುವ ಸಂತ್ರಸ್ತೆ, ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದು, ದಾಸರಹಳ್ಳಿಯ ಭುವನೇಶ್ವರ ನಗರದಲ್ಲಿ ವಾಸವಾಗಿದ್ದಾರೆ. ಈ ಮಧ್ಯೆ 2021ರಲ್ಲಿ ಇನ್‌ಸ್ಟಾಗ್ರಾಂನಲ್ಲಿ ಕೇರಳ ಮೂಲದ ಖಾಸಗಿ ಶಿಪ್‌ನ ಸಿಬ್ಬಂದಿ ಬಿಲಾಲ್‌ ರಫೀಕ್‌ ಪರಿಚಯವಾಗಿದ್ದಾನೆ. 2022ರ ಮೇನಲ್ಲಿ ಆರೋಪಿ ಬೆಂಗಳೂರಿಗೆ ಬಂದು, ಸಹಕಾರ ನಗರದ ಓಯೋ ರೂಮ್‌ಗೆ ಕರೆದೊಯ್ದು, ಮದುವೆಯಾಗುತ್ತೇನೆ ಎಂದು ನಂಬಿಸಿ, ಒತ್ತಾಯ ಪೂರ್ವಕವಾಗಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಕೆಲ ತಿಂಗಳ ಬಳಿಕ ತಾನೂ ಗರ್ಭಿಣಿಯಾದಾಗ, ಈಗಲೇ ಮಕ್ಕಳು ಬೇಡ ಎಂದು ಮಾತ್ರೆಗಳನ್ನು ನೀಡಿ ಗರ್ಭಪಾತ ಮಾಡಿಸಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಆ ನಂತರ 2023ರಲ್ಲಿ ಮತ್ತೂಮ್ಮೆ ಬೆಂಗಳೂರಿನ ಹಲವು ಕಡೆ ಕರೆದೊಯ್ದು ಲೈಂಗಿಕ ಸಂಪರ್ಕ ಬೆಳೆಸಿ, 2ನೇ ಬಾರಿ ಗರ್ಭಪಾತ ಮಾಡಿಸಿದ್ದ. ನಂತರ 2024ರ ಫೆಬ್ರವರಿಯಿಂದ ಏಪ್ರಿಲ್‌ವರೆಗೂ ವೀರಣ್ಯಪಾಳ್ಯದ ಪಿಜಿಯೊಂದರಲ್ಲಿ ಇಬ್ಬರು ವಾಸವಾಗಿದ್ದು, ಇಲ್ಲಿಯೂ ತನ್ನೊಂದಿಗೆ ಲೈಂಗಿಕ ಸಂಪರ್ಕ ಮಾಡಿದ್ದಾನೆ. ಕೆಲ ತಿಂಗಳ ಬಳಿಕ 3 ಬಾರಿ ಗರ್ಭಪಾತ ಮಾಡಿಸಿದ್ದ ಆರೋಪಿ, ಸಂತ್ರಸ್ತೆಯ ಸ್ವಂತ ಊರಾದ ಛತ್ತಿಸ್‌ಗಡಕ್ಕೆ ಹೋಗಿ, ಆಕೆಯ ಕುಟುಂಬ ಸದಸ್ಯರಿಗೆ ಮದುವೆಗೆ ಒಪ್ಪಿಸಿದ್ದ. ಈತನ ಕುಟುಂಬ ಸದಸ್ಯರು ಕೂಡ ಮದುವೆಗೆ ಒಪ್ಪಿದ್ದರು. ಅಲ್ಲದೆ, ಆರೋಪಿಗೆ ಸಂತ್ರಸ್ತೆ, ಲಕ್ಷಾಂತರ ರೂ. ನಗದು, ಮೊಬೈಲ್‌ ಹಾಗೂ ಇತರೆ ವಸ್ತುಗಳನ್ನು ಉಡುಗೊರೆಯಾಗಿ ನೀಡಿದ್ದರು.

ಈ ಮಧ್ಯೆ ಸೆಪ್ಟೆಂಬರ್‌ನಲ್ಲಿ ಆರೋಪಿಯ ತಂದೆ ಮೊಹಮ್ಮದ್‌ ರಫೀಕ್‌, ತಾಯಿ ಮತ್ತು ಸಹೋದರಿ, ಸಂತ್ರಸ್ತೆಗೆ ಕರೆ ಮಾಡಿ, ನೀನು ಕೆಳ ಜಾತಿಗೆ ಸೇರಿದವಳು, ಮದುವೆಯಾಗುವುದಿಲ್ಲ ಎಂದು ನಿಂದಿಸಿದ್ದಾರೆ. ಆತನ ಪೋಷಕರ ವಿರುದ್ಧ ಕ್ರಮ ಕೈಗೊಳ್ಳಲು ಸಂತ್ರಸ್ತೆ ದೂರು ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next