ಅಂದು ಮಾತಾಡಲೇಬೇಕು ಅಂತ ಸಿಟ್ಟಿನಿಂದ ಬಂದಿದ್ದರು ಹಿರಿಯ ನಿರ್ದೇಶಕ ಎಸ್. ಉಮೇಶ್. ಅವರು ಮೈಕ್ ಎತ್ತಿಕೊಳ್ಳಬೇಕು ಎನ್ನುವಷ್ಟರಲ್ಲಿ ನಾಯಕಿ ಸೋನಾಲ್ ಪತ್ರಿಕಾಗೋಷ್ಠಿಗೆ ಬಂದುಬಿಟ್ಟರು. ಅವರ ಮುಖ ನೋಡಿ ನಿರ್ದೇಶಕರ ಅರ್ಧ ಸಿಟ್ಟು ಕಡಿಮೆಯಾಯಿತು. ಇನ್ನರ್ಧ ಸಿಟ್ಟನ್ನು ಮಾತಿನ ಮೂಲಕ ಹೊರಹಾಕಬೇಕು ಎಂದು ಅವರ ಪ್ರಯತ್ನ ಮಾಡಿದರಾದರೂ, ಯಾಕೋ ಅದು ಪತ್ರಕರ್ತರ ಮಧ್ಯಪ್ರವೇಶದಿಂದ ಅದು ಸಾಧ್ಯವಾಗಲಿಲ್ಲ.
ಇಷ್ಟಕ್ಕೂ ಉಮೇಶ್‌ಗ್ಯಾಕೆ ಸಿಟ್ಟು ಎಂದರೆ, ಅದಕ್ಕೆ ಕಾರಣವೂ ಇದೆ. ಉಮೇಶ್ ಅವರ ಹೊಸ ಚಿತ್ರ “ಮದುವೆ ದಿಬ್ಬಣ’ ಇಂದು ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿ ನಟಿಸಿರುವ ಶಿವರಾಜ್ ಕೆ.ಆರ್.ಪೇಟೆ, ನಾಯಕ ಅಭಿಷೇಕ್, ನಾಯಕಿ ಸೋನಾಲ್ ಪ್ರಚಾರಕ್ಕೆ ಬರಲಿಲ್ಲವಂತೆ. ಇದರಿಂದ ಉಮೇಶ್ ಅವರಿಗೆ ಸಿಕ್ಕಾಪಟ್ಟೆ ಕೋಪ ಬಂದಿದೆ. ಆ ಸಿಟ್ಟನ್ನು ಹೊರಹಾಕಬೇಕು ಎಂದು ಅವರು ಕಾದಿದ್ದರು. ಅಷ್ಟರಲ್ಲಿ ಸೋನಾಲ್ ಬಂದರು.
“ಇದು ಶಿವರಾಜ್ ಅವರ ಮೊದಲ ಚಿತ್ರ. ಒಳ್ಳೆಯ ಸಂಭಾವನೆ ಕೊಟ್ಟಿದ್ದೇವೆ. ಆದರೂ ಅವರು ಪ್ರಚಾರಕ್ಕೆ ಬಂದಿಲ್ಲ. ಕೇಳಿದರೆ, ಯಾರೋ ತೀರೊRಂಡ್ರು ಅಂತ ಹೇಳಿದರು. ಹೀರೋನೂ ಬಂದಿಲ್ಲ. ಜ್ವರ ಬಂದಿದೆ ಅಂತಿದ್ದಾರೆ. ಚಿತ್ರದ ಬಗ್ಗೆ ಮಾತಾಡೋದು ಅವರ ಕರ್ತವ್ಯವಲ್ಲವಾ?’ ಎಂದು ಪ್ರಶ್ನಿಸಿದರು ಉಮೇಶ್. ಅವರು ಇದೇ ವಿಷಯದ ಬಗ್ಗೆ ಇನ್ನಷ್ಟು ಮಾತಾಡುತ್ತಿದ್ದರೇನೋ? ಅಷ್ಟರಲ್ಲಿ ಚಿತ್ರದ ಬಗ್ಗೆ ಮಾತಾಡಿ ಎಂದಿದ್ದಕ್ಕೆ ಸುಮ್ಮನಾದರು. ನಿರ್ಮಾಪಕ ಬ.ನ. ರವಿ ಅವರಿಗೆ ಮೈಕು ಕೊಟ್ಟರು.
ನಿರ್ಮಾಪಕರು, ಸೋನಾಲ್ ಬಳಿ ಕ್ಷಮೆ ಕೆಳುತ್ತಲೇ ಮಾತು ಶುರು ಮಾಡಿದರು. ಕೊಟ್ಟಿಗೆಪಾಳ್ಯದಲ್ಲಿ ಅವರದ್ದೊಂದು ಸ್ಟುಡಿಯೋ ಇದೆಯಂತೆ. ಅಲ್ಲಿ ಉಮೇಶ್ ತಮ್ಮ ಯಾವುದೋ ಚಿತ್ರದ ಕೆಲಸ ಮಾಡಿಸುತ್ತಿದ್ದರಂತೆ. “ನನಗೂ ಆಸೆ ಇತ್ತು. ಅಷ್ಟರಲ್ಲಿ ದೊಡ್ಡೋರೂ ಸಿಕ್ಕರು. ಹಾಗಾಗಿ ಸಿನಿಮಾ ಮಾಡಿದೆ. ನಂದು ಒಂದು ಲೇಔಟ್ ಸಹ ಇದೆ. ಈ ಚಿತ್ರ ಗೆದ್ದರೆ ನಿರ್ದೇಶಕರಿಗೆ ಅರ್ಧ ಸೈಟು ಅಥವಾ ಕಾರು ಕೊಡಬೇಕು ಅಂತಿದ್ದೇನೆ. ಅವರು ಯಾವುದನ್ನು ಕೇಳ್ತಾರೋ ಅದನ್ನು ಕೊಡುತ್ತೀನಿ. ನಮ್ಮ ಸಂಬಂಧ ಇದೇ ತರಹ ಇರಬೇಕು’ ಎಂದರು ರವಿ.
“ಮದುವೆ ದಿಬ್ಬಣ’ ಚಿತ್ರದಲ್ಲಿ ಹಿರಿಯ ನಟ ರವಿಕಿರಣ್ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. “ಇದುವರೆಗೂ ಮಾಡದಿರುವ ಒಂದು ಪಾತ್ರ ಮಾಡಿದ್ದೀನಿ. ಜವಾಬ್ದಾರಿ ಜೊತೆಗೆ ಸ್ವಲ್ಪ ಜಾಸ್ತಿ ಸೆಂಟಿಮೆಂಟಲ್ ಮಾತ್ರ ನನ್ನದು. ಇದೊಂದು ಹಳ್ಳಿ ಸೊಗಡಿನ ಚಿತ್ರ. ಮಳವಳ್ಳಿ ಹತ್ತಿರ ಚಿತ್ರೀಕರಣ ಆಯ್ತು. ಬಹಳ ಎಂಜಾಯ್ ಮಾಡಿ ಚಿತ್ರೀಕರಣ ಮಾಡಿದ್ದೀವಿ. ನಿರ್ದೇಶಕರು ಬಹಳ ಸುಲಭವಾಗಿ ಹೇಳಿಕೊಟ್ಟರು. ಒಂಥರಾ ಫ್ಯಾಮಿಲಿ ವಾತಾವರಣ ಇತ್ತು’ ಎಂದು ಹೇಳಿಕೊಂಡರು.
ನಾಯಕಿ ಸೋನಾಲ್ ಇದೇ ಮೊದಲ ಬಾರಿಗೆ ಹಳ್ಳಿ ಹುಡುಗಿಯ ಪಾತ್ರ ಮಾಡಿದ್ದಾರೆ. “ಸ್ವಲ್ಪ ಕಷ್ಟ ಆಯ್ತು. ಆದರೂ ಎಲ್ಲರ ಸಹಕಾರದಿಂದ ಮಾಡಿದೆ’ ಎಂದು ಅವರು ಹೇಳಿಕೊಂಡರು. ಚಿತ್ರದಲ್ಲಿ ಐಟಂ ಡ್ಯಾನ್ಸ್ ಮಾಡಿರುವ ಆಲಿಷಾ, ಸಂಗೀತ ನೀಡಿರುವ ಎ.ಟಿ. ರವೀಶ್, ನೃತ್ಯ ಸಂಯೋಜಿಸಿರುವ ನಾಗ ಮಾಸ್ಟರ್ ಮುಂತಾದವರು ಚಿತ್ರದ ಬಗ್ಗೆ ಮಾತನಾಡಿದರು.