Advertisement

ಮದುವೆ, ಹುಟ್ಟುಹಬ್ಬ, ಖಾಸಗಿ ಕಾರ್ಯಕ್ರಮಕ್ಕೆ ಅನುಮತಿ ಬೇಕಿಲ್ಲ

07:00 AM Apr 11, 2018 | |

ಬೆಂಗಳೂರು: ಮದುವೆ, ಹುಟ್ಟುಹಬ್ಬದಂತಹ ಖಾಸಗಿ ಕಾರ್ಯಕ್ರಮಗಳ ಆಯೋಜನೆಗೆ ಅನುಮತಿ ಕೋರಿ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ನೀತಿ ಸಂಹಿತೆ ಜಾರಿ ದಳದ ಅಧಿಕಾರಿಗಳನ್ನು ಸಾರ್ವಜನಿಕರು ಸಂಪರ್ಕಿಸುತ್ತಿದ್ದಾರೆ. ವಾಸ್ತವಿಕವಾಗಿ ಈ ರೀತಿಯ ಖಾಸಗಿ ಕಾರ್ಯಕ್ರಮಗಳನ್ನು ಆಯೋಜಿಸಲು ಆಯೋಗದ ಅನುಮತಿ ಅಗತ್ಯವಿಲ್ಲ.

Advertisement

ಯಾವುದೇ ರಾಜಕೀಯ ಮುಖಂಡರು ಭಾಗವಹಿಸದಿರುವ ಖಾಸಗಿ ಕಾರ್ಯಕ್ರಮಗಳ ಆಯೋಜನೆಗೂ ಅನುಮತಿ ಬೇಕಿಲ್ಲ. ಆದರೆ ಸಾರ್ವಜನಿಕರು ಆಯೋಜಿಸುವ ಖಾಸಗಿ ಕಾರ್ಯಕ್ರಮಗಳ ನೆಪದಲ್ಲಿ ಔತಣ, ಭೋಜನ ಕೂಟ ಆಯೋಜಿಸುವ ಸಾಧ್ಯತೆ ಇರುವುದರಿಂದ ಅಧಿಕಾರಿಗಳು ಈ ಕಾರ್ಯಕ್ರಮಗಳ ಮೇಲೆ ನಿಗಾವಹಿಸಿರುತ್ತಾರೆ. ಸಾರ್ವಜನಿಕರ ಖಾಸಗಿ ಕಾರ್ಯಕ್ರಮ
ದಲ್ಲಿ ರಾಜಕೀಯ ವ್ಯಕ್ತಿಗಳು ಉಡುಗೊರೆ ಹಂಚುವುದು, ಭೋಜನ ವ್ಯವಸ್ಥೆ ಸೇರಿ ಮತದಾರರ ಓಲೈಕೆಗೆ ಯಾವುದೇ ರೀತಿಯ ಆಮಿಷ ಒಡ್ಡುತ್ತಿದ್ದರೆ ಅಂತವರ ವಿರುದ್ಧ ಆಯೋಗ ಕ್ರಮ ಜರುಗಿಸಲಿದೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಹೇಳಿದ್ದಾರೆ.

50 ಸಾವಿರವರೆಗೆ ಹಣ ಸಾಗಿಸಬಹುದು: ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಸಾರ್ವಜನಿಕರು ದಾಖಲೆಯಿಲ್ಲದೆ ಎಷ್ಟು ಮೊತ್ತದ ಹಣ ಕೊಂಡೊಯ್ಯಬಹುದು ಎಂಬ ಬಗ್ಗೆಯೂ ಸ್ಪಷ್ಟನೆ ನೀಡಿರುವ ಆಯೋಗವು, ಸಾರ್ವಜನಿಕರು ಪ್ರಯಾಣದ ವೇಳೆ ತಮ್ಮೊಂದಿಗೆ 50,000 ರೂ.ವರೆಗಿನ ಮೊತ್ತವನ್ನು ಇಟ್ಟುಕೊಳ್ಳಲು ಯಾವುದೇ ದಾಖಲೆ ಸಲ್ಲಿಸಬೇಕಾದ ಅಗತ್ಯವಿಲ್ಲ. ಹಾಗೆಯೇ 10,000 ರೂ. ಇಲ್ಲವೇ ಅದಕ್ಕಿಂತ ಹೆಚ್ಚು ಮೊತ್ತದ ಉಡುಗೊರೆಯನ್ನು ಸಾರ್ವಜನಿಕರು ತಮ್ಮೊಂದಿಗೆ ಪ್ರಯಾಣದ ವೇಳೆ ತೆಗೆದುಕೊಂಡು ಹೋಗಲು ದಾಖಲೆ ಬೇಕಾಗಿಲ್ಲ. ಆದರೆ ರಸೀದಿ ಇರಬೇಕು. ಸಾರ್ವಜನಿಕರು 50,000 ರೂ.ಗಿಂತ ಹೆಚ್ಚು ಮೊತ್ತದ ಹಣವನ್ನು ಪ್ರಯಾಣದ ವೇಳೆ ತಮ್ಮೊಂದಿಗೆ ಇಟ್ಟುಕೊಂಡಿದ್ದರೆ ಅದಕ್ಕೆ ಸೂಕ್ತ ದಾಖಲೆ ಹೊಂದಿರಬೇಕು. ಇಲ್ಲದಿದ್ದರೆ ಜಪ್ತಿ ಮಾಡಲಾಗುತ್ತದೆ. 10 ಲಕ್ಷ ರೂ.ಗಿಂತ ಹೆಚ್ಚು ಹಣ ಸಾಗಿಸುತ್ತಿದ್ದರೆ ಆ ಪ್ರಕರಣವನ್ನು ಆದಾಯ ತೆರಿಗೆ ಇಲಾಖೆಗೆ ವಹಿಸಲಾಗುತ್ತದೆ. ಅವರು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಿದ್ದಾರೆ. 10 ಲಕ್ಷ ರೂ.ಗಿಂತ ಕಡಿಮೆ ಮೊತ್ತದ ಹಣ ಕಂಡುಬಂದರೆ ಈ ಬಗ್ಗೆ ಜಿಲ್ಲಾ ಪಂಚಾಯ್ತಿ ಸಿಇಒ ಅಧ್ಯಕ್ಷತೆಯ ಸಮಿತಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಿದೆ. 8- 10 ಮಂದಿ ಒಟ್ಟಿಗೆ ಊಟ ಮಾಡುವು‌ಕ್ಕೆ ಯಾವುದೇ ನಿರ್ಬಂಧವಿಲ್ಲ.

ಮತದಾನ ಪ್ರೇರಣೆಗೆ ಸಿಎನ್‌ಆರ್‌ ರಾವ್‌ ಸಂದೇಶ
ಬೆಂಗಳೂರು:
ರಾಜ್ಯದ ಎಲ್ಲ ಮತದಾರರು ಮತದಾನ ಮಾಡುವಂತೆ ಪ್ರೇರಣೆ ನೀಡಲು ಹಾಗೂ ಜಾಗೃತಿ ಮೂಡಿಸಲು ಖ್ಯಾತ ವಿಜ್ಞಾನಿ ಭಾರತ ರತ್ನ ಸಿ.ಎನ್‌.ಆರ್‌.ರಾವ್‌ ಅವರ ಸಂದೇಶವುಳ್ಳ ವಿಡಿಯೋ ತುಣುಕನ್ನು ಚುನಾವಣಾ ಆಯೋಗ ಬಿಡುಗಡೆಗೊಳಿಸಿದೆ. ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಅವರು ಮಂಗಳವಾರ ವಿಡಿಯೋ ಹಾಗೂ ಜಾಗೃತಿ ಭಿತ್ತಿಪತ್ರ ಬಿಡುಗಡೆಗೊಳಿಸಿದರು. ದೇವಾಲಯಗಳ ಮೇಲಿನ ಬಾವುಟ ತೆರವುಗೊಳಿಸಲಾಗುತ್ತಿದೆ ಎಂಬುದಾಗಿ ಬಿಜೆಪಿ ನೀಡಿರುವ ದೂರಿನ ಬಗ್ಗೆ ಪ್ರತಿಕ್ರಿಯಿಸಿ, ಉಡುಪಿಯ ಯಾವುದೇ ದೇವಾಲಯಗಳ ಮೇಲಿನ ಬಾವುಟಗಳನ್ನು ತೆರವುಗೊಳಿಸಿಲ್ಲ. ಈ ಬಗ್ಗೆ ಉಡುಪಿ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆಯಲಾಗಿದೆ ಎಂದರು.

ಮೈಸೂರಿನಲ್ಲಿ ಕೊಲೆಯಾದ ರಾಜು ಕುಟುಂಬಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಐದು ಲಕ್ಷ ರೂ. ನೆರವು ನೀಡಿದ್ದಾರೆ ಎಂಬ ದೂರಿನ ಕುರಿತು ಜಿಲ್ಲಾಧಿಕಾರಿಗಳು, ಪೊಲೀಸ್‌ ಆಯುಕ್ತರು ತನಿಖೆ ನಡೆಸಿದ್ದು, ಸಮಾಧಾನ ತಂದಿಲ್ಲ. ಬಳಿಕ, ಮೈಸೂರು ಪ್ರಾದೇಶಿಕ ಆಯುಕ್ತರಿಂದ ತನಿಖೆ ನಡೆಸಲಾಯಿತು. ಈ ಹಿಂದೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಮಹಿಳೆ ನಂತರ ಬದಲಿ ಹೇಳಿಕೆ ನೀಡಿದ್ದಾರೆ ಎಂಬುದಾಗಿ ವರದಿಯಲ್ಲಿದೆ ಎಂದರು. ಪೊಲೀಸ್‌ ವಾಹನದಲ್ಲಿ ಹಣ ಸಾಗಿಸಲಾಗುತ್ತಿದೆ ಎಂಬ ದೇವೇಗೌಡರ ದೂರಿನ
ಬಗ್ಗೆ ತನಿಖೆ ನಡೆಸುವಂತೆ ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ಸೂಚಿಸಲಾಗಿತ್ತು. ತನಿಖೆಯಲ್ಲಿ ಆ ರೀತಿ ನಡೆದಿರುವುದು ಕಂಡುಬಂದಿಲ್ಲ ಎಂದು ವರದಿ ನೀಡಿದ್ದಾರೆ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next