Advertisement

ಮದುವೆ ವಯಸ್ಸು ಏರಿಕೆ ಸ್ಥಾಯೀ ಸಮಿತಿ ಅಂಗಳಕ್ಕೆ

01:13 AM Dec 22, 2021 | Team Udayavani |

ಹೊಸದಿಲ್ಲಿ: ದೇಶದಲ್ಲಿ ಮಹಿಳೆಯರು ಮತ್ತು ಪುರುಷರ ವಿವಾಹದ ವಯಸ್ಸಿನಲ್ಲಿ ಏಕರೂಪತೆ ತರುವ ಉದ್ದೇಶವಿರುವ ಹೆಣ್ಣುಮಕ್ಕಳ ಮದುವೆ ವಯಸ್ಸಿನ ಮಿತಿಯನ್ನು ಈಗಿರುವ 18ರಿಂದ 21ಕ್ಕೇರಿಸುವ ಮಸೂದೆಯನ್ನು ಮಂಗಳವಾರ ಲೋಕಸಭೆಯಲ್ಲಿ ಮಂಡಿಸಲಾಗಿದೆ. ಸರಕಾರದ ಈ ನಿರ್ಧಾರವು “ದೇಶದ ಇತಿಹಾಸದಲ್ಲೇ ನಿರ್ಣಾಯಕ ಹೆಜ್ಜೆ’ ಎಂದು ಕೇಂದ್ರ ಸಚಿವೆ ಸ್ಮತಿ ಇರಾನಿ ಬಣ್ಣಿಸಿದ್ದಾರೆ.

Advertisement

ಬಾಲ್ಯ ವಿವಾಹ(ತಿದ್ದುಪಡಿ) ನಿಷೇಧ ಮಸೂದೆ, 2021ರ ಮಂಡನೆಗೆ ವಿಪಕ್ಷಗಳ ಹಲವು ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಹಲವು ವೈಯಕ್ತಿಕ ಕಾನೂನುಗಳು ಹಾಗೂ ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ಆರೋಪಿಸಿದ ಅವರು, ಹೆಚ್ಚಿನ ಪರಿಶೀಲನೆಗಾಗಿ ಸಂಸದೀಯ ಸಮಿತಿಗೆ ಮಸೂದೆ ಯನ್ನು ಒಪ್ಪಿಸಬೇಕು ಎಂದೂ ಒತ್ತಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಮಸೂದೆ ಮಂಡನೆಯಾದ ಬೆನ್ನಲ್ಲೇ ಸಚಿವೆ ಸ್ಮತಿ ಇರಾನಿ ಅವರು, ಅದನ್ನು ಸಂಸತ್‌ನ ಸ್ಥಾಯೀ ಸಮಿತಿಯ ಪರಿಶೀಲನೆಗೆ ಒಪ್ಪಿಸುವಂತೆ ಸ್ಪೀಕರ್‌ಗೆ ಮನವಿ ಮಾಡಿದ್ದಾರೆ.

ದೇಶದಲ್ಲಿ 15ರಿಂದ 18ರ ವಯೋಮಾನದ ಶೇ.7ರಷ್ಟು ಹೆಣ್ಣುಮಕ್ಕಳು ಗರ್ಭ ಧರಿಸುತ್ತಾರೆ ಮತ್ತು ಶೇ.23ರಷ್ಟು ಮಂದಿ 18ರೊಳಗೇ ವಿವಾಹವಾಗುತ್ತಾರೆ. ಹದಿಹರೆಯದ ಗರ್ಭಧಾರಣೆಗೆ ಕಡಿವಾಣ ಹಾಕಬೇಕಾದ ಅಗತ್ಯವಿದೆ ಎಂದು ಇರಾನಿ ಹೇಳಿದ್ದಾರೆ. ಆದರೆ ಇದನ್ನು ವಿರೋಧಿಸಿದ ವಿಪಕ್ಷಗಳ ಸಂಸದರು, “18 ವರ್ಷ ತುಂಬುತ್ತಲೇ ಒಬ್ಬ ಹೆಣ್ಣುಮಗಳು ದೇಶದ ಪ್ರಧಾನಿಯನ್ನು ಚುನಾಯಿಸಬಹುದು, ಸಹ ಜೀವನ ನಡೆಸಬಹುದು, ಲೈಂಗಿಕ ಸಂಬಂಧ ಹೊಂದಬಹುದು ಎಂದಾದ ಮೇಲೆ ವಿವಾಹವಾಗುವ ಆಕೆಯ ಹಕ್ಕನ್ನೇಕೆ ಕಸಿದುಕೊಳ್ಳುತ್ತೀರಿ’ ಎಂದು ಪ್ರಶ್ನಿಸಿದ್ದಾರೆ.

ಈ ನಡುವೆ ಜನನ ಮತ್ತು ಮರಣದ ದತ್ತಾಂಶವನ್ನು ಇತರ ಡೇಟಾಬೇಸ್‌ನೊಂದಿಗೆ ಲಿಂಕ್‌ ಮಾಡುವ ಅವಕಾಶವನ್ನು ಜನನ ಮತ್ತು ಮರಣ ನೋಂದಣಿ ಕಾಯ್ದೆಯ ತಿದ್ದುಪಡಿ ಕರಡಿನಲ್ಲಿ ಸೇರಿಸಲಾಗಿದೆ ಎಂದು ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ನಿತ್ಯಾನಂದ ರಾಯ್‌ ಲೋಕಸಭೆಗೆ ಮಾಹಿತಿ ನೀಡಿದ್ದಾರೆ.

ಚುನಾವಣ ಸುಧಾರಣೆ ಪಾಸ್‌; ಡೆರೆಕ್‌ ಸಸ್ಪೆಂಡ್‌
ವಿಪಕ್ಷಗಳ ಸಭಾತ್ಯಾಗದ ನಡುವೆಯೇ ಆಧಾರ್‌ ಮತ್ತು ವೋಟರ್‌ ಐಡಿ ಲಿಂಕ್‌ ಮಾಡುವ ಚುನಾ ವಣ ಕಾನೂನು ತಿದ್ದುಪಡಿ ಮಸೂದೆಯನ್ನು ರಾಜ್ಯಸಭೆಯಲ್ಲಿ ಧ್ವನಿಮತದ ಮೂಲಕ ಅಂಗೀಕರಿಸಲಾಗಿದೆ. ಸೋಮವಾರ ಇದು ಲೋಕಸಭೆಯಲ್ಲಿ ಪಾಸ್‌ ಆಗಿತ್ತು. ಮಸೂದೆಯನ್ನು ಸ್ಥಾಯಿ ಸಮಿತಿಗೆ ಒಪ್ಪಿಸಬೇಕು ಮತ್ತು ಮತ ವಿಭಜನೆ ಆಗಬೇಕು ಎಂದು ವಿಪಕ್ಷಗಳು ಆಗ್ರಹಿಸಿದವು. ಆದರೆ ಸರಕಾರ ಒಪ್ಪದ ಕಾರಣ ಆಕ್ರೋಶಗೊಂಡ ಟಿಎಂಸಿ ಸಂಸದ ಡೆರೆಕ್‌ ಒಬ್ರಿಯಾನ್‌, ಅಧಿಕಾರಿಗಳು ಕುಳಿತುಕೊಳ್ಳುವ ಮೇಜಿನತ್ತ ರೂಲ್‌ಬುಕ್‌ ಎಸೆದು ಸದನದಿಂದ ಹೊರನಡೆದರು. ಈ ದುರ್ವರ್ತನೆ ಹಿನ್ನೆಲೆಯಲ್ಲಿ ಅವರನ್ನು ಅಧಿವೇಶನದ ಮುಂದಿನ ಅವಧಿಗೆ ಅಮಾನತು ಮಾಡಲಾಯಿತು.

Advertisement

ಶಿವಾಜಿ ಪ್ರತಿಮೆ ವಿರೂಪ:
ಶಿವಸೇನೆ ಪ್ರತಿಭಟನೆ
ಲೋಕಸಭೆಯಲ್ಲಿ ವಿವಿಧ ವಿಚಾರಗಳಿಗೆ ಸಂಬಂಧಿಸಿ ವಿಪಕ್ಷಗಳ ಗದ್ದಲ ಮಂಗಳವಾರವೂ ಮುಂದುವರಿದಿದೆ. ಕರ್ನಾಟಕದಲ್ಲಿ ಶಿವಾಜಿ ಮೂರ್ತಿಗೆ ಅವಮಾನ ಮಾಡಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶಿವಸೇನೆ ಸದನದಲ್ಲಿ ಘೋಷಣೆ ಕೂಗುತ್ತಾ, ಪ್ರತಿಭಟನೆ ನಡೆಸಿದೆ. ನೀಟ್‌ನಿಂದ ತಮಿಳುನಾಡಿಗೆ ವಿನಾಯಿತಿ ನೀಡಬೇಕು ಎಂದು ಡಿಎಂಕೆ, ಕೇಂದ್ರ ಸಚಿವ ಅಜಯ್‌ ಮಿಶ್ರಾರನ್ನು ವಜಾ ಮಾಡಬೇಕೆಂದು ಒತ್ತಾಯಿಸಿ ಕಾಂಗ್ರೆಸ್‌ ಗದ್ದಲವೆಬ್ಬಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next