Advertisement

ಅಶಕ್ತರ ಸೇವೆಯಿಂದ ಭಗವಂತನ ಕೃಪೆ : ಸಚಿವ ಖಾದರ್‌

05:16 AM Feb 18, 2019 | Team Udayavani |

ಮಹಾನಗರ: ಸಮಾಜದಲ್ಲಿ ಅಶಕ್ತರ, ನಿರ್ಗತಿಕರ ಸೇವೆ ಭಗವಂತನು ಮೆಚ್ಚುವ ಕಾರ್ಯ. ಮನೋರೋಗಿಗಳು, ನಿರ್ಗತಿಕರ ಸೇವೆಯ ಮೂಲಕ ವೈಟ್‌ ಡೌಸ್‌ ಸಂಸ್ಥೆ ಇಂತಹ ಉದಾತ್ತ ಕಾರ್ಯ ಮಾಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಹೇಳಿದರು.

Advertisement

ಮರೋಳಿಯಲ್ಲಿ ವೈಟ್‌ ಡೌಸ್‌ ವತಿಯಿಂದ ನಿರ್ಮಿಸಲಾಗಿರುವ ಮನೋ ರೋಗಿಗಳ ಶುಶ್ರೂಷೆ, ನಿರಾಶ್ರಿತರ ಆಶ್ರಯ ತಾಣ ಉದ್ಘಾಟನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೈಟ್‌ಡೌಸ್‌ ಸಂಸ್ಥೆ ಸುಸಜ್ಜಿತ ಹಾಗೂ ಉತ್ತಮ ಸೌಲಭ್ಯಗಳಿಂದ ಕೂಡಿದ ಕಟ್ಟಡ ನಿರ್ಮಿಸಿ ಸಮಾಜದಲ್ಲಿ ನಿರ್ಗತಿಕ ಮನೋರೋಗಿಗಳಿಗೆ, ಆಶ್ರಯ ವಂಚಿತರಿಗೆ ಆಶ್ರಯ ಕಲ್ಪಿಸಿ ಅವರಿಗೆ ಹೊಸ ಬದುಕು ಕಟ್ಟಿಕೊಡುವ ಕಾರ್ಯ ಮಾಡುತ್ತಿದೆ. ಇಂತಹ ಕಾರ್ಯಕ್ಕೆ ಸರಕಾರ, ಸಮಾಜ ಕೈಜೋಡಿಸಬೇಕು ಎಂದರು. ವಿಶ್ರಾಂತ ಬಿಷಪ್‌ ಡಾ| ಅಲೋಶಿಯಸ್‌ ಪಾವ್ಲ್  ಡಿ’ಸೋಜಾ ಆಶೀರ್ವಚನ ನೀಡಿದರು. ಅಶಕ್ತರು, ನಿರಾಶ್ರಿತರ ಸೇವೆಯಲ್ಲಿ ದೇವರನ್ನು ಕಾಣುವ ವೈಟ್‌ಡೌಸ್‌ ಸಂಸ್ಥೆ ಹಾಗೂ ದಾನಿಗಳು, ಸೇವಾ ನಿರತರನ್ನು ದೇವರು ಹರಸಲಿ ಎಂದರು.

ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿ ಐವನ್‌ ಡಿ’ಸೋಜಾ ಶುಭ ಹಾರೈಸಿದರು. ದಾನಿಗಳಾದ ಲೆಸ್ಲಿ ಫೆರ್ನಾಂಡಿಸ್‌ ಶುಶ್ರೂಷೆ, ನಿರಾಶ್ರಿತರ ಆಶ್ರಯತಾಣವನ್ನು ಹಾಗೂ ರೋನಿ ಪಿಂಟೋ ಪ್ರಾರ್ಥನಾ ಗೃಹವನ್ನು ಉದ್ಘಾಟಿಸಿದರು. ಶಾಸಕ ವೇದವ್ಯಾಸ ಕಾಮತ್‌, ಮಾಜಿ ಶಾಸಕ ಜೆ.ಆರ್‌. ಲೋಬೋ, ಡಿಸಿ ಶಶಿಕಾಂತ್‌ ಸೆಂಥಿಲ್‌, ದಾನಿ ಬೆನೆಡಿಕ್ಟ್ ಬರ್ಬೊಜಾ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಲ್ಲನಗೌಡ ಪಾಟೀಲ್‌ ಅತಿಥಿಗಳಾಗಿದ್ದರು.

ವೈಟ್‌ಡೌವ್ಸ್‌ ಸ್ಥಾಪಕಿ ಕೊರಿನ್‌ ರಸ್ಕಿನ್ಹಾ ಅವರು ಪ್ರಸ್ತಾವಿಸಿ, ಮರೋಳಿಯಲ್ಲಿ 8 ಕೋ.ರೂ. ವೆಚ್ಚದಲ್ಲಿ ದಾನಿಗಳ ನೆರವಿನೊಂದಿಗೆ ನಿರ್ಮಾಣವಾಗಿರುವ ವೈಟ್‌ಡೌಸ್‌ ಮನೋರೋಗಿಗಳ ಶುಶ್ರೂಷೆ ಹಾಗೂ ನಿರಾಶ್ರಿತರ ಆಶ್ರಯತಾಣ 43 ಸಾವಿರ ಚ. ಅಡಿಯ ವಿಸ್ತೀರ್ಣ ಹೊಂದಿದ್ದು 200 ಹಾಸಿಗೆಗಳನ್ನು ಒಳಗೊಂಡಿದೆ. ಫಿಸಿಯೋಥೆರಪಿ, ವಿವಿಧ ಚಿಕಿತ್ಸೆ, ವ್ಯಾಯಾಮ, ಮನೋರಂಜನೆ ಸಹಿತ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಇಲ್ಲಿ 600ಕ್ಕೂ ಹೆಚ್ಚು ಮಂದಿ ಉಚಿತ ಸೂರು, ವಸತಿ, ವಿದ್ಯೆ, ಆಹಾರ ಸೇವೆಗಳನ್ನು ಪಡೆದಿದ್ದಾರೆ. ಕೆಲವರು ಸ್ನಾತಕೋತ್ತರ ಪದವಿ, ವಿವಿಧ ಉದ್ಯೋಗಗಳನ್ನು ಗಿಟ್ಟಿಸಿಕೊಂಡು ಜೀವನ ರೂಪಿಸುತ್ತಿದ್ದಾರೆ. ಮಾನಸಿಕ ಕಾಯಿಲೆ ಅಥವಾ ಇನ್ನಿತರ ಕಾರಣಗಳಿಗಾಗಿ ಮನೆಬಿಟ್ಟು ಬಂದವರು, ಇಲ್ಲಿ ಚಿಕಿತ್ಸೆ ಪಡೆದುಕೊಂಡ ಬಳಿಕ ವಿಳಾಸ ಸಿಕ್ಕಿದಲ್ಲಿ ಮತ್ತೆ ಮನೆಗೆ ಕಳುಹಿಸಲಾಗುತ್ತದೆ ಎಂದರು. ಟ್ರಸ್ಟಿಗಳಾದ ವೈಟಸ್‌ ರಸ್ಕಿನ್ನಾ, ಜೆರೋಮ್‌ ಕುವೆಲ್ಲೊ, ಸುನಿಲ್‌ ಬಾಳಿಗಾ, ಜೆರಾಲ್ಡ್‌ ಫೆರ್ನಾಂಡಿಸ್‌ ಉಪಸ್ಥಿತರಿದ್ದರು.

Advertisement

ಅನುದಾನಕ್ಕೆ ಸರಕಾರಕ್ಕೆ ಶಿಫಾರಸ್ಸು
‌ಸಮಾಜದಲ್ಲಿ ನಿರ್ಗತಿಕರು, ಅಸಹಾಯಕರಿಗೆ ನೆರವು ಹಾಗೂ ಆಶ್ರಯ ಕಲ್ಪಿಸುವುದು ಸರಕಾರ ಮಾಡಬೇಕಾದ ಕೆಲಸ. ಈ ಕೆಲಸವನ್ನು ವೈಟ್‌ ಡೌಸ್‌ ಸಂಸ್ಥೆ ಮಾಡುತ್ತಿದೆ. ಇದಕ್ಕೆ ಅನುದಾನ ಒದಗಿಸುವಂತೆ ಮುಖ್ಯಮಂತ್ರಿಯವರಿಗೆ ತಾನು ಮತ್ತು ಇಲ್ಲಿಯ ಶಾಸಕರು ಸೇರಿ ಸರಕಾರಕ್ಕೆ ಮನವಿ ಮಾಡುತ್ತೇವೆ. ಇದಲ್ಲದೆ ಮನೆ, ನಿವೇಶನ ವಂಚಿತರಿಗೆ ಮನೆಗಳನ್ನು ನಿರ್ಮಿಸಿಕೊಡುವ ನಿಟ್ಟಿನಲ್ಲಿ ಶೀಘ್ರದಲ್ಲೇ ನೀತಿಯೊಂದನ್ನು ರೂಪಿಸಲಾಗುವುದು ಎಂದು ಸಚಿವ ಯು.ಟಿ.ಖಾದರ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next