ಲಂಡನ್: ಶಾಲೆಗೆ ಹೋಗುವ ಗಡಿಬಿಡಿ.. ಇನ್ನೂ ಬಟ್ಟೆ ಹಾಕ್ಕೊಂಡಿಲ್ಲ, ಮಧ್ಯಾಹ್ನ ಬುತ್ತಿಗೆ ಹಾಕಿಲ್ಲ.. ಅಯ್ಯೋ.. ಬಸ್ ಬಂತೂ.. ಅನ್ನುತ್ತಾ ಮಕ್ಕಳು ಗಡಿಬಿಡಿ ಮಾಡ್ಕೊಂಡು ಬೆಳಗ್ಗಿನ ಉಪಾಹಾರ ಬಿಟ್ಟು ಶಾಲೆಗೆ ಹೋಗುತ್ತಿದ್ದರೆ, ಹೆತ್ತವರೇ ಹುಷಾರು!
ಬೆಳಗ್ಗಿನ ಉಪಾಹಾರವನ್ನು ಬಿಡುವುದರಿಂದ ಅದರ ಪರಿಣಾಮ ಮಕ್ಕಳು ಗಳಿಸುವ ಅಂಕ ಅರ್ಥಾತ್ ಕಲಿಕೆಯ ಮೇಲಾಗುತ್ತದೆ ಎಂದು ಸಂಶೋಧನೆಯೊಂದು ಹೇಳಿದೆ.
ಬೆಳಗ್ಗೆ ತಿಂಡಿ ತಿನ್ನುವುದು ಅತಿ ಅಗತ್ಯ. ಇದು ಮೆದುಳಿನ ಆಹಾರವಾಗಿದ್ದು, ಕಾರ್ಯಚಟುವಟಿಕೆ ಉತ್ತಮವಾಗಿರಲು ನೆರವು ನೀಡುತ್ತದೆ. ಉಪಾಹಾರ ತಿನ್ನದಿದ್ದರೆ, ಮಕ್ಕಳ ಓದುವಿಕೆ ಸಾಮರ್ಥ್ಯ, ನೆನಪಿನ ಶಕ್ತಿ ಕುಂಠಿತಗೊಳ್ಳುತ್ತದೆ ಎಂದು ಲೀಡ್ಸ್ ವಿವಿಯ ಸಂಶೋಧಕ ತಂಡ ಶೋಧನೆ ನಡೆಸಿ ಹೇಳಿದೆ. ಇದನ್ನು ಜರ್ನಲ್ ಫ್ರಾಂಟಿಯರ್ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ.
ಉಪಾಹಾರ ತ್ಯಜಿಸಿದ ಕೂಡಲೇ ಮಕ್ಕಳಿಗೆ ಪೋಷಕಾಂಶಗಳ ಕೊರತೆ ಉಂಟಾಗುತ್ತದೆ ಎಂದು ತಿಳಿದು ಬಂದಿದೆ. ಸಂಶೋಧನೆಗೆ 294 ವಿದ್ಯಾರ್ಥಿಗಳನ್ನು ಪರಿಶೀಲಿಸಲಾಗಿದ್ದು, ಇವರಲ್ಲಿ ಶೇ.29ರಷ್ಟು ಮಂದಿ ಬೆಳಗ್ಗೆ ಉಪಾಹಾರ ಸೇವಿಸದವರಾಗಿದ್ದು ಶೇ.18ರಷ್ಟು ಮಂದಿ ಅಪರೂಪಕ್ಕೊಮ್ಮೆ, ಶೇ.53ರಷ್ಟು ಮಂದಿ ಯಾವತ್ತೂ ಉಪಾಹಾರ ಸೇವಿಸುವವರಾಗಿದ್ದಾರೆ. ಇವರನ್ನು ಸಂಶೋಧನೆಗೊಳಪಡಿಸಿದಾಗ ಗಳಿಸುವ ಅಂಕದಲ್ಲಿ ವ್ಯತ್ಯಾಸವಿರುವುದು ಗೋಚರವಾಗಿದೆ. ಗ್ರೇಡ್‌ಗಳಲ್ಲಿ ಇಳಿಕೆ ಕಂಡುಬಂದಿದೆ ಎಂದು ಸಂಶೋಧಕರು ಹೇಳಿದ್ದಾರೆ.