ಮುಂಬಯಿ : ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಭರ್ಜರಿ ಮುನ್ನಡೆ ಸಾಧಿಸುತ್ತಿದ್ದಂತೆಯೇ ಬೆಳಗ್ಗಿನ ವಹಿವಾಟಿನಲ್ಲಿ 900 ಅಂಕಗಳ ಬೃಹತ್ ಏರಿಕೆಯನ್ನು ದಾಖಲಿಸಿದ್ದ ಮುಂಬಯಿ ಶೇರು ಪೇಟೆ, ಭರಾಟೆಯ ಲಾಭ ನಗದೀಕರಣದ ಶೇರು ಮಾರಾಟದ ಒತ್ತಡಕ್ಕೆ ಮಣಿದು ಇಂದು ಗುರುವಾರದ ವಹಿವಾಟನ್ನು 298.82 ಅಂಕಗಳ ನಷ್ಟದೊಂದಿಗೆ 38,811.39 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 80.85 ಅಂಕಗಳ ನಷ್ಟದೊಂದಿಗೆ ದಿನದ ವಹಿವಾಟನ್ನು11,657.05 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇಂದಿನ ಬೆಳಗ್ಗಿನ ವಹಿವಾಟನಲ್ಲಿ ಸೆನ್ಸೆಕ್ಸ್ 40,000 ಅಂಕಗಳ ದಾಖಲೆಯ ಮಟ್ಟವನ್ನು ತಲುಪಿತ್ತು. ಅಂತೆಯೇ ನಿಫ್ಟಿ 12,000 ಅಂಕಗಳ ಮಟ್ಟವನ್ನು ದಾಟಿತ್ತು.
ಇಂದಿನ ವಹಿವಾಟಿನ ಅತೀ ದೊಡ್ಡ ಗೇನರ್ ಇಂಡಸ್ ಇಂಡ್ ಬ್ಯಾಂಕ್ ಶೇ.5.23ರ ಏರಿಕೆಯನ್ನು ಕಂಡಿತು. ಉಳಿದಂತೆ ಹೀರೊ ಮೋಟೋ ಕಾರ್ಪ್, ಕೋಲ್ ಇಂಡಿಯಾ, ಎಸ್ ಬ್ಯಾಂಕ್, ಪವರ್ ಗ್ರಿಡ್, ಐಸಿಐಸಿಐ ಬ್ಯಾಂಕ್, ಎಚ್ ಸಿ ಎಲ್ ಟೆಕ್, ಲಾರ್ಸನ್, ಕೋಟಕ್ ಬ್ಯಾಂಕ್ ಮತ್ತು ಭಾರ್ತಿ ಏರ್‌ಟೆಲ್ ಶೇರುಗಳು ಶೇ.1.56ರ ಏರಿಕೆಯನ್ನು ಕಂಡವು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,867 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,186 ಶೇರುಗಳು ಮುನ್ನಡೆ ಸಾಧಿಸಿದವು; 1,325 ಶೇರುಗಳು ಹಿನ್ನಡೆಗೆ ಗುರಿಯಾದವು; 176 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.
ಡಾಲರ್ ಎದುರು ರೂಪಾಯಿ ಇಂದು 37 ಪೈಸೆಗಳ ಕುಸಿತವನ್ನು ಕಂಡು 70.04 ರೂ. ಮಟ್ಟಕ್ಕೆ ಇಳಿಯಿತು. ಬ್ರೆಂಟ್ ಕಚ್ಚಾತೈಲ ಇಂದು ಶೇ.1.79ರ ಇಳಿಕೆಗೆ ಗುರಿಯಾಗಿ ಬ್ಯಾರಲ್ ಗೆ 69.72 ಡಾಲರ್ ಮಟ್ಟದಲ್ಲಿ ಬಿಕರಿಯಾಗುತ್ತಿತ್ತು.